
ಪೌರಾಣಿಕ ಕಥಾಹಂದರ ಇರುವ ‘ಕಣ್ಣಪ್ಪ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರುತ್ತಿದೆ. ಈ ಸಿನಿಮಾದಲ್ಲಿ ಕಣ್ಣಪ್ಪನ ಪಾತ್ರವನ್ನು ಟಾಲಿವುಡ್ ನಟ ವಿಷ್ಣು ಮಂಚು ಅವರು ಮಾಡುತ್ತಿದ್ದಾರೆ. ಅಲ್ಲದೇ ಅನೇಕ ಘಟಾನುಘಟಿ ಸ್ಟಾರ್ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪ್ರಭಾಸ್ ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ ಎಂಬುದು ವಿಶೇಷ. ಇಷ್ಟು ದಿನಗಳ ತನಕ ಪ್ರಭಾಸ್ ಅವರ ಲುಕ್ ಬಹಿರಂಗ ಆಗಿರಲಿಲ್ಲ. ಈಗ ‘ಕಣ್ಣಪ್ಪ’ ಚಿತ್ರದಿಂದ ಪ್ರಭಾಸ್ ಅವರ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.
ಹಲವು ಕಾರಣಗಳಿಂದಾಗಿ ‘ಕಣ್ಣಪ್ಪ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ದಕ್ಷಿಣ ಭಾರತದ ಹಲವು ಸ್ಟಾರ್ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಪ್ರಭಾಸ್ ಅವರ ಪಾತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ. ಅವರು ಈ ಸಿನಿಮಾದಲ್ಲಿ ರುದ್ರನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರದ ಪೋಸ್ಟರ್ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ರುದ್ರನ ಪಾತ್ರದಲ್ಲಿ ಪ್ರಭಾಸ್ ಅವರು ರಗಡ್ ಆಗಿ ಪೋಸ್ ನೀಡಿದ್ದಾರೆ.
ಈ ಸಿನಿಮಾವನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕಟ್ಟಿಕೊಡುವಲ್ಲಿ ಚಿತ್ರತಂಡ ನಿರತವಾಗಿದೆ. ಪ್ರಭಾಸ್ ಲುಕ್ ಹೀಗಿದೆ.. ಹರಡಿದ ತಲೆಗೂದಲು, ಕೈಯಲ್ಲಿ ಅರ್ಧ ಚಂದ್ರಾಕೃತಿಯ ಕೋಲು ಹಿಡಿದು ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಕೊರಳಲ್ಲಿ ರುದ್ರಾಕ್ಷಿ ಮಾಲೆ ಇದೆ. ಹೆಗಲಿಗೆ ಕೇಸರಿ ವಸ್ತ್ರವನ್ನು ಹೊದ್ದಿದ್ದಾರೆ. ಹಣೆಯಲ್ಲಿ ವಿಭೂತಿ, ಮುಖದಲ್ಲಿ ಮಂದಹಾಸದೊಂದಿಗೆ ಪ್ರಭಾಸ್ ಅವರು ಕಾಣಿಸಿಕೊಂಡಿದ್ದು, ಈ ಲುಕ್ ವೈರಲ್ ಆಗುತ್ತಿದೆ.
ಮುಖೇಶ್ ಕುಮಾರ್ ಸಿಂಗ್ ಅವರು ಕಣ್ಣಪ್ಪ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಬಹುಕೋಟಿ ವೆಚ್ಚದಲ್ಲಿ ವಿಷ್ಣು ಮಂಚು ಅವರ ತಂದೆ ಮೋಹನ್ ಬಾಬು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶಿವನ ಪಾತ್ರವನ್ನು ಅಕ್ಷಯ್ ಕುಮಾರ್ ಮಾಡುತ್ತಿದ್ದಾರೆ. ಅವರ ಪೋಸ್ಟರ್ ಕೂಡ ಬಿಡುಗಡೆ ಆಗಿ ಹೈಪ್ ಸೃಷ್ಟಿ ಮಾಡಿತ್ತು. ‘ಕಣ್ಣಪ್ಪ’ ಮೂಲಕ ಅಕ್ಷಯ್ ಕುಮಾರ್ ಅವರು ತೆಲುಗು ಚಿತ್ರಕ್ಕೆ ಎಂಟ್ರಿ ನೀಡುತ್ತಿದ್ದಾರೆ.
ಇದನ್ನೂ ಓದಿ: ಪ್ರಭಾಸ್ ಮೇಲೆ ಹೆವಿ ಲವ್ ಅಂತೆ ಈ ಸುಂದರ ನಟಿಗೆ
2025ರ ಏಪ್ರಿಲ್ 25ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಕಣ್ಣಪ್ಪ’ ರಿಲೀಸ್ ಆಗಲಿದೆ. ಕಾನ್ ಚಿತ್ರೋತ್ಸವದಲ್ಲಿ ‘ಕಣ್ಣಪ್ಪ’ ಸಿನಿಮಾದ ಟೀಸರ್ ಬಿತ್ತರ ಆಗಿತ್ತು. ಸಿನಿಮಾದ ಮೇಕಿಂಗ್ ಗಮನ ಸೆಳೆಯುತ್ತಿದೆ. ವಿಷ್ಣು ಮಂಚು ಜೊತೆ ಪ್ರೀತಿ ಮುಕುಂದನ್, ಅಕ್ಷಯ್ ಕುಮಾರ್, ಮೋಹನ್ ಲಾಲ್, ಕಾಜಲ್ ಅಗರ್ವಾಲ್, ಪ್ರಭಾಸ್ ಸೇರಿದಂತೆ ಹಲವು ಸ್ಟಾರ್ ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.