ಹಲವು ವರ್ಷಗಳಿಂದಲೂ ಪ್ರಭಾಸ್ ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಾ ಬರುತ್ತಿದ್ದಾರೆ. ಒಂದು ಸಮಯದಲ್ಲಿ ಒಂದು ಸಿನಿಮಾದಲ್ಲಿ ಮಾತ್ರ ನಟಿಸುತ್ತಾರೆ ಪ್ರಭಾಸ್. ಆದರೆ 2023 ರಲ್ಲಿ ಈ ನಿಯಮ ಮುರಿದು ಒಂದೇ ವರ್ಷದಲ್ಲಿ ಪ್ರಭಾಸ್ರ ಎರಡು ಸಿನಿಮಾಗಳು ಬಿಡುಗಡೆ ಆದವು. ಆ ಬಳಿಕ 2024 ರಲ್ಲಿ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಒಂದೇ ಸಿನಿಮಾ ಬಿಡುಗಡೆ ಆಯ್ತು. ಆದರೆ 2025 ರಲ್ಲಿ ಪ್ರಭಾಸ್ ನಟನೆಯ ಎರಡು ಸಿನಿಮಾ ಬಿಡುಗಡೆ ಆಗುವ ನಿರೀಕ್ಷೆ ಇತ್ತು. ಮುಂದಿನ ಸಿನಿಮಾಗಳ ಲೈನ್ ಅಪ್ಸಹ ಹಾಗೆಯೇ ಇತ್ತು. ಆದರೆ ಈಗ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ.
ಪ್ರಭಾಸ್ ನಟನೆಯ ಹಾರರ್ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ‘ದಿ ರಾಜಾ ಸಾಬ್’ ಸಿನಿಮಾ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿಕ್ಕಿತ್ತು. ಏಪ್ರಿಲ್ 10 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ ಎಂದು ಅನಧಿಕೃತ ಘೊಷಣೆಯೂ ಆಗಿತ್ತು. ಚಿತ್ರತಂಡವೇ ಏಪ್ರಿಲ್ 10ರ ದಿನಾಂಕವನ್ನು ಘೋಷಿಸಿತ್ತು. ಆದರೆ ಈಗ ಹಠಾತ್ತನೆ ಚಿತ್ರತಂಡ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಗೆ ಹೆಚ್ಚು ಸಮಯ ನೀಡಬೇಕಾಗಿ ಬಂದಿರುವ ಕಾರಣ ಸಿನಿಮಾದ ಬಿಡುಗಡೆ ಮುಂದೂಡಲಾಗಿದೆಯಂತೆ.
ಸಿನಿಮಾದಲ್ಲಿ ಸಾಕಷ್ಟು ವಿಎಫ್ಎಕ್ಸ್ ಮತ್ತು ಗ್ರಾಫಿಕ್ಸ್ ಬಳಕೆ ಮಾಡಲಾಗಿದ್ದು, ಇದಕ್ಕೆ ಹೆಚ್ಚಿನ ಸಮಯದ ಅಗತ್ಯತೆ ಇರುವ ಕಾರಣ ಹಾಗೂ ಆತುರದಲ್ಲಿ ಸಿನಿಮಾ ಬಿಡುಗಡೆ ಬೇಡವೆಂದು ಖುದ್ದು ಪ್ರಭಾಸ್ ಅಭಿಪ್ರಾಯ ವ್ಯಕ್ತಪಡಿಸಿರುವ ಕಾರಣ ಸಿನಿಮಾದ ಬಿಡುಗಡೆ ದಿನಾಂಕ ಬದಲಾಯಿಸಲಾಗಿದೆಯಂತೆ. ಅಂದುಕೊಂಡ ದಿನಾಂಕಕ್ಕಿಂತಲೂ ಕನಿಷ್ಟ ಮೂರು ತಿಂಗಳು ತಡವಾಗಿ ‘ದಿ ರಾಜಾ ಸಾಬ್’ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ವಿದೇಶದಲ್ಲಿ ನಡೆಯಲಿದೆ ಪ್ರಭಾಸ್ ಹೊಸ ಸಿನಿಮಾದ ಆಡಿಯೋ ಬಿಡುಗಡೆ
‘ದಿ ರಾಜಾ ಸಾಬ್’ ಸಿನಿಮಾವನ್ನು ಮಾರುತಿ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಪ್ರಭಾಸ್ ಎರಡು ಷೇಡ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಮಾಳವಿಕಾ ಮೋಹನನ್ ನಾಯಕಿ. ಸಿನಿಮಾ ಹಾರರ್ ಮತ್ತು ರೊಮ್ಯಾಂಟಿಕ್ ಕತೆಯನ್ನು ಒಳಗೊಂಡಿದೆ. ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಜಪಾನ್ ದೇಶದಲ್ಲಿ ಅದ್ಧೂರಿಯಾಗಿ ಮಾಡಲು ಈಗಾಗಲೇ ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಸಿನಿಮಾದ ಎಲ್ಲ ಹಾಡುಗಳು ಈಗಾಗಲೇ ರೆಡಿಯಾಗಿವೆ ಎಂದು ಸಂಗೀತ ನಿರ್ದೇಶಕ ಎಸ್ ತಮನ್ ಹೇಳಿದ್ದಾರೆ.
ಪ್ರಭಾಸ್ ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ. ‘ರಾಜಾ ಸಾಬ್’, ‘ಸಲಾರ್ 2’, ರಘು ಹನುಪುಡಿಯ ಹೊಸ ಸಿನಿಮಾ, ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಲಿರುವ ‘ಸ್ಪಿರಿಟ್’ ಇವುಗಳ ಜೊತೆಗೆ ಹೊಂಬಾಳೆ ನಿರ್ಮಾಣ ಮಾಡಲಿರುವ ಎರಡು ಸಿನಿಮಾಗಳಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಸಾಕಷ್ಟು ಸಿನಿಮಾಗಳು ಪ್ರಭಾಸ್ ಕೈಯಲ್ಲಿವೆ ಆದರೆ ಸಿನಿಮಾ ಬಿಡುಗಡೆ ಮಾತ್ರ ತಡವಾಗುತ್ತಲೇ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ