ಪ್ರಭಾಸ್ ನಟನೆಯ ಎರಡು ಸಿನಿಮಾಗಳ ಮರು ಬಿಡುಗಡೆ

|

Updated on: Aug 20, 2024 | 7:27 AM

Prabhas movie re release: ತೆಲುಗಿನಲ್ಲಿ ಸಿನಿಮಾಗಳ ಮರು ಬಿಡುಗಡೆ ಟ್ರೆಂಡ್ ಜೋರಾಗಿ ನಡೆಯುತ್ತಿದ್ದು, ಪ್ರಭಾಸ್ ನಟನೆಯ ಎರಡು ಸಿನಿಮಾಗಳು ಮರು ಬಿಡುಗಡೆ ಆಗುತ್ತಿವೆ.

ಪ್ರಭಾಸ್ ನಟನೆಯ ಎರಡು ಸಿನಿಮಾಗಳ ಮರು ಬಿಡುಗಡೆ
Follow us on

ತೆಲುಗು ಚಿತ್ರರಂಗದಲ್ಲಿ ಈಗ ಸಿನಿಮಾಗಳ ಮರು ಬಿಡುಗಡೆ ಟ್ರೆಂಡ್ ಬಲು ಜೋರಾಗಿ ನಡೆಯುತ್ತಿವೆ. ಎಲ್ಲ ಸ್ಟಾರ್ ನಟರ ಸಿನಿಮಾಗಳು ಮರು ಬಿಡುಗಡೆ ಆಗುತ್ತಿವೆ. ಮಾತ್ರವಲ್ಲದೆ ಭರ್ಜರಿ ಕಲೆಕ್ಷನ್ ಅನ್ನು ಸಹ ಮಾಡುತ್ತಿವೆ. ಮರು ಬಿಡುಗಡೆ ಆಗುತ್ತಿರುವ ಸಿನಿಮಾಗಳು ಸಹ ಒಂದೇ ವಾರದಲ್ಲಿ ಐದಾರು ಕೋಟಿ ರೂಪಾಯಿ ಹಣ ಗಳಿಸುತ್ತಿವೆ. ಅದೂ ಕೆಲವೇ ಚಿತ್ರಮಂದಿರಗಳಿಂದ. ಮರು ಬಿಡುಗಡೆ ಟ್ರೆಂಡ್ ನ ಲಾಭವನ್ನು ಚೆನ್ನಾಗಿ ಪಡೆದುಕೊಳ್ಳುತ್ತಿರುವ ನಿರ್ಮಾಪಕರು ಸ್ಟಾರ್ ನಟರ ಸಿನಿಮಾಗಳನ್ನು ಒಂದರ ಹಿಂದೊಂದು ವಿನಾಕಾರಣ ಬಿಡುಗಡೆ ಮಾಡುತ್ತಿದ್ದಾರೆ. ಇದೀಗ ಸ್ಟಾರ್ ನಟ ಪ್ರಭಾಸ್​ರ ಎರಡು ಸಿನಿಮಾಗಳನ್ನು ಮರು ಬಿಡುಗಡೆ ಮಾಡಲು ಮುಂದಾಗಿದ್ದಾರೆ ನಿರ್ಮಾಪಕರು.

ಅಕ್ಟೋಬರ್ ತಿಂಗಳಲ್ಲಿ ನಟ ಪ್ರಭಾಸ್ ಹುಟ್ಟುಹಬ್ಬವಿದೆ. ಆದರೆ ಅದಕ್ಕೆ ಮುಂಚೆಯೇ ಅವರ ನಟನೆಯ ಸಿನಿಮಾಗಳ ಮರು ಬಿಡುಗಡೆಗೆ ಯೋಜನೆ ಹಾಕಲಾಗಿದೆ. ಪದೇ ಪದೇ ಟಿವಿಗಳಲ್ಲಿ ಪ್ರಸಾರವಾಗಿರುವ ಅವರ ರೋಮ್-ಕಾಮ್ ಸಿನಿಮಾ ಎರಡನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ಪ್ರಭಾಸ್​ಗೆ ದೊಡ್ಡ ಅಭಿಮಾನಿ ವರ್ಗವಿದ್ದು ಅವರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಾರೆ ಎಂಬ ನಂಬಿಕೆ ಅವರದ್ದು.

ಇದನ್ನೂ ಓದಿ:‘ಸೀತಾರಾಮಂ’ ನಿರ್ದೇಶಕನೊಟ್ಟಿಗೆ ಕೈಜೋಡಿಸಿದ ಪ್ರಭಾಸ್, ಸೆಟ್ಟೇರಿತು ಹೊಸ ಸಿನಿಮಾ

ಮುಂದಿನ ತಿಂಗಳ ಅಂದರೆ ಸೆಪ್ಟೆಂಬರ್ 23 ರಂದು ಪ್ರಭಾಸ್ ನಟನೆಯ ‘ಡಾರ್ಲಿಂಗ್’ ಸಿನಿಮಾ ಮರು ಬಿಡುಗಡೆ ಆಗಲಿದೆ. 2010 ರಲ್ಲಿ ಬಿಡುಗಡೆ ಆಗಿದ್ದ ‘ಡಾರ್ಲಿಂಗ್’ ಸಿನಿಮಾ ಕಾಮಿಡಿ-ರೊಮ್ಯಾನ್ಸ್ ಮತ್ತು ಆಕ್ಷನ್ ಹೊಂದಿದ್ದ ಸಿನಿಮಾ ಆಗಿತ್ತು. ಸಿನಿಮಾದಲ್ಲಿ ನಟಿ ಕಾಜೊಲ್ ನಾಯಕಿಯಾಗಿ ನಟಿಸಿದ್ದರು. ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಯಶಸ್ಸು ಗಳಿಸಿತ್ತು. ಸಿನಿಮಾದ ಕಾಮಿಡಿ ಮತ್ತು ಹಾಡುಗಳು ಬಹುಕಾಲ ನೆನಪುಳಿಯುವಂತಿತ್ತು. ಇದೀಗ ಈ ಸಿನಿಮಾ ಸೆಪ್ಟೆಂಬರ್ 23 ಕ್ಕೆ ಮರು ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು ಕನ್ನಡದಲ್ಲಿ ನಟ ದರ್ಶನ್ ರೀಮೇಕ್ ಸಹ ಮಾಡಿದ್ದರು.

ಇನ್ನು ಪ್ರಭಾಸ್ ಹುಟ್ಟುಹಬ್ಬಕ್ಕೆ ಅಂದರೆ ಅಕ್ಟೋಬರ್ 23 ಕ್ಕೆ ಪ್ರಭಾಸ್​ರ ಮೊಟ್ಟ ಮೊದಲ ಸಿನಿಮಾ ‘ಈಶ್ವರ್’ ಮರು ಬಿಡುಗಡೆ ಆಗಲಿದೆ. ಬಡ ಯುವಕನೊಬ್ಬನ ಕತೆಯನ್ನು ಒಳಗೊಂಡಿದೆ. ‘ಈಶ್ವರ್’ ಪ್ರಭಾಸ್ ನಟನೆಯ ಮೊದಲ ಸಿನಿಮಾ, 2002 ರಲ್ಲಿ ಬಿಡುಗಡೆ ಆಗಿದ್ದ ‘ಈಶ್ವರ್’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಡ ಯುವಕನೊಬ್ಬ ಶ್ರೀಮಂತ ಯುವತಿಯನ್ನು ಪ್ರೀತಿಸಿ ತನ್ನ ಪ್ರೀತಿಯನ್ನು ಗೆಲುವು ಪಡೆದುಕೊಳ್ಳುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಇದು ಪ್ರಭಾಸ್ ನಟನೆಯ ಮೊಟ್ಟ ಮೊದಲ ಸಿನಿಮಾ.

ಪ್ರಭಾಸ್ ಪ್ರಸ್ತುತ ‘ರಾಜಾ ಡಿಲಕ್ಸ್’, ಸಂದೀಪ್ ರೆಡ್ಡಿ ವಂಗಾ ನಟನೆಯ ‘ಸ್ಪಿರಿಟ್’, ರಘು ಹನುಪುಡಿ ನಿರ್ದೇಶನದ ಹೊಸ ಸಿನಿಮಾ, ‘ಕಲ್ಕಿ 2’ ಹಾಗೂ ‘ಸಲಾರ್ 2’ ಸಿನಿಮಾಗಳಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ