‘ಸಲಾರ್’ ಗೆಳೆಯ ‘ವರದ’ನಿಗೆ ಶುಭಾಶಯ ತಿಳಿಸಿದ ‘ದೇವ’ ಪ್ರಭಾಸ್
Aadujeevitham: ಪೃಥ್ವಿರಾಜ್ ಸುಕುಮಾರನ್ ನಟಿಸಿರುವ ‘ಆಡುಜೀವಿತಂ’ ಸಿನಿಮಾಕ್ಕೆ ಆಪ್ತ ಗೆಳೆಯ ಪ್ರಭಾಸ್ ಶುಭಾಶಯ ತಿಳಿಸಿದ್ದಾರೆ.
ಪೃಥ್ವಿರಾಜ್ ಸುಕುಮಾರನ್ (Pruthviraj Sukumaran) ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ‘ಆಡುಜೀವಿತಂ’ ಇಂದು ಬಿಡುಗಡೆ ಆಗಿದೆ. ಈ ಸಿನಿಮಾಕ್ಕಾಗಿ ಪೃಥ್ವಿರಾಜ್ ತಮ್ಮ ಜೀವನದ ಸುಮಾರು ಆರೇಳು ವರ್ಷಗಳನ್ನು ಸವೆಸಿದ್ದಾರೆ. ಈ ಸಿನಿಮಾದ ನಿರ್ದೇಶಕ ಬ್ಲೆಸ್ಸಿ ಅಂತೂ ಬರೋಬ್ಬರಿ 16 ವರ್ಷಗಳ ಕಾಲ ಈ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ಇದೀಗ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಹಲವು ಸಿನಿಮಾ ಸೆಲೆಬ್ರಿಟಿಗಳು ಈಗಾಗಲೇ ಸಿನಿಮಾದ ವಿಶೇಷ ಶೋ ನೋಡಿ ಮೆಚ್ಚಿಕೊಂಡಿದ್ದಾರೆ. ‘ಸಲಾರ್’ ಸಿನಿಮಾನಲ್ಲಿ ಪೃಥ್ವಿರಾಜ್ರ ಆತ್ಮೀಯ ಗೆಳೆಯನಾಗಿ ನಟಿಸಿದ್ದ ಪ್ರಭಾಸ್ ಸಹ ತಮ್ಮ ಗೆಳೆಯನಿಗೆ ಶುಭಾಶಯ ತಿಳಿಸಿದ್ದಾರೆ.
ಪೃಥ್ವಿರಾಜ್ ಸುಕುಮಾರನ್ ‘ಸಲಾರ್’ ಸಿನಿಮಾದಲ್ಲಿ ವರದ ರಾಜ ಮನ್ನಾರ್ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಭಾಸ್ ವರದನ ಗೆಳೆಯ ದೇವ ಪಾತ್ರದಲ್ಲಿ ನಟಿಸಿದ್ದಾರೆ. ಈ ಇಬ್ಬರ ಗೆಳೆತನವೇ ಸಿನಿಮಾದ ಪ್ರಮುಖ ಅಂಶ. ಪೃಥ್ವಿರಾಜ್ ಸುಕುಮಾರನ್ ‘ಸಲಾರ್’ ಸಿನಿಮಾದಲ್ಲಿ ನಟಿಸುತ್ತಿರುವಾಗಲೂ ಸಹ ‘ಆಡುಜೀವಿತಂ’ ಸಿನಿಮಾಕ್ಕಾಗಿಯೂ ಕೆಲಸ ಮಾಡುತ್ತಿದ್ದರು. ‘ಆಡುಜೀವಿತಂ’ ಸಿನಿಮಾದ ಬಗ್ಗೆ ಪೃಥ್ವಿರಾಜ್ ‘ಸಲಾರ್’ ಸಮಯದಲ್ಲಿಯೂ ಸಾಕಷ್ಟು ಮಾತನಾಡಿದ್ದರು. ಪ್ರಭಾಸ್ ಸಹ ‘ಆಡುಜೀವಿತಂ’ ಬಗ್ಗೆ ಆಗಲೇ ಭರವಸೆ ವ್ಯಕ್ತಪಡಿಸಿದ್ದರು.
ಇದೀಗ ತಮ್ಮ ಗೆಳೆಯನ ಸಿನಿಮಾ ಬಿಡುಗಡೆ ದಿನ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಭಾಸ್, ‘ಪೃಥ್ವಿರಾಜ್, ನೀನು ಇನ್ನಷ್ಟು ಹೊಳೆಯುತ್ತಲೇ ಸಾಗು. ನಿಮ್ಮ ಡೆಡಿಕೇಶನ್ ಅನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಈ ಸಿನಿಮಾಕ್ಕಾಗಿ ನೀನು ಅದೆಷ್ಟು ಕಷ್ಟಪಟ್ಟಿದ್ದೀಯ ಎಂಬುದನ್ನು ಸಹ ನಾನು ನೋಡಿದ್ದೇನೆ. ನಿನಗೆ ನಿನ್ನ ವೃತ್ತಿ ಜೀವನದಲ್ಲಿ ಇನ್ನೂ ಸಾಕಷ್ಟು ಗೆಲುವುಗಳು ಎದುರಾಗಲಿ’ ಎಂದು ಪ್ರಭಾಸ್ ಬರೆದುಕೊಂಡಿದ್ದಾರೆ. ‘ಆಡುಜೀವಿತಂ; ದಿ ಗೋಟ್ ಲೈಫ್’ ಸಿನಿಮಾಕ್ಕೆ ಶುಭ ಕೋರಿದ್ದಾರೆ.
ಇದನ್ನೂ ಓದಿ:ಎರಡು ಬಾರಿ ಮೆಗಾಸ್ಟಾರ್ ಸಿನಿಮಾ ಅವಕಾಶ ನಿರಾಕರಿಸಿದ್ದ ಪೃಥ್ವಿರಾಜ್ ಸುಕುಮಾರನ್
‘ಆಡುಜೀವಿತಂ’ ಸಿನಿಮಾ ನಿಜ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಲಾಗಿರುವ ಸಿನಿಮಾ ಆಗಿದೆ. ನಜೀಬ್ ಹೆಸರಿನ ಮಲಯಾಳಿಯೊಬ್ಬ ಸೌದಿ ಅರೆಬಿಯಾನಲ್ಲಿ ಕುರಿ ಕಾಯುವ ಕೆಲಸಕ್ಕೆ ನೇಮಕವಾಗುತ್ತಾನೆ. ಅಲ್ಲಿಂದ ಆತ ತಪ್ಪಿಸಿಕೊಂಡು ಬರುವ ಕತೆಯನ್ನು ‘ಆಡುಜೀವಿತಂ’ ಹೆಸರಿನ ಕಾದಂಬರಿಯಾಗಿ ಬೆನ್ಯಮಿನ್ ಹೆಸರಿನ ಲೇಖಕ ಬೆರದಿದ್ದಾರೆ. ಅದೇ ಕಾದಂಬರಿಯನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ.
‘ಆಡುಜೀವಿತಂ’ ಸಿನಿಮಾದ ಕೆಲಸವನ್ನು 14 ವರ್ಷಗಳ ಹಿಂದೆ ಪ್ರಾರಂಭ ಮಾಡಲಾಗಿತ್ತು. ಪೃಥ್ವಿರಾಜ್ ಸುಕುಮಾರನ್ ಸಹ ಹಲವು ವರ್ಷಗಳ ಸಮಯವನ್ನು ಈ ಸಿನಿಮಾಕ್ಕಾಗಿ ಮೀಸಲಿಟ್ಟಿದ್ದರು. ಕೋವಿಡ್ ಸಮಯದಲ್ಲಿ ಇಡೀ ಚಿತ್ರತಂಡ ಜೋರ್ಡನ್ನ ವಿಮಾನನಿಲ್ದಾಣದಲ್ಲಿ ತಿಂಗಳುಗಟ್ಟಲೆ ಸಿಲುಕಿಕೊಂಡಿತ್ತು. ಹಲವು ಕಷ್ಟಗಳು, ಸಮಸ್ಯೆಗಳನ್ನು ಎದುರಿಸಿ ಈ ಸಿನಿಮಾವನ್ನು ಚಿತ್ರತಂಡ ನಿರ್ಮಿಸಿದೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದು, ಸಿನಿಮಾದ ಟ್ರೈಲರ್ ಇದೊಂದು ಮಾಸ್ಟರ್ ಪೀಸ್ ಆಗುವ ಭರವಸೆಯನ್ನು ಮೂಡಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:51 am, Thu, 28 March 24