ವಿವಾದಾತ್ಮಕ ಕಮಿಡಿಯನ್ ಜೊತೆ ಪ್ರಕಾಶ್ ರೈ, ತಮಿಳುನಾಡಿಗೆ ದಾರಿ ಕೇಳಿದ್ದು ಏಕೆ?
Prakash Rai-Kunal Kamra: ಕಮಿಡಿಯನ್ ಕುನಾಲ್ ಕಾಮ್ರಾ ಇತ್ತೀಚೆಗಷ್ಟೆ ಮಹಾರಾಷ್ಟ್ರ ಉಪ ಮುಖ್ಯ ಮಂತ್ರಿ ಶಿಂಧೆ, ಪ್ರಧಾನಿ ಮೋದಿ, ಅಂಬಾನಿ-ಅದಾನಿ ಇನ್ನೂ ಕೆಲವರ ಬಗ್ಗೆ ಜೋಕುಗಳನ್ನು ಮಾಡಿ ವಿವಾದಕ್ಕೆ ಸಿಲುಕಿದ್ದಾರೆ. ಇದೀಗ ನಟ ಪ್ರಕಾಶ್ ರೈ, ಕಾಮ್ರಾಗೆ ಬೆಂಬಲ ನೀಡಿದ್ದು, ಕಾಮ್ರಾ ಅವರೊಟ್ಟಿಗೆ ಫೋಟೊ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ತಮಿಳುನಾಡಿಗೆ ದಾರಿ ಕೇಳಿರುವುದು ಏಕೆ?

ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ ಶಿಂಧೆ ಇನ್ನೂ ಕೆಲವರ ಬಗ್ಗೆ ಜೋಕುಗಳನ್ನು ಮಾಡಿ ವಿವಾದಕ್ಕೆ ಸಿಲುಕಿಕೊಂಡಿರುವ ಸ್ಟಾಂಡಪ್ ಕಮಿಡಿಯನ್ ಕುನಾಲ್ ಕಾಮ್ರಾ ಜೊತೆಗೆ ನಟ ಪ್ರಕಾಶ್ ರೈ ಕಾಣಿಸಿಕೊಂಡಿದ್ದಾರೆ. ಕುನಾಲ್ ಕಾಮ್ರಾ ಜೊತೆಗೆ ಚಿತ್ರವೊಂದನ್ನು ಪ್ರಕಾಶ್ ರೈ ಅಪ್ಲೋಡ್ ಮಾಡಿದ್ದಾರೆ. ಆ ಮೂಲಕ ಕುನಾಲ್ ಕಾಮ್ರಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕುನಾಲ್ ಕಾಮ್ರಾ ಜೊತೆಯಾಗಿರುವ ಚಿತ್ರ ಅಪ್ಲೋಡ್ ಮಾಡಿರುವ ಪ್ರಕಾಶ್ ರೈ, ‘ತಮಿಳುನಾಡಿಗೆ ತಲುಪುವುದು ಹೇಗೆ?’ ಎಂದು ಪ್ರಶ್ನೆ ಕೇಳಿ ಅದಕ್ಕೆ ‘ಸಿಂಪಲ್ ಆಟೋದಲ್ಲಿ’ ಎಂದು ತಾವೇ ಉತ್ತರಿಸಿದ್ದಾರೆ.
ಇತ್ತೀಚೆಗಷ್ಟೆ ಕುನಾಲ್ ಕಾಮ್ರಾ, ಮುಂಬೈನ ಹಾಬಿಟಾಟ್ ಕ್ಲಬ್ನಲ್ಲಿ ಸ್ಟಾಂಡಪ್ ಕಾಮಿಡಿ ಶೋ ಮಾಡಿದ್ದರು. ಅದರ ವಿಡಿಯೋ ಅನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದರು. ಪೊಲಿಟಿಕಲ್ ಸಟೈರಿಕ್ ಕಮಿಡಿಯನ್ ಆಗಿರುವ ಕಾಮ್ರಾ ಶೋನಲ್ಲಿ ಪ್ರಧಾನಿ ನರೇಂದ್ರ ಮೋದಿ, ಏಕನಾಥ ಶಿಂಧೆ, ಅಮಿತ್ ಶಾ, ಅಂಬಾನಿ-ಅದಾನಿ ಇನ್ನೂ ಕೆಲವರ ಬಗ್ಗೆ ಜೋಕುಗಳನ್ನು ಮಾಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಂಧೆ ಬೆಂಬಲಿಗರು ಹಾಬಿಟಾಟ್ಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದರು, ಮುಂಬೈ ಪೊಲೀಸರು ಕಾಮ್ರಾ ಮೇಲೆ ಕೇಸು ದಾಖಲಿಸಿಕೊಂಡಿದ್ದು, ಸಮನ್ಸ್ ಜಾರಿ ಮಾಡಿದ್ದಾರೆ. ಬುಕ್ ಮೈ ಶೋನವರು ಕಾಮ್ರಾ ಅವರ ಶೋನ ಟಿಕೆಟ್ ಮಾರಾಟ ಮಾಡುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಬೆಟ್ಟಿಂಗ್ ಆಪ್ ಪ್ರಕರಣ: ವಿಡಿಯೋ ಮೂಲಕ ಉತ್ತರ ಕೊಟ್ಟ ಪ್ರಕಾಶ್ ರೈ
ವಿವಾದದ ಬಳಿಕ ಕಾಮ್ರಾಗೆ ಶಿವಸೇನೆ (ಶಿಂಧೆ ಬಣ)ದ ಹಲವು ಕಾರ್ಯಕರ್ತರು ಕರೆ ಮಾಡಿ ಕೊಲೆ ಬೆದರಿಕೆಗಳನ್ನು ಹಾಕಿದ್ದು, ಕೆಲವು ಕರೆಗಳ ರೆಕಾರ್ಡ್ ವೈರಲ್ ಆಗಿವೆ. ಅದರಲ್ಲಿ ಒಬ್ಬ ವ್ಯಕ್ತಿ, ಕಾಮ್ರಾಗೆ ಕರೆ ಮಾಡಿ, ‘ಎಲ್ಲಿದ್ದೀಯ ನೀನು?’ ಎಂದು ಕೇಳಿದ್ದಾನೆ, ಅದಕ್ಕೆ ಕಾಮ್ರಾ, ‘ತಮಿಳುನಾಡಿಗೆ ಬಾ’ ಎಂದಿದ್ದಾರೆ. ಅದಕ್ಕೆ ಹತಾಷೆ ವ್ಯಕ್ತಪಡಿಸಿದ ಶಿವಸೇನೆ ಕಾರ್ಯಕರ್ತ ‘ತಮಿಳುನಾಡು ಕೊ ಕೈಸಾ ಆಯೆಗಾ ಭಾಯ್?’ (ತಮಿಳುನಾಡಿಗೆ ಹೇಗೆ ಬರೋಕಾಗುತ್ತೆ ಅಣ್ಣಾ?) ಎನ್ನುತ್ತಾನೆ. ಈ ಆಡಿಯೋ ಇದೀಗ ವೈರಲ್ ಆಗಿದೆ. ಇದೇ ಸಾಲನ್ನು ಪ್ರಕಾಶ್ ರೈ ತಮ್ಮ ಹಾಗೂ ಕಾಮ್ರಾರ ಫೋಟೊಕ್ಕೆ ಕ್ಯಾಪ್ಷನ್ ಹಾಕಿದ್ದು, ತಮಿಳುನಾಡಿಗೆ ಆಟೋದಲ್ಲಿ ಬರುವಂತೆ ಸಲಹೆ ನೀಡಿದ್ದಾರೆ.
ಪ್ರಕಾಶ್ ರೈ ಈ ಹಿಂದೆಯೂ ಸಹ ಬಿಜೆಪಿ, ಆರ್ಎಸ್ಎಸ್ ವಿರುದ್ಧ ನಿಲ್ಲುವ ಹೋರಾಟಗಾರರಿಗೆ, ರಾಜಕಾರಣಿಗಳಿಗೆ, ಕಮಿಡಿಯನ್ಗಳಿಗೆ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಮೋದಿ ಅವರನ್ನು ಎದುರು ಹಾಕಿಕೊಂಡಿದ್ದ ಕನ್ಹಯ್ಯ ಕುಮಾರ್ ಹಾಗೂ ಇನ್ನೂ ಕೆಲವರಿಗೆ ಪ್ರಕಾಶ್ ರೈ ಬೆಂಬಲ ನೀಡಿದ್ದರು. ಕೇಂದ್ರದ ವಿರುದ್ಧ ಸೋನಮ್ ವಾಂಗ್ಚುಕ್ ನಡೆಸಿದ್ದ ಹೋರಾಟದಲ್ಲಿಯೂ ಪ್ರಕಾಶ್ ರೈ ಭಾಗಿ ಆಗಿದ್ದರು. ಕೇಂದ್ರದ ವಿರುದ್ಧ ಹೋರಾಡಿ ಪ್ರಕರಣದಲ್ಲಿ ಸಿಲುಕಿರುವ ಉಮರ್ ಖಾಲಿದ್ಗೆ ಬೆಂಬಲ ನೀಡಿ ಅವರ ಕುಟುಂಬವನ್ನು ಭೇಟಿ ಮಾಡಿದ್ದರು. ಇದೀಗ ಕುನಾಲ್ ಕಾಮ್ರಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ