
ಸ್ಟಾರ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಸಹೋದರ ಹಾಗೂ ನಿರ್ಮಾಪಕ ಪ್ರಣಯ್ ರೆಡ್ಡಿ ವಂಗಾ ಸಿನಿಮಾ ವಿಮರ್ಶಕರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ತಮ್ಮ ‘ರೋಮಾಂಚಕಂ’ ಚಿತ್ರದ ಸೋಲಿಗೆ ವಿಮರ್ಶಕರ ನೆಗೆಟಿವ್ ರಿವ್ಯೂಗಳೇ ಮುಖ್ಯ ಕಾರಣ ಎಂದು ಅವರು ನೇರವಾಗಿ ಆರೋಪಿಸಿದ್ದಾರೆ. ಇದೇ ವೇಳೆ ತಮ್ಮ ಮುಂದಿನ ಬಿಗ್ ಬಜೆಟ್ ಚಿತ್ರ ‘ಸ್ಪಿರಿಟ್’ ವಿಷಯದಲ್ಲಿ ವಿಮರ್ಶಕರಿಗೆ ಖಡಕ್ ಸವಾಲು ಎಸೆದಿದ್ದಾರೆ.
‘ಸಿನಿಮಾ ವಿಮರ್ಶೆ ಮಾಡುವುದು ತುಂಬಾ ಸುಲಭದ ಕೆಲಸ . ಆದರೆ, ನಿರ್ಮಾಣ ಸಂಸ್ಥೆಯನ್ನು ನಡೆಸುವುದು ಮತ್ತು ಸಿನಿಮಾ ಮಾಡುವುದು ಎಷ್ಟು ಕಷ್ಟ ಎಂಬುದು ನಿರ್ಮಾಪಕರಿಗೆ ಮಾತ್ರ ಗೊತ್ತಿರುತ್ತದೆ. ಬರಹದಲ್ಲಿದ್ದ ಕಥೆಯನ್ನು ತೆರೆಮೇಲೆ ತರಲು ನಿರ್ದೇಶಕರು ಪಡುವ ಶ್ರಮ ದೊಡ್ಡದು. ನಿರ್ಮಾಣದ ವೇಳೆ ಎದುರಾಗುವ ಸವಾಲುಗಳು ವಿಮರ್ಶಕರಿಗೆ ಅರ್ಥವಾಗುವುದಿಲ್ಲ’ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
‘ರೋಮಾಂಚಕಂ’ ಸಣ್ಣ ಸಿನಿಮಾವಾಗಿದ್ದರಿಂದ ವಿಮರ್ಶಕರು ಅದನ್ನು ಸುಲಭವಾಗಿ ತುಳಿದುಬಿಟ್ಟರು ಎಂದು ಪ್ರಣಯ್ ಹೇಳಿದ್ದಾರೆ. ‘ನಿಮಗೇನಾದರೂ ನಿಜವಾಗಿಯೂ ತಾಕತ್ತಿದ್ದರೆ ನಮ್ಮ ಮುಂದಿನ ‘ಸ್ಪಿರಿಟ್’ ಸಿನಿಮಾ ಬಂದಾಗ ನಿಮ್ಮ ಸಾಮರ್ಥ್ಯ ತೋರಿಸಿ. ಆ ಚಿತ್ರ ಬಿಡುಗಡೆಯಾದಾಗ ನಾವೂ ನೋಡುತ್ತೇವೆ’ ಎಂದು ವಿಮರ್ಶಕರಿಗೆ ಬಹಿರಂಗವಾಗಿ ಓಪನ್ ಚಾಲೆಂಜ್ ನೀಡಿದ್ದಾರೆ.
ವೇಣು ಗೋಪಾಲ್ ರೆಡ್ಡಿ ನಿರ್ದೇಶನದ ‘ರೋಮಾಂಚಕಂ’ ಸಿನಿಮಾದಲ್ಲಿ ಸುಮಂತ್ ಪ್ರಭಾಸ್ ಹಾಗೂ ಅನಂತಿಕಾ ಸನಿಲ್ ಕುಮಾರ್ ನಟಿಸಿದ್ದರು. ಆದರೆ ಈ ಸಿನಿಮಾ ಪ್ರೇಕ್ಷಕರಿಂದಾಗಲಿ ಅಥವಾ ವಿಮರ್ಶಕರಿಂದಾಗಲಿ ಉತ್ತಮ ಪ್ರತಿಕ್ರಿಯೆ ಪಡೆಯಲು ವಿಫಲವಾಯಿತು. ಇದರಿಂದ ಕೋಪಗೊಂಡಿರುವ ನಿರ್ಮಾಪಕ ಪ್ರಣಯ್, ವಿಮರ್ಶಕರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದು, ಸದ್ಯ ಈ ಹೇಳಿಕೆ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಪ್ರಭಾಸ್ ಸಿನಿಮಾ ಸೆಟ್ನಲ್ಲಿ ನಿಜಕ್ಕೂ ನಡೆದಿದ್ದೇನು? ಸತ್ಯ ಹೇಳಿದ ಬಾಲಿವುಡ್ ನಟ
ಮತ್ತೊಂದೆಡೆ ಪ್ರಭಾಸ್ ಹಾಗೂ ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್‌ನ ‘ಸ್ಪಿರಿಟ್’ ಮೇಲೆ ಭಾರಿ ನಿರೀಕ್ಷೆಗಳಿವೆ. ‘ಅನಿಮಲ್’ ಸಿನಿಮಾದ ಸಕ್ಸಸ್ ನಂತರ ಈ ಚಿತ್ರದ ಮೇಲಿನ ಕುತೂಹಲ ದುಪ್ಪಟ್ಟಾಗಿದೆ. ಆರಂಭದಲ್ಲಿ ದೀಪಿಕಾ ಪಡುಕೋಣೆ ನಟಿಸಬೇಕಿದ್ದ ಈ ಸಿನಿಮಾಗೆ ಈಗ ತೃಪ್ತಿ ದಿಮ್ರಿ ನಾಯಕಿಯಾಗಿದ್ದಾರೆ. ಪ್ರಣಯ್ ಅವರ ಈ ಹೊಸ ಸವಾಲು ‘ಸ್ಪಿರಿಟ್’ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.