‘ಮೊದಲ ಬಾರಿ‘ ವಿದೇಶಕ್ಕೆ ಹೊರಟ ಪ್ರಶಾಂತ್ ನೀಲ್
Prashanth Neel-Jr NTR: ಪ್ರಶಾಂತ್ ನೀಲ್ ಅವರು ಜೂ ಎನ್ಟಿಆರ್ ಅವರಿಗಾಗಿ ಪಕ್ಕಾ ಆಕ್ಷನ್ ಸಿನಿಮಾ ಒಂದರ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಸಾಮಾನ್ಯವಾಗಿ ಸೆಟ್ಗಳಲ್ಲಿಯೇ ಹೆಚ್ಚಾಗಿ ಶೂಟ್ ಮಾಡುವ ಪ್ರಶಾಂತ್ ನೀಲ್ ಇದೇ ಮೊದಲ ಬಾರಿಗೆ ವಿದೇಶದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಮುಂದಾಗಿದ್ದಾರೆ.

ಪ್ರಶಾಂತ್ ನೀಲ್ (Prashant Neel) ಸಿನಿಮಾಗಳು ಭಿನ್ನವಾದ ಬಣ್ಣ, ಗುಣಮಟ್ಟ ಮತ್ತು ನಿರೂಪಣಾ ವಿಧಾನವನ್ನು ಹೊಂದಿರುತ್ತವೆ. ಸಂಭಾಷಣೆಗಳು ಬಹಳ ಕಡಿಮೆ, ಪ್ರತಿಯೊಂದು ಪಾತ್ರದ ಮಾತುಗಳು ಗುಂಡು ಹೊಡೆದಂತಿರುತ್ತದೆ. ಕತೆ ನಡೆಯುವ ಸ್ಥಳವೂ ಭಿನ್ನವಾಗಿರುತ್ತದೆ. ಅವರ ಸಿನಿಮಾಗಳು ಬಣ್ಣಗಳಿಂದ ತುಂಬಿರುವುದಿಲ್ಲ ಬದಲಿಗೆ ಕಪ್ಪು-ಬಿಳಿಯನ್ನು ಮಿಶ್ರಣ ಮಾಡಿದಂಥೆ ಕಾಣುತ್ತವೆ. ನೀಲ್ ಅವರು ತಮ್ಮ ಸಿನಿಮಾದ ಚಿತ್ರೀಕರಣವನ್ನು ಬಹುತೇಕ ಸೆಟ್ಗಳಲ್ಲಿಯೇ ಮಾಡುತ್ತಾರೆ. ಅದ್ಧೂರಿ ಲೊಕೇಶನ್, ಹಸಿರು ತುಂಬಿದ ಹಿನ್ನೆಲೆಯ ದೃಶ್ಯಗಳು ಅವರ ಸಿನಿಮಾದಲ್ಲಿ ಇರುವುದಿಲ್ಲ.
ಆದರೆ ಇದೇ ಮೊದಲ ಬಾರಿಗೆ ಪ್ರಶಾಂತ್ ನೀಲ್, ತಮ್ಮ ‘ಕಂಪರ್ಟ್ ಜೋನ್’ ನಿಂದ ಹೊರಗೆ ಬಂದಂತಿದೆ. ಇದೇ ಮೊದಲ ಬಾರಿಗೆ ಅವರು ತಮ್ಮ ಸಿನಿಮಾದ ಚಿತ್ರೀಕರಣವನ್ನು ವಿದೇಶದಲ್ಲಿ ಮಾಡಲು ಮುಂದಾಗಿದ್ದಾರೆ. ಜೂ ಎನ್ಟಿಆರ್ ನಟಿಸುತ್ತಿರುವ ಸಿನಿಮಾದ ಚಿತ್ರೀಕರಣದಲ್ಲಿ ಪ್ರಶಾಂತ್ ನೀಲ್ ತಮ್ಮನ್ನು ತೊಡಗಿಸಿಕೊಂಡಿದ್ದು, ಇದೀಗ ಸಿನಿಮಾ ಚಿತ್ರೀಕರಣಕ್ಕೆ ವಿದೇಶದ ಫ್ಲೈಟು ಹತ್ತಲು ಸಜ್ಜಾಗಿದ್ದಾರೆ.
ತಮ್ಮ ಕತೆಗಳಲ್ಲಿ ‘ಖಾನ್ಸಾರ್’, ‘ಕೆಜಿಎಫ್’ ರೀತಿಯ ಕಲ್ಪಿತ ನಗರಗಳನ್ನು ಸೃಷ್ಟಿಸುವ ನೀಲ್ ಇದೇ ಮೊದಲ ಬಾರಿಗೆ ವಿದೇಶಕ್ಕೆ ಹೋಗಿ ಅಲ್ಲಿನ ಲೊಕೇಶನ್ಗಳಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ. ಆದರೆ, ಕತೆಗೆ ತಕ್ಕಂತೆ ನೀಲ್ ಅವರು ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಕತೆಯ ಕೆಲ ಭಾಗ ವಿದೇಶದಲ್ಲಿ ವಿಶೇಷವಾಗಿ ನಿರ್ದಿಷ್ಟ ದೇಶದಲ್ಲಿ ನಡೆಯುವ ಕಾರಣ ಆ ಭಾಗಗಳನ್ನು ಅಲ್ಲಿಗೇ ಹೋಗಿ ಶೂಟ್ ಮಾಡಲಾಗುತ್ತಿದೆ.
ಇದನ್ನೂ ಓದಿ:ರಾಜ್ ಬಿ. ಶೆಟ್ಟಿ ಸಿನಿಮಾ ಮೇಕಿಂಗ್ನ ಮೊದಲೇ ಹೊಗಳಿದ್ದ ಪ್ರಶಾಂತ್ ನೀಲ್
ಈ ಹಿಂದೆ ನೀಲ್ ನಿರ್ದೇಶಿಸಿದ್ದ ‘ಕೆಜಿಎಫ್ 2’ ಸಿನಿಮಾನಲ್ಲಿಯೂ ಸಹ ನಾಯಕ ವಿದೇಶಕ್ಕೆ ಹೋಗುವ ದೃಶ್ಯವಿತ್ತು. ಆದರೆ ಆ ದೃಶ್ಯವನ್ನು ಕರ್ನಾಟಕದ ಬೀಚ್ ಒಂದರಲ್ಲಿ ಶೂಟ್ ಮಾಡಿದ್ದರು ನೀಲ್. ಆದರೆ ಈ ಬಾರಿ ನಾಯಕ ಜೂ ಎನ್ಟಿಆರ್ ಅವರನ್ನು ಕರೆದುಕೊಂಡು ವಿಮಾನ ಹತ್ತಿದ್ದಾರೆ. ಆದರೆ ನೀಲ್ ಅವರು ಯಾವ ದೇಶಕ್ಕೆ ಹೋಗುತ್ತಿದ್ದಾರೆ ಎಂಬ ಗುಟ್ಟು ಬಹಿರಂಗವಾಗಿಲ್ಲ.
ನೀಲ್ ಹಾಗೂ ಜೂ ಎನ್ಟಿಆರ್ ಸಿನಿಮಾಕ್ಕೆ ‘ಡ್ರ್ಯಾಗನ್’ ಎಂದು ಹೆಸರಿಡಲಾಗಿತ್ತು. ಆದರೆ ಸಿನಿಮಾದ ಹೆಸರು ಬದಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಸಿನಿಮಾದ ಬಳಿಕ ಜೂ ಎನ್ಟಿಆರ್ ತ್ರಿವಿಕ್ರಮ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ತಮಿಳಿನ ನೆಲ್ಸನ್ ಜೊತೆಗೂ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ‘ದೇವರ 2’ ಸಹ ಬಾಕಿ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




