
‘ಸ್ನೇಹಮಂಟೆ ಇದೆರ’, ‘ರಾಯುಡು’, ‘ಕಲಸುಕೋವಾಲನಿ’ ಇನ್ನೂ ಕೆಲವು ಸೂಪರ್ ಹಿಟ್ ಸಿನಿಮಾಗಳಲ್ಲಿ (Cinema) ಆಗಿನ ಸ್ಟಾರ್ ನಟರುಗಳ ಜೊತೆಗೆ ನಾಯಕಿಯಾಗಿ ನಟಿಸಿದ್ದ ನಟಿ ಪ್ರತ್ಯುಷ, ಸ್ಟಾರ್ ನಟಿಯಾಗಿ ಬೆಳೆಯುತ್ತಿರುವ ಹೊತ್ತಿನಲ್ಲಿ 2002ರ ಫೆಬ್ರವರಿ 22 ರಂದು ನಟಿ ಅನುಮಾನಾಸ್ಪದವಾಗಿ ನಿಧನ ಹೊಂದಿದರು. ಅವರ ಸಾವು ಆಗ ಅವಿಭಜಿತ ಆಂಧ್ರ ಪ್ರದೇಶದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದೀಗ 24 ವರ್ಷಗಳ ಬಳಿಕ ನಟಿಯ ಸಾವಿನ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದೆ. ಪ್ರತ್ಯುಷ ಸಾವಿನ ಪ್ರಕರಣದಲ್ಲಿ ನಟಿಯ ಗೆಳೆಯನಾಗಿದ್ದ ಸಿದ್ಧಾರ್ಥ್ ರೆಡ್ಡಿ ದೋಷಿ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ಸಾವಿಗೀಡಾಗಿರುವ ನಟಿ ಪ್ರತ್ಯುಷ ಹಾಗೂ ಈಗ ಶಿಕ್ಷೆಗೆ ಗುರಿಯಾಗಿರುವ ಸಿದ್ಧಾರ್ಥ್ ಪರಸ್ಪರ ಪ್ರೀತಿಸುತ್ತಿದ್ದು, ಇಬ್ಬರ ಮದುವೆಗೆ ಸಿದ್ಧಾರ್ಥ್ ರೆಡ್ಡಿ ಕುಟುಂಬದವರು ಒಪ್ಪಲಿಲ್ಲವೆಂದು ಇಬ್ಬರೂ ಸಹ ಕೂಲ್ಡ್ರಿಂಕ್ಸ್ನಲ್ಲಿ ವಿಷ ಬೆರೆಸಿ ಕುಡಿದಿದ್ದು, ಪ್ರತ್ಯುಷ ಸಾವಿಗೀಡಾದರೆ, ಸಿದ್ಧಾರ್ಥ್ ರೆಡ್ಡಿ ಬದುಕಿ ಉಳಿದಿದ್ದರು ಎನ್ನಲಾಗಿತ್ತು. ಆದರೆ ಇದನ್ನು ಒಪ್ಪದ ಪ್ರತ್ಯುಷ ತಾಯಿ ಸರೋಜಿನಿ ನ್ಯಾಯಾಲಯಗಳ ಮೂಲಕ ಸತತ ಹೋರಾಟ ಮಾಡಿ ಇದೀಗ ಕೊನೆಗೂ ಸಿದ್ಧಾರ್ಥ್ಗೆ ಶಿಕ್ಷೆ ಆಗುವಂತೆ ಮಾಡಿದ್ದಾರೆ.
ಪ್ರತ್ಯುಷ ತಾಯಿ ಹೇಳಿದ್ದಂತೆ, ಪ್ರತ್ಯುಷಗೆ ‘ಜಯಂ’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿತ್ತಂತೆ. ಆ ಖುಷಿಯಲ್ಲಿದ್ದ ಪ್ರತ್ಯುಷ ಗೆಳತಿಯ ಜೊತೆಗೆ ಪಾರ್ಲರ್ಗೆ ಹೋಗಿದ್ದರಂತೆ. ಅಲ್ಲಿಗೆ ಬಂದ ಸಿದ್ಧಾರ್ಥ್ ರೆಡ್ಡಿ ಪ್ರತ್ಯುಷರನ್ನು ಕರೆದುಕೊಂಡು ಹೋಗಿದ್ದಾನೆ. ಆ ಬಳಿಕ ಗೆಳತಿ, ಪ್ರತ್ಯುಷಗೆ ಕರೆ ಮಾಡಿದ್ದಾಳೆ, ಆಗಲೂ ಸಹ ಪ್ರತ್ಯುಷ ಕೆಲವೇ ನಿಮಿಷಗಳಲ್ಲಿ ಬರುವುದಾಗಿ ಹೇಳಿದ್ದಾರೆ. ಆದರೆ ಅದಾದ ಕೆಲವೇ ನಿಮಿಷಗಳ ಬಳಿಕ ಪ್ರತ್ಯುಷಳನ್ನು ಸ್ವತಃ ಸಿದ್ಧಾರ್ಥ್ ಆಸ್ಪತ್ರೆಗೆ ದಾಖಲಿಸಿದ್ದ. ಇದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.
ಇದನ್ನೂ ಓದಿ:ಒಟ್ಟೊಟ್ಟಿಗೆ ಐದು ಸಿನಿಮಾ ಹಿಡಿದು ಬಂದ ರಕ್ಷಿತ್ ಶೆಟ್ಟಿ
ಸಿದ್ಧಾರ್ಥ್ ನೀಡಿರುವ ಹೇಳಿಕೆಯಂತೆ ಇಬ್ಬರೂ ಸಹ ಕೂಲ್ಡ್ರಿಂಕ್ಸ್ನಲ್ಲಿ ವಿಷ ಬೆರೆಸಿ ಕುಡಿದಿದ್ದರು. ಆದರೆ ಪ್ರತ್ಯುಷ ಅಲ್ಲಿಯೇ ನಿಧನ ಹೊಂದಿದರು. ಸಿದ್ಧಾರ್ಥ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬದುಕುಳಿದಿದ್ದರು. ಈ ಹಿಂದೆಯೇ ಮೆಟ್ರೊಪಾಲಿಟಿನ್ ಕೋರ್ಟ್, ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಸಿದ್ಧಾರ್ಥ್ಗೆ ಐದು ವರ್ಷಗಳ ಸಜೆ ನೀಡಿತ್ತು. ಅದಾದ ಬಳಿಕ ಸಿದ್ಧಾರ್ಥ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು. ಅಲ್ಲಿ ಆತನಿಗೆ ಎರಡು ವರ್ಷಗಳ ಸಾದಾ ಸಜೆ ವಿಧಿಸಲಾಯ್ತು. ಬಳಿಕ ಪ್ರತ್ಯುಷ ತಾಯಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಹಲವು ವರ್ಷಗಳ ವಿಚಾರಣೆ ಬಳಿಕ ಇದೀಗ ತೀರ್ಪು ಹೊರಬಿದ್ದಿದೆ.
ಪ್ರಕರಣದಲ್ಲಿ ಸಿದ್ಧಾರ್ಥ್ ಅನ್ನು ಆತ್ಮಹತ್ಯೆಗೆ ಪ್ರಚೋದನೆ, ಆತ್ಮಹತ್ಯೆಗೆ ಸಹಾಯ ಮಾಡಿದ ಆರೋಪಗಳಿಗೆ ಸುಪ್ರೀಂಕೋರ್ಟ್ ದೋಷಿ ಎಂದು ಪರಿಗಣಿಸಿದ್ದು, ಸಿದ್ಧಾರ್ಥ್ ರೆಡ್ಡಿ ಇನ್ನು ನಾಲ್ಕು ವಾರಗಳಲ್ಲಿ ಪೊಲೀಸರಿಗೆ ಶರಣಾಗಬೇಕು ಎಂದಿದೆ. ಆದರೆ ಶಿಕ್ಷೆಯ ಪ್ರಮಾಣವನ್ನು ಇನ್ನೂ ಪ್ರಕಟಿಸಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:12 pm, Tue, 17 February 26