
ಹೊಡಿ-ಬಡಿ, ಕೊಚ್ಚು-ಕೊಲ್ಲು ಸಿನಿಮಾಗಳನ್ನು ಮಾಡಿ ಪ್ರೇಕ್ಷಕರ ಅಭಿರುಚಿಯನ್ನು ಅದಕ್ಕೆ ತಕ್ಕಂತೆ ಹೊಂದಿಸಿಟ್ಟಿರುವ ತೆಲುಗು ಸಿನಿಮಾದ ನಿರ್ಮಾಪಕರು, ನಿರ್ದೇಶಕರುಗಳು, ಈಗ ಕನ್ನಡ, ಮಲಯಾಳಂ ಭಾಷೆಗಳಿಂದ ಹೊರಬರುತ್ತಿರುವ ನೈಜ ಸಿನಿಮಾಗಳು, ಜೀವನಕ್ಕೆ ಹತ್ತಿರವಾದ, ಚಿಂತನೆಗೆ ಹಚ್ಚುವ, ಭಾವ ಪ್ರಪಂಚದಲ್ಲಿ ತೇಲಿಸುವ ಸಿನಿಮಾಗಳ ಬಗ್ಗೆ ಉದ್ದೇಶಪೂರ್ವಕ ಅಸಡ್ಡೆ ತೋರುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ, ತೆಲುಗಿನ ಬಲಿತ ನಿರ್ಮಾಪಕನೊಬ್ಬ ಸಂದರ್ಶನವೊಂದರಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’ (Sapta Sagaradache Ello) ಸಿನಿಮಾದ ಬಗ್ಗೆ ಅಸಡ್ಡೆಯಿಂದ ಮಾತನಾಡಿದ್ದಾರೆ.
ಫಿಲಂ ಕಂಪ್ಯಾನಿಯನ್ ಸೌಥ್ ಯೂಟ್ಯೂಬ್ ಚಾನೆಲ್ನಲ್ಲಿ ಆಯೋಜಿಸಲಾಗಿದ್ದ ರೌಂಡ್ ಟೇಬಲ್ ಸಂವಾದದಲ್ಲಿ ತೆಲುಗಿನ ನಿರ್ಮಾಪಕ ನಾಗ ವಂಶಿ ಭಾಗವಹಿಸಿದ್ದರು. ಅದೇ ಸಂವಾದದಲ್ಲಿ ನಟಿ ಸ್ವಾತಿ ರೆಡ್ಡಿ, ನಟ ಪ್ರಿಯದರ್ಶಿ, ನಿರ್ದೇಶಕ ಕಾರ್ತಿಕ್ ಹಾಗೂ ನಿರ್ಮಾಪಕ ಶೋಭು ವೈ ಭಾಗವಹಿಸಿದ್ದರು. ಸಂವಾದವನ್ನು ರಾಮ್ ವೆಂಕಟ್ ನಡೆಸಿಕೊಟ್ಟರು. ನೈಜತೆಗೆ ಹತ್ತಿರವಾದ, ಕಮರ್ಶಿಯಲ್ ಅಲ್ಲದ ಆದರೆ ಒಳ್ಳೆಯ ಸಿನಿಮಾಗಳು ಚಿತ್ರಮಂದಿರದಲ್ಲಿ ಓಡುತ್ತಿಲ್ಲ ಎಂಬ ವಿಷಯದ ಕಡೆಗೆ ಅವರ ಚರ್ಚೆ ಹೊರಳಿತು. ಆಗ ಸ್ವಾತಿ ನಟಿಸಿರುವ ಉತ್ತಮ ಸಿನಿಮಾ ಎನಿಸಿಕೊಂಡ ‘ಮಂತ್ ಆಫ್ ಮಧು’ ಹಾಗೂ ರಕ್ಷಿತ್ ಶೆಟ್ಟಿಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಬಗ್ಗೆ ಸಹ ಚರ್ಚೆ ಬಂತು.
‘ಸಪ್ತ ಸಾಗರದಾಚೆ ಎಲ್ಲೋ’ ಎಂಬ ಕನ್ನಡ (ತೆಲುಗು ಡಬ್) ಸಿನಿಮಾಕ್ಕೆ ಸಿಕ್ಕ ಆಧರಣೆ ತೆಲುಗು ಸಿನಿಮಾ ‘ಮಂತ್ ಆಫ್ ಮಧು’ಗೆ ದೊರಕಲಿಲ್ಲ. ಒಳ್ಳೆಯ ಸಿನಿಮಾಗಳು ಹೊರಗಿನಿಂದ ಬಂದರೆ ಮಾತ್ರವೇ ತೆಲುಗು ಜನ ನೋಡುತ್ತಾರಾ? ಎಂಬ ಪ್ರಶ್ನೆಯನ್ನು ನಿರೂಪಕ ರಾಮ್ ವೆಂಕಟ್ ಮುಂದಿಟ್ಟರು. ‘‘ನೀವು ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನು ‘ಮಂತ್ ಆಫ್ ಮಧು’ ಜೊತೆ ಕಂಪೇರ್ ಮಾಡಬೇಡಿ, ‘ಎಸ್ಎಸ್ಇ’ ಸ್ಟಾರ್ ಸಿನಿಮಾ ಎಂದರು ನಿರ್ಮಾಪಕ ನಾಗ ವಂಶಿ. ಆಗ ರಾಮ್ ವೆಂಕಟ್, ರಕ್ಷಿತ್ ಶೆಟ್ಟಿ ತೆಲುಗು ರಾಜ್ಯಗಳಲ್ಲಿ ಸ್ಟಾರ್ ಅಲ್ಲವಲ್ಲ, ಹಾಗಿದ್ದಮೇಲೆ ಇಲ್ಲಿಯ ಜನ ಸಿನಿಮಾ ಚೆನ್ನಾಗಿದೆ ಎಂದೇ ಹೋಗಿದ್ದಾರೆ ತಾನೆ ಎಂದು ಪ್ರಶ್ನಿಸಿದರು. ಆಗ ವಂಶಿ, ‘ಎಲ್ಲಿದ್ದರೂ ರಕ್ಷಿತ್ ಶೆಟ್ಟಿ, ರಕ್ಷಿತ್ ಶೆಟ್ಟಿಯೇ ತಾನೆ ಅವರು ಸ್ಟಾರ್ ಎಂದರು. ಅವರ ವಾದಕ್ಕೆ ತಮ್ಮ ವಾದ ಜೋಡಿಸಿದ ನಿರ್ದೇಶಕ ಕಾರ್ತಿಕ್ ‘ಇಲ್ಲಿನ ಮಲ್ಟಿಪ್ಲೆಕ್ಸ್ಗಳಲ್ಲಿ ಆದರೂ ಅವರಿಗೆ ಜನ ಬರುತ್ತಾರೆ’ ಎಂದರು.
ಇದನ್ನೂ ಓದಿ:SSE Side B: ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ತಂಡಕ್ಕೆ ‘ಕತ್ತೆ’ ಎಂದು ಹೊಗಳಿದ ಕಿಚ್ಚ ಸುದೀಪ್
ಚರ್ಚೆ ಮುಂದುವರೆದಂತೆ, ನಿರ್ದೇಶಕ ಕಾರ್ತಿಕ್, ‘ಮಂತ್ ಆಫ್ ಮಧು’ ಸಿನಿಮಾದ ಬಗ್ಗೆ ಮಾತನಾಡುತ್ತಾ ಆ ಸಿನಿಮಾ ನನಗೆ ಬಹಳ ಹಿಡಿಸಿತು. ಅದ್ಭುತವಾದ ರೈಟಿಂಗ್, ಅದ್ಭುತವಾದ ನಟನೆ, ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ’ ಸಹ ನನಗೆ ಬಹಳ ಹಿಡಿಸಿತು, ಒಳ್ಳೆಯ ಸಿನಿಮಾ ಎಂದರು. ಆಗ ಮಧ್ಯೆ ಬಾಯಿ ಹಾಕಿದ ನಿರ್ಮಾಪಕ ನಾಗ ವಂಶಿ, ಕೆಲವರು ಅದೊಂದು ಗೋಳು ಸಿನಿಮಾ ಎಂದು ನನ್ನ ಬಳಿ ಹೇಳಿದರು. ಹಾಗಾಗಿ ನಾನು ಆ ಸಿನಿಮಾ ನೋಡುವುದಿಲ್ಲ ಎಂದರು. ಆಗ ನಟಿ ಸ್ವಾತಿ, ‘ಸ್ಯಾಡ್ ಎಂಡಿಂಗ್ ಇದ್ದ ಕೂಡಲೇ ಗೋಳು ಎಂದುಕೊಳ್ಳುವುದು ಏಕೆ, ಅದೊಂದು ಅನುಭವ ತಾನೆ, ಹೊಸ ದೃಷ್ಟಿಕೋನ ಸಿಗುತ್ತದೆ ನೀವು ಆ ಸಿನಿಮಾ ನೋಡಬೇಕು’ ಎಂದರು. ಆಗ ವಂಶಿ, ‘ಅಂಥಹಾ ಸ್ಪೂರ್ತಿ, ದೃಷ್ಟಿಕೋನ ನನಗೆ ಬೇಕಾಗಿಲ್ಲ. ನಾನು ದುಡಿದ ಹಣ ಕೊಟ್ಟು ಗೋಳಾಡಲು ಚಿತ್ರಮಂದಿರಕ್ಕೆ ಹೋಗಬೇಕೆ’ ಎಂದು ದಾರ್ಷ್ಟ್ಯದಿಂದ ಹೇಳಿದರು.
ಆಗ ನಿರೂಪಕ ರಾಮ್ ವೆಂಕಟ್, ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ತುಸು ಲ್ಯಾಗ್ ಅನಿಸುತ್ತದೆ ಆದರೆ ಒಳ್ಳೆಯ ಸಿನಿಮಾ, ಆದರೆ ಸೈಡ್ ಬಿ ರಿವಾರ್ಡಿಂಗ್ ಆಗಿದೆ. ಎಲ್ಲರಿಗೂ ಇಷ್ಟವಾಗುವಂತಿದೆ’ ಎಂದರು. ಅವರ ಮಾತಿಗೆ ಮಾತು ಸೇರಿಸಿದ ನಟಿ ಸ್ವಾತಿ ರೆಡ್ಡಿ, ‘ನಾನು ಸಹ ಇದನ್ನು ಕೇಳಿದ್ದೇನೆ, ‘ಸೈಡ್ ಬಿ’ ನಲ್ಲಿ ಸ್ಯಾಡ್ ಅಂಶಗಳಿಲ್ಲ ಬದಲಿಗೆ ಅವರು ಭರವಸೆಯನ್ನು ಮೂಡಿಸುವ ಕ್ಲೈಮ್ಯಾಕ್ಸ್ ಇಟ್ಟಿದ್ದಾರಂತೆ. ನಾನು ಆ ಸಿನಿಮಾ ನೋಡಬೇಕು’’ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ