ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿರುವ ನಟಿ ಹೇಮಾರನ್ನು ಬ್ಯಾನ್ ಮಾಡುವಂತೆ ಒತ್ತಾಯ

| Updated By: Digi Tech Desk

Updated on: May 28, 2024 | 4:28 PM

ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿ ಡ್ರಗ್ಸ್ ಸೇವಿಸಿದ್ದ ನಟಿ ಹೇಮಾ ಕೊಲ್ಲ ವಿರುದ್ಧ ತೆಲುಗು ಚಿತ್ರರಂಗದ ಕೆಲವರು ಟೀಕೆಗಳನ್ನು ಮಾಡಿದ್ದು, ಹೇಮಾರನ್ನು ಚಿತ್ರರಂಗದಿಂದ ಹೊರಗಿಡಬೇಕೆಂದು ಒತ್ತಾಯಿಸಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿರುವ ನಟಿ ಹೇಮಾರನ್ನು ಬ್ಯಾನ್ ಮಾಡುವಂತೆ ಒತ್ತಾಯ
Follow us on

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ (Electronic Citu) ಬಳಿಕ ಫಾರ್ಮ್​ಹೌಸ್ ಒಂದರಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ತೆಲುಗು ನಟಿ ಹೇಮಾ ಕೊಲ್ಲ ವಿರುದ್ಧ ತೆಲುಗು ಚಿತ್ರರಂಗದಲ್ಲಿ ಅಸಮಾಧಾನ ಕೇಳಿ ಬರುತ್ತಿದೆ. ಕೆಲವು ಸಾಮಾಜಿಕ ಹೋರಾಟಗಾರರು, ಹಿರಿಯ ನಟಿಯರು, ಪೋಷಕರ ನಟಿಯರು ಈಗಾಗಲೇ ಹೇಮಾ ವಿರುದ್ಧ ಟೀಕೆಗಳನ್ನು ಮಾಡಿದ್ದಾರೆ. ಇದೀಗ, ನಟಿ ಹೇಮಾ ಅವರನ್ನು ತೆಲುಗು ಚಿತ್ರರಂಗದಿಂದ ನಿಷೇಧ ಮಾಡುವ ಮೂಲಕ ಬೇರೆ ನಟ-ನಟಿಯರಿಗೆ ಪಾಠ ಕಲಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.

ಇತ್ತೀಚೆಗೆ ಮಾತನಾಡಿದ ನಿರ್ಮಾಪಕ ನಟ್ಟಿ ಕುಮಾರ್, ‘ನಟಿ ಹೇಮಾ ತೆಲುಗು ಚಿತ್ರರಂಗದ ಗೌರವ ಹಾಳು ಮಾಡಿದ್ದಾರೆ. ತೆಲುಗು ನಟ-ನಟಿಯರಿಗೆ ಈ ರೇವ್ ಪಾರ್ಟಿಗಳಿಗೆ ಹೋಗುವ ಅವಶ್ಯಕತೆಯಾದರೂ ಏನಿದೆ? ಈ ರೀತಿಯಾಗಿ ಶಿಸ್ತು ಮೀರಿ ವರ್ತಿಸುವ ನಟ-ನಟಿಯರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು. ನಟಿ ಹೇಮಾರನ್ನು ಈಗಲೇ ತೆಲುಗು ಚಿತ್ರರಂಗದಿಂದ ಬ್ಯಾನ್ ಮಾಡಿ, ಬೇರೆ ನಟ-ನಟಿಯರಿಗೆ ಶಿಸ್ತಿನ ಪಾಠ ಹೇಳಬೇಕು’ ಎಂದಿದ್ದಾರೆ.

‘ಈ ಹಿಂದೆ ಸುರೇಶ್ ಕೊಂಡೇಟಿ ಎಂಬ ವ್ಯಕ್ತಿ ಗೋವಾನಲ್ಲಿ ಕಾರ್ಯಕ್ರಮ ಆಯೋಜಿಸಿ ತೆಲುಗು ಚಿತ್ರರಂಗದ ಗೌರವ ತೆಗೆದಿದ್ದ. ಆ ವ್ಯಕ್ತಿಯನ್ನು ಮಾ ಅಸೋಸಿಯೇಷನ್, ಪ್ರೊಡ್ಯೂಸರ್ ಕೌನ್ಸಿಲ್, ಡಿಸ್ಟ್ರಿಬ್ಯೂಷನ್ ಸಂಘದಿಂದ ಹೊರಗೆ ಹಾಕಿ ಬುದ್ಧಿ ಕಲಿಸಿದೆವು. ಈಗಲೂ ಸಹ ಅದೇ ರೀತಿ ಮಾಡಬೇಕು. ಈಗ ರೇವ್ ಪಾರ್ಟಿಗೆ ಹೋಗಿ ಬಂದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು, ಅವರ ವಿರುದ್ಧ ರೌಡಿ ಶೀಟರ್ ತೆರೆಯಬೇಕು, ಚಿತ್ರರಂಗದಿಂದಲೂ ದೂರ ಮಾಡಬೇಕು’ ಎಂದು ನಟ್ಟಿ ಕುಮಾರ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ರೇವ್ ಪಾರ್ಟಿ ಕೇಸ್: ನಟಿ ಹೇಮಾಗೆ ನೋಟಿಸ್ ಬೆನ್ನಲ್ಲೇ ಸಿಸಿಬಿಗೆ ರಾಜಕಾರಣಿಗಳಿಂದ ಒತ್ತಡ

ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಹೇಮಾ ಭಾಗಿಯಾಗಿದ್ದರು. ಆದರೆ ಅದೇ ದಿನ ವಿಡಿಯೋ ಒಂದನ್ನು ಹಂಚಿಕೊಂಡಿದ್ದ ಹೇಮಾ, ತಾನು ರೇವ್ ಪಾರ್ಟಿಗೆ ಹೋಗಿಲ್ಲ, ತಾನು ಹೈದರಾಬಾದ್​ನ ಫಾರಂ ಹೌಸ್​ನಲ್ಲಿ ಇರುವುದಾಗಿ ಸುಳ್ಳು ವಿಡಿಯೋ ಪ್ರಕಟಿಸಿದ್ದರು. ಆದರೆ ಹೇಮಾ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದಿದ್ದನ್ನು ಪೊಲೀಸರು ಖಚಿತಪಡಿಸಿದರು. ಆ ದಿನ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದವರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. ಪರೀಕ್ಷಾ ವರದಿಯಲ್ಲಿ ನಟಿ ಹೇಮಾ ಡ್ರಗ್ಸ್ ತೆಗೆದುಕೊಂಡಿರುವುದು ಖಾತ್ರಿಯಾಗಿದೆ. ಹೇಮಾರನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಆದರೆ ತಮಗೆ ಸಮಯ ಬೇಕೆಂದು ಹೇಮಾ ಹೇಳಿದ್ದಾರೆ.

ರೇವ್ ಪಾರ್ಟಿ ಬಗ್ಗೆ ಹೇಮಾ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ತನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಏನೇ ಆದರೂ ತಾನು ಭಯ ಪಡುವುದಿಲ್ಲವೆಂದು ಎಲ್ಲವನ್ನೂ ಎದುರಿಸುತ್ತೇನೆ ಎಂದಿದ್ದಾರೆ. ಇದರ ನಡುವೆ ತೆಲುಗು ಸಿನಿಮಾ ಕಲಾವಿದರ ಸಂಘ (ಮಾ) ಸಹ ಹೇಮಾಗೆ ಪರೋಕ್ಷ ಬೆಂಬಲ ನೀಡಿದ್ದು, ಹೇಮಾ ಮೇಲಿನ ಆರೋಪ ಸಾಬೀತಾಗುವವರೆಗೆ ಆಕೆಯನ್ನು ಅಮಾಯಕಿ ಎಂದೇ ಭಾವಿಸಬೇಕಾಗಿದೆ ಎಂದು ಮನವಿ ಮಾಡಿದೆ. ಹೇಮಾ, ಕಲಾವಿದರ ಸಂಘದ ಪದಾಧಿಕಾರಿಯಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:50 pm, Tue, 28 May 24