‘ಆಡುಜೀವಿತಂ’ ಪ್ರಚಾರಕ್ಕೆ ಪ್ರಭಾಸ್​ ಅನ್ನು ಕರೆಯಲಿಲ್ಲವೇಕೆ? ಪೃಥ್ವಿರಾಜ್ ಕೊಟ್ಟರು ಮುತ್ತಿನಂಥಹಾ ಉತ್ತರ

Prabhas-Pruthviraj: ‘ಆಡುಜೀವಿತಂ’ ಸಿನಿಮಾದ ಪ್ರಚಾರಕ್ಕೆ ಗೆಳೆಯ ಪ್ರಭಾಸ್ ಅವರನ್ನೇಕೆ ಕರೆತರಲಿಲ್ಲ ಎಂಬ ಪ್ರಶ್ನೆಗೆ ನಟ ಪೃಥ್ವಿರಾಜ್ ಸುಕುಮಾರನ್ ಮುತ್ತಿನಂಥಹಾ ಉತ್ತರ ಕೊಟ್ಟಿದ್ದಾರೆ.

‘ಆಡುಜೀವಿತಂ’ ಪ್ರಚಾರಕ್ಕೆ ಪ್ರಭಾಸ್​ ಅನ್ನು ಕರೆಯಲಿಲ್ಲವೇಕೆ? ಪೃಥ್ವಿರಾಜ್ ಕೊಟ್ಟರು ಮುತ್ತಿನಂಥಹಾ ಉತ್ತರ
Follow us
ಮಂಜುನಾಥ ಸಿ.
|

Updated on: Mar 29, 2024 | 2:15 PM

ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ‘ಆಡುಜೀವಿತಂ’ ನಿನ್ನೆ (ಮಾರ್ಚ್ 28) ಬಿಡುಗಡೆ ಆಗಿದೆ. ಈ ಸಿನಿಮಾಕ್ಕಾಗಿ ಹಲವು ವರ್ಷಗಳನ್ನು ಪೃಥ್ವಿರಾಜ್ ಸುಕುಮಾರನ್ ಮುಡಿಪಾಗಿಟ್ಟಿದ್ದರು. ಬರೋಬ್ಬರಿ 14 ವರ್ಷಗಳ ಕಾಲ ಈ ಸಿನಿಮಾದ ಪ್ರಾಜೆಕ್ಟ್ ನಡೆದಿದೆ. ಈ ಪ್ಯಾನ್ ಇಂಡಿಯಾ ಸಿನಿಮಾವನ್ನು ಬೆಂಗಳೂರು ಸೇರಿದಂತೆ ಹಲವು ನಗರಗಳಿಗೆ ತೆರಳಿ ಪ್ರಚಾರ ಸಹ ಮಾಡಿದ್ದರು. ಯಾವುದೇ ಸ್ಥಳೀಯ ನಟರ ಸಹಾಯವನ್ನು ಪಡೆಯದೇ ಪ್ರಚಾರದ ಜವಾಬ್ದಾರಿಯನ್ನು ಒಬ್ಬರೇ ನಿರ್ವಹಿಸಿದರು ಪೃಥ್ವಿರಾಜ್. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ‘ತೆಲುಗು ರಾಜ್ಯಗಳಲ್ಲಿ ಸಿನಿಮಾದ ಪ್ರಚಾರಕ್ಕೆ ನೀವೇಕೆ ನಿಮ್ಮ ‘ಸಲಾರ್’ ಗೆಳೆಯ ಪ್ರಭಾಸ್ ನೆರವನ್ನು ಪಡೆಯಲಿಲ್ಲ’ ಎಂಬ ಪ್ರಶ್ನೆ ಎದುರಾಯ್ತು. ಇದಕ್ಕೆ ಒಳ್ಳೆಯ ಉತ್ತರ ಕೊಟ್ಟರು ಪೃಥ್ವಿರಾಜ್.

‘ನಾನೇಕೆ ಪ್ರಭಾಸ್ ಅವರನ್ನು ಸಹಾಯ ಕೇಳಲಿ. ಪ್ರಭಾಸ್ ಯಾವುದಕ್ಕೂ ನೋ ಎಂದು ಹೇಳುವುದಿಲ್ಲ. ಹಾಗೆಂದು ಅವರನ್ನು ಶ್ರಮಕ್ಕೆ, ಕಷ್ಟಕ್ಕೆ ಈಡುಮಾಡುವುದು ನನಗೆ ಇಷ್ಟವಿಲ್ಲ. ಯಾರಿಗೆ ನೋ ಹೇಳಲು ಆಗುವುದಿಲ್ಲವೋ ಅವರನ್ನು ಯಾವುದೇ ಸಹಾಯ ಕೇಳ ಬಾರದು ಇದನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ. ಪ್ರಭಾಸ್​ ಅವರನ್ನು ನಾನು ಸಹಾಯ ಕೇಳಿದರೆ ಕೂಡಲೇ ಅವರು ಮಾಡಿಬಿಡುತ್ತಾರೆ. ಅವರು ಒಳ್ಳೆಯ ಮನಸ್ಸಿನ ವ್ಯಕ್ತಿ, ಹಾಗೆಂದು ಆ ಒಳ್ಳೆಯ ಮನಸ್ಸನ್ನು ನಾನು ನನ್ನ ಲಾಭಕ್ಕೆ ಬಳಸಿಕೊಳ್ಳಲಾರೆ’ ಎಂದಿದ್ದಾರೆ ಪೃಥ್ವಿರಾಜ್ ಸುಕುಮಾರನ್.

ಇದನ್ನೂ ಓದಿ:ಎರಡು ಬಾರಿ ಮೆಗಾಸ್ಟಾರ್ ಸಿನಿಮಾ ಅವಕಾಶ ನಿರಾಕರಿಸಿದ್ದ ಪೃಥ್ವಿರಾಜ್ ಸುಕುಮಾರನ್

ಪೃಥ್ವಿರಾಜ್ ಸುಕುಮಾರನ್ ನೀಡಿರುವ ಉತ್ತರ ಪ್ರಭಾಸ್ ಅಭಿಮಾನಿಗಳ ಹೃದಯ ಗೆದ್ದಿದೆ. ‘ಸಲಾರ್’ ಸಿನಿಮಾದ ಪ್ರಚಾರದ ಸಮಯದಲ್ಲಿ ಎಸ್​ಎಸ್ ರಾಜಮೌಳಿಗೆ ನೀಡಿದ್ದ ಸಂದರ್ಶನದಲ್ಲಿ ಪ್ರಭಾಸ್​ರ ಈ ಗುಣದ ಬಗ್ಗೆ ಮಾತನಾಡಿದ್ದ ಪೃಥ್ವಿರಾಜ್ ಸುಕುಮಾರನ್, ‘ಪ್ರಭಾಸ್ ಅವರನ್ನು ಏನಾದರೂ ಕೇಳುವ ಮುನ್ನ ಹುಷಾರಾಗಿರಬೇಕು, ನೀವು ಕೇಳಿದರೆ ಅವರದನ್ನು ಮಾಡಿಯೇ ಬಿಡುತ್ತಾರೆ. ಒಮ್ಮೆ ನಾನು ಸುಮ್ಮನೆ ಮಾತನಾಡುತ್ತಾ ನನ್ನ ಸ್ಪೋರ್ಟ್ಸ್ ಕಾರು ಓಡಿಸಿ ಬಹಳ ದಿನವಾಯ್ತು ಎಂದಷ್ಟೆ ಹೇಳಿದೆ. ಅದಕ್ಕೆ ಪ್ರಭಾಸ್ ಅವರ ಕಾರನ್ನು ಸೆಟ್​ಗೆ ತರಿಸಿ, ಶೂಟಿಂಗ್ ಮುಗಿವ ವರೆಗೆ ನೀವೇ ಇಟ್ಟುಕೊಳ್ಳಿ ಎಂದುಬಿಟ್ಟಿದ್ದರು ಎಂದಿದ್ದರು ಪೃಥ್ವಿರಾಜ್.

ನನ್ನ ಮಗಳು ಏನೋ ಕೇಳಿದಳೆಂದು ಹಲವು ಹಲವು ವೆರೈಟಿ ಊಟಗಳನ್ನು ನಮ್ಮ ರೂಂಗೆ ಕಳಿಸಿಬಿಟ್ಟಿದ್ದರು. ಆ ಊಟವನ್ನು ಇಡಲೆಂದು ನಾವು ಇನ್ನೊಂದು ಕೋಣೆಯನ್ನು ಬುಕ್​ ಮಾಡಬೇಕಾಗಿ ಬಂತು. ಆಗಿನಿಂದ ಪ್ರಭಾಸ್​ ಬಳಿ ಮಾತನಾಡುವಾಗ ನಾನು ಜಾಗರೂಕನಾಗಿರುತ್ತೇನೆ ಏನಾದರೂ ಅಪ್ಪಿ-ತಪ್ಪಿ ಕೇಳಿ ಬಿಟ್ಟರೂ ಸಹ ಅವರು ಅದನ್ನು ತರಿಸಿಬಿಡುತ್ತಾರೆ ಎಂದಿದ್ದರು ಪೃಥ್ವಿರಾಜ್ ಸುಕುಮಾರನ್.

ಪೃಥ್ವಿರಾಜ್ ಸುಕುಮಾರನ್, ‘ಆಡುಜೀವಿತಂ’ ಸಿನಿಮಾ ಪ್ರಚಾರಕ್ಕೆ ಪ್ರಭಾಸ್​ರನ್ನು ಕೇಳಲಿಲ್ಲವಾದರೂ, ಪ್ರಭಾಸ್ ‘ಆಡುಜೀವಿತಂ’ ಬಿಡುಗಡೆ ದಿನ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡು ಗೆಳೆಯ ಪೃಥ್ವಿರಾಜ್​ಗೆ ಶುಭಾಶಯ ಕೋರಿದ್ದರು. ಮಾರ್ಚ್ 28ರಂದು ಬಿಡುಗಡೆ ಆದ ಈ ಸಿನಿಮಾ ಮೊದಲ ದಿನ ಉತ್ತಮ ಗಳಿಕೆ ಮಾಡಿರುವ ಜೊತೆಗೆ ವಿಮರ್ಶಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ