
ಕನ್ನಡದ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿರುವ ಶ್ರೀಲೀಲಾ ಅವರು ತೆಲುಗಿನಲ್ಲಿಯೂ ಅಷ್ಟೇ ಜನಪ್ರಿಯತೆ ಪಡೆದಿದ್ದಾರೆ. ಕೆಲವೇ ದಿನಗಳ ಹಿಂದೆ ಅವರಿಗೊಂದು ಬಂಪರ್ ಚಾನ್ಸ್ ಸಿಕ್ಕಿತು. ಏನದು? ‘ಪುಷ್ಪ 2’ ಸಿನಿಮಾದಲ್ಲಿ ಐಟಂ ಡ್ಯಾನ್ಸ್ ಮಾಡುವ ಅವಕಾಶ. ಇಂಥ ಚಾನ್ಸ್ ಯಾರೂ ತಪ್ಪಿಸಿಕೊಳ್ಳುವುದಿಲ್ಲ. ಶ್ರೀಲೀಲಾ ಆಯ್ಕೆ ಆಗುವುದಕ್ಕೂ ಮುನ್ನ ಅನೇಕ ನಟಿಯರ ಹೆಸರು ಕೇಳಿಬಂದಿತ್ತು. ಅಂತಿಮವಾಗಿ ಆ ಅವಕಾಶ ಸಿಕ್ಕಿದ್ದು ಶ್ರೀಲೀಲಾ ಪಾಲಿಗೆ. ಈಗ ಆ ಹಾಡಿನ ಬಿಡುಗಡೆಗೆ ಸಮಯ ನಿಗದಿ ಆಗಿದೆ. ಅಲ್ಲು ಅರ್ಜುನ್ ಹಾಗೂ ಶ್ರೀಲೀಲಾ ಹೆಜ್ಜೆ ಹಾಕಿರುವ ‘ಕಿಸಿಕ್..’ ಹಾಡು ನವೆಂಬರ್ 24ರಂದು ರಿಲೀಸ್ ಆಗಲಿದೆ.
‘ಪುಷ್ಪ 2’ ಸಿನಿಮಾ ಡಿಸೆಂಬರ್ 5ರಂದು ಬಿಡುಗಡೆ ಆಗಲಿದ್ದು, ಈಗಾಗಲೇ ಭರ್ಜರಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಟ್ರೇಲರ್ ಧೂಳೆಬ್ಬಿಸಿದ ಬಳಿಕ ಹಾಡಿನ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ. ‘ಕಿಸಿಕ್..’ ಹಾಡಿನ ಪೋಸ್ಟರ್ ನೋಡಿಯೇ ಅಭಿಮಾನಿಗಳಿಗೆ ಥ್ರಿಲ್ ಆಗಿದೆ. ನ.24ರಂದು ಸಂಜೆ 7 ಗಂಟೆ 2 ನಿಮಿಷಕ್ಕೆ ಈ ಹಾಡು ಬಿಡುಗಡೆ ಆಗಲಿದೆ.
ಸಮಂತಾ ರುತ್ ಪ್ರಭು ಅವರು ‘ಪುಷ್ಪ’ ಸಿನಿಮಾದಲ್ಲಿ ಐಟಂ ಡ್ಯಾನ್ಸ್ ಮಾಡಿದ್ದರು. ಅವರು ಹೆಜ್ಜೆ ಹಾಕಿದ ಪರಿ ಕಂಡು ಪಡ್ಡೆಗಳು ಬೆರರಾಗಿದ್ದರು. ಈಗ ‘ಪುಷ್ಪ 2’ ಸಿನಿಮಾದಲ್ಲಿ ಶ್ರೀಲೀಲಾ ಅವರು ಅದೇ ರೀತಿ ಮೋಡಿ ಮಾಡುತ್ತಾರಾ ಎಂಬುದನ್ನು ತಿಳಿಯುವ ಸಮಯ ಬಂದಿದೆ. ಶ್ರೀಲೀಲಾ ಉತ್ತಮ ಡ್ಯಾನ್ಸರ್ ಎಂಬುದರಲ್ಲಿ ಅನುಮಾನ ಇಲ್ಲ. ಅಲ್ಲು ಅರ್ಜುನ್ ಜೊತೆ ಅವರ ಕಾಂಬಿನೇಷನ್ ಇರುವುದರಿಂದ ನಿರೀಕ್ಷೆ ಡಬಲ್ ಆಗಿದೆ.
ಇದನ್ನೂ ಓದಿ: ‘ಪುಷ್ಪ 2’ ಬಿಡುಗಡೆಗೂ ಮುನ್ನ ಮತ್ತೊಮ್ಮೆ ರಿಲೀಸ್ ಆಗಲಿದೆ ‘ಪುಷ್ಪ’ ಸಿನಿಮಾ
ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಪುಷ್ಪ 2’ ರಿಲೀಸ್ ಆಗಲಿದೆ. ತೆಲುಗಿನ ಜೊತೆ ಕನ್ನಡ, ಹಿಂದಿ, ತಮಿಳು, ಮಲಯಾಳಂ ಮುಂತಾದ ಭಾಷೆಗಳಿಗೆ ಡಬ್ ಆಗಿದೆ. ಈ ಸಿನಿಮಾ ಬಿಡುಗಡೆ ಆದ ನಂತರ ಅನೇಕರ ಬದುಕು ಬದಲಾಗಲಿದೆ. ಶ್ರೀಲೀಲಾ ಅವರಿಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಹೆಚ್ಚಾಗುವುದು ಖಚಿತ. ದೇವಿಶ್ರೀ ಪ್ರಸಾದ್ ಅವರು ‘ಪುಷ್ಪ 2’ ಸಿನಿಮಾಗೆ ಸಂಗೀತ ನೀಡಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್’ ನಿರ್ಮಾಣದ ಈ ಚಿತ್ರವನ್ನು ಸುಕುಮಾರ್ ನಿರ್ದೇಶಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.