Pushpa 2 Pre Release: ಬಿಡುಗಡೆ ಮುನ್ನವೇ ನೂರಾರು ಕೋಟಿ ಬಾಚುತ್ತಿರುವ ಪುಷ್ಪ 2

|

Updated on: Apr 02, 2023 | 3:40 PM

ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲಿದೆ ಆದರೆ ಈಗಲೇ ಭಾರಿ ದೊಡ್ಡ ಮೊತ್ತದ ವ್ಯವಹಾರವನ್ನು ಮಾಡಿಬಿಟ್ಟಿದೆ ಸಿನಿಮಾ.

Pushpa 2 Pre Release: ಬಿಡುಗಡೆ ಮುನ್ನವೇ ನೂರಾರು ಕೋಟಿ ಬಾಚುತ್ತಿರುವ ಪುಷ್ಪ 2
ಪುಷ್ಪ
Follow us on

ಬಾಹುಬಲಿ 2 (Bahubali 2) ಸಿನಿಮಾ ಬಾಲಿವುಡ್ ಪ್ರದೇಶದಲ್ಲಿ ದೊಡ್ಡ ಹಿಟ್ ಆಗಿತ್ತಾದರೂ ಆ ಸಿನಿಮಾದಿಂದ ದಕ್ಷಿಣದ ಸಿನಿಮಾಗಳಿಗೆ ಬಾಲಿವುಡ್​ನಲ್ಲಿ ಬೇಡಿಕೆ ದೊಡ್ಡಮಟ್ಟದಲ್ಲಿ ಸೃಷ್ಟಿಯಾಗಿರಲಿಲ್ಲ. ನಿಜವಾಗಿಯೂ ದೊಡ್ಡ ಮಟ್ಟದಲ್ಲಿ ದಕ್ಷಿಣದ ಸಿನಿಮಾಗಳಿಗೆ ಬೇಡಿಕೆ ಶುರುವಾಗಿದ್ದು ಕೋವಿಡ್ ಬಳಿಕ. ಕೋವಿಡ್ ಮುಗಿದ ಬಳಿಕ ಮೊತ್ತ ಮೊದಲಿಗೆ ಬಾಲಿವುಡ್ ಮಾರುಕಟ್ಟೆ ಪ್ರವೇಶಿಸಿ ಹಿಟ್ ಎನಿಸಿಕೊಂಡಿದ್ದು ಅಲ್ಲು ಅರ್ಜುನ್ ನಟನೆಯ ಪುಷ್ಪ (Pushpa) ಸಿನಿಮಾ. ಉತ್ತರ ಭಾರತದಲ್ಲಿ ದಕ್ಷಿಣದ ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆಯಿದೆ ಎಂಬುದನ್ನು ತೋರಿಸಿತು ಆ ಸಿನಿಮಾ. ಆ ಬಳಿಕ ಕೆಜಿಎಫ್ 2 (KGF 2) ಸಿನಿಮಾ ಬಿಡುಗಡೆ ಆಗಿ ಇತಿಹಾಸ ಸೃಷ್ಟಿಸಿತು. ಆ ಬಳಿಕ ಆರ್​ಆರ್​ಆರ್, ವಿಕ್ರಂ, ಕಾಂತಾರ ಸಿನಿಮಾಗಳು ಅದನ್ನೇ ಫಾಲೋ ಮಾಡಿದವು. ಇದೀಗ ಪುಷ್ಪ 2 (Pushpa 2) ಚಿತ್ರೀಕರಣ ಭರದಿಂದ ಸಾಗಿದ್ದು, ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಬರಲಿದೆ. ಆದರೆ ಸಿನಿಮಾ ಬಿಡುಗಡೆ ಆಗುವ ಮುನ್ನವೇ ನೂರಾರು ಕೋಟಿ ರುಪಾಯಿ ವ್ಯವಹಾರ ಮಾಡಿಬಿಟ್ಟಿದೆ.

ದಕ್ಷಿಣದ ಸಿನಿಮಾಗಳಿಗೆ ಬಾಲಿವುಡ್​ನಲ್ಲಿ ಇರುವ ಮಾರುಕಟ್ಟೆಯ ಅಂದಾಜು ಆಗ ಇರದಿದ್ದ ಕಾರಣ ಪುಷ್ಪ ಸಿನಿಮಾದ ಡಬ್ಬಿಂಗ್ ಹಕ್ಕನ್ನು ಬಹಳ ಕಡಿಮೆ ಬೆಲೆಗೆ ಮಾರಿದ್ದರು ನಿರ್ಮಾಪಕರು. ಇದೀಗ ಪುಷ್ಪ ಸಿನಿಮಾಕ್ಕೆ ಪ್ರತ್ಯೇಕ ಅಭಿಮಾನಿ ವರ್ಗವೇ ಸೃಷ್ಟಿಯಾಗಿದ್ದು, ದಕ್ಷಿಣದ ಸಿನಿಮಾಗಳಿಗೆ ಉತ್ತರ ಭಾರತದಲ್ಲಿ ದೊಡ್ಡ ಮಾರುಕಟ್ಟೆಯೂ ಸೃಷ್ಟಿಯಾಗಿದೆ. ಹಾಗಾಗಿ ಮೊದಲ ಸಿನಿಮಾದ ವೇಳೆ ಮಾಡಿದ ತಪ್ಪನ್ನು ಪುನರಾವರ್ತಿಸದೇ ಸಿನಿಮಾದ ಎಲ್ಲ ರೀತಿಯ ಹಕ್ಕುಗಳನ್ನು ಭಾರಿ ಮೊತ್ತಕ್ಕೆ ಮಾರಾಟ ಮಾಡಲು ಮುಂದಾಗಿದೆ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಸಂಸ್ಥೆ.

2021 ರಲ್ಲಿ ಬಿಡುಗಡೆ ಆಗಿದ್ದ ಪುಷ್ಪ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸುಮಾರು 400 ಕೋಟಿ ಗಳಿಕೆ ಮಾಡಿತ್ತು, ಆದರೆ ಪುಷ್ಪ 2 ಸಿನಿಮಾದ ಪ್ರೀ ರಿಲೀಸ್ ಬ್ಯುಸಿನೆಸ್ 500 ಕೋಟಿ ದಾಟಿಬಿಟ್ಟಿದೆ! ಸಿನಿಮಾದ ಒಟಿಟಿ ಹಕ್ಕು ಖರೀದಿಗೆ ದೊಡ್ಡ ಒಟಿಟಿಗಳು ಸಾಲುಗಟ್ಟಿದ್ದು ಭಾರಿ ಮೊತ್ತವನ್ನು ನೀಡಲು ತುದಿಗಾಲಲ್ಲಿ ನಿಂತಿವೆ. ಮೊದಲ ಸಿನಿಮಾವನ್ನು ಅಮೆಜಾನ್ ಪ್ರೈಂ ವಿಡಿಯೋ ಖರೀದಿಸಿತ್ತು, ಎರಡನೇ ಭಾಗ ಖರೀದಿಸಲು ನೆಟ್​ಫ್ಲಿಕ್ಸ್, ಸೋನಿ ಲಿವ್ ಹಾಗೂ ಜೀ5 ಸಹ ಆಸಕ್ತಿವಹಿಸಿದ್ದು ಭಾರಿ ಮೊತ್ತದ ಆಫರ್ ಅನ್ನು ನಿಡಿದೆ.

ಪುಷ್ಪ 2 ಸಿನಿಮಾದ ಒಟಿಟಿ ಹಕ್ಕೇ ಸುಮಾರು 150 ಕೋಟಿಗೆ ವ್ಯಾಪಾರವಾಗುವ ನಿರೀಕ್ಷೆ ಇದೆ. ಇದರ ಜೊತೆಗೆ ಸಿನಿಮಾದ ಆಡಿಯೋ ಹಕ್ಕು ಸುಮಾರು 30 ರಿಂದ 40 ಕೋಟಿ ಹಾಗೂ ಡಿಜಿಟಲ್ ಹಕ್ಕು ಸುಮಾರು 150 ಕೋಟಿಗೆ ಮಾರಾಟವಾಗುವ ನಿರೀಕ್ಷೆ ಇದೆ. ಕೆಲವು ಮೂಲಗಳ ಪ್ರಕಾರ ಸಿನಿಮಾದ ವಿವಿಧ ಹಕ್ಕು ಮಾರಾಟದಿಂದ ಈಗಾಗಲೇ ನಿರ್ಮಾಣ ಸಂಸ್ಥೆಯು 500 ಕೋಟಿ ಗಳಿಸಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಖಾತ್ರಿ ಇಲ್ಲ.

ಪುಷ್ಪ 2 ಸಿನಿಮಾದ ಅಲ್ಲು ಅರ್ಜುನ್ ಜೊತೆಗೆ ಫಹಾದ್ ಫಾಸಿಲ್, ಕನ್ನಡದ ಡಾಲಿ ಧನಂಜಯ್ ಜೊತೆಗೆ ತಮಿಳಿನ ವಿಜಯ್ ಸೇತುಪತಿ ಸಹ ಇದ್ದಾರೆ ಎನ್ನಲಾಗುತ್ತಿದೆ. ಮಾತ್ರವಲ್ಲದೆ ನಟಿ ಸಾಯಿ ಪಲ್ಲವಿ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ನಟಿ ರಶ್ಮಿಕಾ ಮಂದಣ್ಣ ಸಿನಿಮಾದ ನಾಯಕಿಯಾಗಿ ನಟಿಸಿದ್ದು, ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ