
ಬಹುನಿರೀಕ್ಷಿತ ‘ಪುಷ್ಪ 2’ (Pushpa 2) ಸಿನಿಮಾದ ಹೊಸ ಹಾಡೊಂದು ಬಿಡುಗಡೆ ಆಗಿದೆ. ಮೊದಲ ಸಿನಿಮಾದಲ್ಲಿ ಪುಷ್ಪ, ಶ್ರೀವಲ್ಲಿಯ ಅಂದ ಹೊಗಳಿ ‘ನಿನ್ನ ನೋಡುತಲಿದ್ರೆ ಕಣ್ಣಿನ ನೋಟ ತಿರುಗಿಸಿ ಬಿಡುವೆ’ ಎಂದು ಹಾಡಿದ್ದ, ‘ಪುಷ್ಪ 2’ ಈಗ ಶ್ರೀವಲ್ಲಿ, ಪುಷ್ಪನ ವ್ಯಕ್ತಿತ್ವ ಹೊಗಳಿ ಹಾಡು ಹಾಡಿದ್ದಾಳೆ. ಇಂದು ಬಿಡುಗಡೆ ಆಗಿರುವ ವಿಡಿಯೋ ಹಾಡಿನಲ್ಲಿ, ಶ್ರೀವಲ್ಲಿ, ತನ್ನ ಪತಿ ಪುಷ್ಪನನ್ನು ಹೇಗೆ ನೋಡುತ್ತಾಳೆ, ಹಾಗೂ ಆಕೆಯ ದೃಷ್ಟಿಕೋನ ಸಮಾಜದ ದೃಷ್ಟಿಕೋನದಿಂದ ಸಂಪೂರ್ಣ ಭಿನ್ನವಾಗಿ ಹೇಗಿದೆ ಎಂಬುದನ್ನು ಸಾರುತ್ತಿದೆ. ಜನರೆಲ್ಲ ಪುಷ್ಪನನ್ನು, ಒರಟ, ಮೊಂಡ ಎನ್ನುತ್ತಾರೆ ಆದರೆ ಶ್ರೀವಲ್ಲಿಗೆ ಮಾತ್ರ ಪುಷ್ಪ ಮಹಾರಾಜ.
ಪುಷ್ಪನ ಒರಟು ವ್ಯಕ್ತಿತ್ವದ ಅಡಿಯಲ್ಲಿ ಅವನು ಪ್ರೀತಿಸುವ ಹೃದಯ ಎಷ್ಟು ವಿಶಾಲವಾದುದು, ಆತ ಹೇಗೆಲ್ಲ ತನ್ನನ್ನು ಪ್ರೀತಿಸುತ್ತಾನೆ, ಮುದ್ದಿಸುತ್ತಾನೆ, ಅವರ ತುಂಟತನಗಳ ವರ್ಣಿಸುವ ಜೊತೆಗೆ, ತಾನು ಆತನನ್ನು ಹೇಗೆಲ್ಲ ಪ್ರೀತಿಸುತ್ತೀನಿ ಎಂದು ಶ್ರೀವಲ್ಲಿ ಹೇಳುವ ಸಾಲುಗಳು ಈಗ ಬಿಡುಗಡೆ ಆಗಿರುವ ಹಾಡಿನಲ್ಲಿದೆ. ‘ಶ್ರೀವಲ್ಲಿ’ ಹಾಡಿನಂತೆಯೇ ಈಗ ಬಿಡುಗಡೆ ಆಗಿರುವ ‘ಸೂಸೇಕಿ’ (ದಿ ಕಪಲ್ ಸಾಂಗ್) ನಲ್ಲಿ ಮೆದುವಾದ ಸಂಗೀತವನ್ನು ದೇವಿಶ್ರೀಪ್ರಸಾದ್ ನೀಡಿದ್ದಾರೆ.
‘ಪುಷ್ಪ’ ಸಿನಿಮಾದ ಮೊದಲ ಭಾಗದಲ್ಲಿ ಪ್ರತಿ ಹಾಡಿಗೂ ಒಂದೊಂದು ಭಿನ್ನವಾದ ‘ಹುಕ್ ಸ್ಟೆಪ್’ಗಳಿದ್ದವು ಹಾಗೆಯೇ ಈ ಹಾಡಿಗೂ ಒಂದು ಹುಕ್ ಸ್ಟೆಪ್ ಅನ್ನು ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಸೃಷ್ಟಿಸಿದ್ದಾರೆ. ಲೇಜಿಯಾಗಿ ಕಾಣುವ ಈ ಹುಕ್ ಸ್ಟೆಪ್, ರೀಲ್ಸ್ ಮಾಡುವವರ ಮೆಚ್ಚಿನ ಸ್ಟೆಪ್ ಆಗಲಿದೆ. ಈಗ ಬಿಡುಗಡೆ ಆಗಿರುವ ಲಿರಿಕಲ್ ವಿಡಿಯೋನಲ್ಲಿ ಸಿನಿಮಾಕ್ಕಾಗಿ ಚಿತ್ರೀಕರಣ ಮಾಡಿದ ಹಾಡನ್ನು ತೋರಿಸಲಾಗಿಲ್ಲ, ಬದಲಿಗೆ ಹಾಡಿನ ಚಿತ್ರೀಕರಣ ನಡೆಯುವ ಮುನ್ನ ಅಲ್ಲು ಅರ್ಜುನ್, ರಶ್ಮಿಕಾ ಸೇರಿದಂತೆ ಇತರೆ ಕಲಾವಿದರು ಮಾಡಿರುವ ತರಬೇತಿಯ ದೃಶ್ಯಗಳ ವಿಡಿಯೋ ತುಣುಕುಗಳನ್ನು ನೀಡಲಾಗಿದೆ.
ಇದನ್ನೂ ಓದಿ:‘ಪುಷ್ಪ 2’ ಚಿತ್ರದಿಂದ ಬಿಡುಗಡೆ ಆಗಲಿದೆ ಕಪಲ್ ಸಾಂಗ್; ಹಾಡಿನ ವಿಶೇಷತೆಗಳೇನು?
ಉತ್ಸಾಹಭರಿತವಾಗಿ ಇಡೀ ಚಿತ್ರತಂಡ ಈ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿರುವುದು ವಿಡಿಯೋದಿಂದ ತಿಳಿದು ಬರುತ್ತಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜೊತೆಗೆ ನಿರ್ದೇಶಕ ಸುಕುಮಾರ್, ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಇನ್ನೂ ಕೆಲವು ತಂತ್ರಜ್ಞರು ಸಹ ಸ್ಟೆಪ್ ಹಾಕಿದ್ದಾರೆ. ಅಂದಹಾಗೆ ಈ ಹಾಡಿಗೆ ಸಾಹಿತ್ಯ (ತೆಲುಗು) ಬರೆದಿರುವುದು ಆಸ್ಕರ್ ವಿಜೇತ ಚಂದ್ರಭೋಸ್. ಕನ್ನಡ ವರ್ಷನ್ ಬರೆದಿರುವುದು ವರದರಾಜು ಚಿಕ್ಕಬಳ್ಳಾಪುರ. ಹಾಡಿರುವುದು ಖ್ಯಾತ ಗಾಯಕಿ ಶ್ರೆಯಾ ಘೋಷಾಲ್. ಹಾಡು ತೆಲುಗು, ತಮಿಳು, ಹಿಂದಿ, ಮಲಯಾಳಂ, ಬಾಂಗ್ಲಾ ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆ ಆಗಿದೆ.
‘ಪುಷ್ಪ 2’ ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡುತ್ತಿದ್ದು, ಮೈತ್ರಿ ಮೂವಿ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆಗೆ ಡಾಲಿ ಧನಂಜಯ್, ಫಹಾದ್ ಫಾಸಿಲ್, ಸುನಿಲ್ ಇನ್ನೂ ಹಲವು ಕಲಾವಿದರು ನಟಿಸಿದ್ದಾರೆ. ಸಿನಿಮಾ ಆಗಸ್ಟ್ 15 ರಂದು ತೆರೆಗೆ ಬರಲಿದೆ. ಭಾರತದಲ್ಲಿ ಮಾತ್ರವೇ ಅಲ್ಲದೆ, ಅಮೆರಿಕ, ಯುಎಇ, ರಷ್ಯಾ, ಜಪಾನ್ಗಳಲ್ಲಿಯೂ ಏಕಕಾಲಕ್ಕೆ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದ್ದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:53 pm, Wed, 29 May 24