ಮೂವರು ಹೆಣ್ಣು ಮಕ್ಕಳ ತಾಯಿಗೆ ಸಹಾಯ ಮಾಡಿದ ನಟ ಲಾರೆನ್ಸ್: ವಿಡಿಯೋ

Raghava Lawrence: ನಟ, ನೃತ್ಯ ನಿರ್ದೇಶಕ, ನಿರ್ದೇಶಕ ರಾಘವ್ ಲಾರೆನ್ಸ್ ತಮ್ಮ ನಟನೆಯಷ್ಟೆ, ತಮ್ಮ ಸಮಾಜ ಸೇವೆಯಿಂದಲೂ ಜನಪ್ರಿಯರು. ಇದೀಗ ಸಂಕಷ್ಟದಲ್ಲಿದ್ದ ಮಹಿಳೆಯೊಬ್ಬರಿಗೆ ಲಾರೆನ್ಸ್ ಸಹಾಯ ಮಾಡಿದ್ದಾರೆ.

ಮೂವರು ಹೆಣ್ಣು ಮಕ್ಕಳ ತಾಯಿಗೆ ಸಹಾಯ ಮಾಡಿದ ನಟ ಲಾರೆನ್ಸ್: ವಿಡಿಯೋ

Updated on: Mar 31, 2024 | 3:37 PM

ನಿರ್ದೇಶಕನ ಕಾರು ಒರೆಸುವವನಾಗಿ ಕೆಲಸ ಆರಂಭಿಸಿ, ಸೈಡ್ ಡ್ಯಾನ್ಸರ್ ಆಗಿ ಬಳಿಕ ಮುಖ್ಯ ಡ್ಯಾನ್ಸರ್ ಆಗಿ, ಬಳಿಕ ಡ್ಯಾನ್ಸ್ ಮಾಸ್ಟರ್ ಆಗಿ ಆ ಬಳಿಕ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಹೀಗೆ ಸೊನ್ನೆಯಿಂದ ಬೆಳೆಯುತ್ತಲೇ ಬಂದಿರುವ ನಟ ರಾಘವ್ ಲಾರೆನ್ಸ್ (raghava lawrence). ಕಡುಬಡತನ ಕಂಡು ಕಷ್ಟದ ಜೀವನ ಸವೆಸಿ ಬೆಳೆದು ಒಳ್ಳೆಯ ಸ್ಥಾನ-ಮಾನ ಗಳಿಸಿರುವ ಲಾರೆನ್ಸ್, ತಾವು ದುಡಿದ ಹಣದಲ್ಲಿ ನಿಗದಿತ ಮೊತ್ತವನ್ನು ಕಷ್ಟದಲ್ಲಿರುವವರ ಸೇವೆಗೆಂದೇ ಮುಡಿಪಾಗಿಟ್ಟಿದ್ದಾರೆ. ಲಾರೆನ್ಸ್ ಮಾಡಿರುವ ಸಹಾಯಗಳ ದೊಡ್ಡ ಪಟ್ಟಿಯೇ ಇದೆ. ಇದೀಗ ಈ ಪಟ್ಟಿಗೆ ಮತ್ತೊಂದು ನೆರವು ಸೇರ್ಪಡೆಯಾಗಿದೆ.

ಬಾಲ ಹೆಸರಿನ ಯೂಟ್ಯೂಬರ್, ಕಾಮಿಡಿ ನಟರೊಬ್ಬರು ತಮಿಳುನಾಡಿನಲ್ಲಿ ಇತ್ತೀಚೆಗೆ ಜನಪ್ರಿಯರಾಗಿದ್ದಾರೆ. ಸಣ್ಣ ಪುಟ್ಟ ಹಾಸ್ಯ ಪಾತ್ರಗಳಲ್ಲಿ ನಟಿಸುತ್ತಿರುವ ಬಾಲ, ಬಡವರಿಗೆ, ಅಶಕ್ತರಿಗೆ ಸಹಾಯ ಮಾಡುವ ಗುಣವನ್ನು ಸಹ ಹೊಂದಿದ್ದಾರೆ. ತಾವು ಮಾಡುತ್ತಿರುವ ಈ ಕಾರ್ಯಕ್ಕೆ ನಟ ಲಾರೆನ್ಸ್ ಅವರೇ ಕಾರಣ ಎಂದು ಸಹ ಬಾಲ ಹೇಳಿಕೊಂಡಿದ್ದಾರೆ. ಇದೀಗ ಬಾಲ ಹಾಗೂ ಲಾರೆನ್ಸ್ ಇಬ್ಬರೂ ಸೇರಿ ಮಹಿಳೆಯೊಬ್ಬರಿಗೆ ಸಹಾಯ ಮಾಡಿದ್ದಾರೆ. ಅದರ ಫೋಟೊ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಪತಿಯನ್ನು ಕಳೆದುಕೊಂಡ ಮಹಿಳೆಯೊಬ್ಬಾಕೆ ತಮ್ಮ ಮೂವರು ಹೆಣ್ಣು ಮಕ್ಕಳನ್ನು ಸಾಕಲು ಸಾಕಷ್ಟು ಕಷ್ಟಪಡುತ್ತಿದ್ದಳು, ಚೆನ್ನಾಗಿ ದುಡಿದು ಒಂದು ಆಟೋ ಖರೀದಿಸಬೇಕೆಂಬ ಹಂಬಲ ಆ ಮಹಿಳೆಯದ್ದು, ಆದರೆ ಆರ್ಥಿಕ ಸ್ಥಿತಿ ಸರಿಯಿಲ್ಲ. ಬಾಲ ಹಾಗೂ ಲಾರೆನ್ಸ್ ಅವರು ಈ ಮಹಿಳೆಗೆ ಸಹಾಯ ಮಾಡಿದ್ದಾರೆ. ಇಬ್ಬರೂ ಸೇರಿ ಹೊಸ ಆಟೋ ಒಂದನ್ನು ಆ ಮಹಿಳೆಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಸೆಲೆಬ್ರಿಟಿಗಳು ಮಾಡಿರುವ ಸಹಾಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ:ನನ್ನ ಟ್ರಸ್ಟ್​ಗೆ ಹಣ ಕಳಿಸಬೇಡಿ: ಮನವಿ ಮಾಡಿದ ರಾಘವ್ ಲಾರೆನ್ಸ್

ಹೊಸ ಆಟೋನಲ್ಲಿ ಬಾಲ, ಆ ಮಹಿಳೆಯನ್ನು ಕೂರಿಸಿಕೊಂಡು ಹೋದರು. ಬಳಿಕ ಇನ್ನೂ ಕೆಲವು ಆಟೋಗಳು ಆ ಮಹಿಳೆಯಿದ್ದ ಆಟೋವನ್ನು ಸುತ್ತುವರೆದವು. ವಿಶೇಷವೆಂದರೆ ಸುತ್ತುವರೆದ ಆಟೋಗಳ ಚಾಲಕರೆಲ್ಲ ಮಹಿಳೆಯರೇ ಆಗಿದ್ದರು. ಬಳಿಕ ಆಟೋ ಓಡಿಸುತ್ತಿದ್ದ ಬಾಲ ಮಾಸ್ಕ್ ತೆಗೆದು ಈ ಆಟೋವನ್ನು ನಿಮಗೆ ಉಡುಗೊರೆಯಾಗಿ ನೀಡಲಾಗುತ್ತಿದೆ. ಸಣ್ಣ ಮೊತ್ತದ ಹಣ ನಾನು ಹಾಕಿದ್ದೇನೆ, ದೊಡ್ಡ ಮೊತ್ತದ ಹನವನ್ನು ಇನ್ನೊಬ್ಬರು ಹಾಕಿದ್ದಾರೆ ಎಂದು ಅವರನ್ನು ಕರೆದಾಗ ಲಾರೆನ್ಸ್ ತಮ್ಮ ಕಾರಿನಲ್ಲಿ ಅಲ್ಲಿಗೆ ಬಂದಿದ್ದಾರೆ. ಲಾರೆನ್ಸ್ ಅನ್ನು ಕಂಡ ಆ ಮಹಿಳೆಯ ಖುಷಿಗೆ ಪಾರವೇ ಇರಲಿಲ್ಲ. ಲಾರೆನ್ಸ್ ಹಾಗೂ ಬಾಲಾರನ್ನು ಅವರೇ ಉಡುಗೊರೆ ಕೊಟ್ಟ ಆಟೋದಲ್ಲಿ ಕೂರಿಸಿಕೊಂಡು ಮಹಿಳೆ ಸವಾರಿಗೆ ಸಹ ಕರೆದುಕೊಂಡು ಹೋದರು.

ಲಾರೆನ್ಸ್ ಈ ರೀತಿ ಹಲವಾರು ಮಂದಿಗೆ ಸಹಾಯ ಮಾಡಿದ್ದಾರೆ. ಹಲವು ಮಕ್ಕಳಿಗೆ ಆಪರೇಷನ್ ಮಾಡಿಸಿದ್ದಾರೆ. ಹಲವಾರು ಮಕ್ಕಳನ್ನು ದತ್ತು ಪಡೆದು ಓದಿಸುತ್ತಿದ್ದಾರೆ. ಅಂಗವಿಕಲಿಗೆ ಬದುಕು ಕಲ್ಪಿಸಿದ್ದಾರೆ. ವಯೋವೃದ್ಧರಿಗಾಗಿ ವೃದ್ಧಾಶ್ರಮ ಕಟ್ಟಿಸಿದ್ದಾರೆ. ವೃದ್ಧಾಶ್ರಮಗಳಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಲಾರೆನ್ಸ್ ತಮ್ಮ ಡ್ಯಾನ್ಸ್, ನಟನೆ, ನಿರ್ದೇಶನದ ಜೊತೆಗೆ ತಮ್ಮ ಸಮಾಜ ಸೇವೆಯಿಂದಲೂ ಬಹಳ ಜನಪ್ರಿಯರಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:33 pm, Sun, 31 March 24