ರಜನೀಕಾಂತ್ ಹೊಸ ಸಿನಿಮಾಕ್ಕೆ ಅವರ ಅಭಿಮಾನಿಯೇ ವಿಲನ್

Rajinikanth: ನಟ ರಜನೀಕಾಂತ್ ಗಾಗಿ ಲೋಕೇಶ್ ಕನಗರಾಜ್ ಸಿನಿಮಾ ಒಂದನ್ನು ನಿರ್ದೇಶಿಸಲಿದ್ದಾರೆ. ಈ ಸಿನಿಮಾದಲ್ಲಿ ರಜನೀಕಾಂತ್ ಅಭಿಮಾನಿಯೇ ರಜನೀ ಎದುರು ವಿಲನ್ ಆಗಿ ನಟಿಸಲಿದ್ದಾರೆ.

ರಜನೀಕಾಂತ್ ಹೊಸ ಸಿನಿಮಾಕ್ಕೆ ಅವರ ಅಭಿಮಾನಿಯೇ ವಿಲನ್
ರಜನೀಕಾಂತ್
Follow us
ಮಂಜುನಾಥ ಸಿ.
|

Updated on: Nov 03, 2023 | 6:21 PM

ರಜನೀಕಾಂತ್ (Rajinikanth) ನಟನೆಯ ‘ಜೈಲರ್’ ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಎನಿಸಿಕೊಂಡಿದೆ. ರಜನೀಕಾಂತ್​ರ ಹಳೆಯ ಚಾರ್ಮ್​ ಅನ್ನು ಮತ್ತೊಮ್ಮೆ ನೆನಪು ಮಾಡಿತ್ತು ‘ಜೈಲರ್’ ಸಿನಿಮಾ. ‘ಜೈಲರ್’ ಭಾರಿ ಹಿಟ್ ಆದ ಬಳಿಕ ರಜನೀಕಾಂತ್​ರ ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ . ಅದರಲ್ಲಿಯೂ ತಮಿಳಿನ ಟಾಪ್ ಯುವ ನಿರ್ದೇಶಕ ಎನಿಸಿಕೊಂಡಿರುವ ಲೋಕೇಶ್ ಕನಗರಾಜ್, ರಜನೀಕಾಂತ್​ಗೆ ಸಿನಿಮಾ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದ ಬಳಿಕವಂತೂ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ. ಇದೀಗ ಬಂದಿರುವ ಸುದ್ದಿಯೆಂದರೆ ರಜನೀಕಾಂತ್-ಲೋಕೇಶ್ ಕನಗರಾಜ್ ಕಾಂಬಿನೇಷನ್​ ಸಿನಿಮಾದಲ್ಲಿ ರಜನೀಕಾಂತ್​ರ ಅಪ್ಪಟ ಅಭಿಮಾನಿಯೇ ಅವರ ಎದುರು ವಿಲನ್ ಆಗಿ ನಟಿಸಲಿದ್ದಾರೆ.

ಹೌದು, ರಜನೀಕಾಂತ್​ ಅವರ 171ನೇ ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾ ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿರಲಿದೆ. ಲೋಕೇಶ್ ಕನಗರಾಜ್, ತಮ್ಮ ಸಿನಿಮಾದಲ್ಲಿ ವಿಲನ್​ ಪಾತ್ರಗಳ ಬಗ್ಗೆ ಅತಿಯಾದ ಕಾಳಜಿವಹಿಸುತ್ತಾರೆ. ಹೀರೋಗೆ ಸರಿಸಮನಾದ ವಿಲನ್​ ಪಾತ್ರವನ್ನು ಸೃಷ್ಠಿಸುತ್ತಾರೆ. ಅಂತೆಯೇ ರಜನೀಕಾಂತ್​ರ ಸಿನಿಮಾಕ್ಕಾಗಿಯೂ ಪವರ್​ಫುಲ್​ ವಿಲನ್ ಪಾತ್ರವನ್ನು ಸೃಷ್ಟಿಸಲಾಗಿದ್ದು, ಈ ಪಾತ್ರಕ್ಕೆ ರಜನೀಕಾಂತ್​ರ ಅಪ್ಪಟ ಅಭಿಮಾನಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಜೈಲರ್ ಸಿನಿಮಾಕ್ಕೆ ಮೊದಲ ಆಯ್ಕೆ ರಜನೀಕಾಂತ್ ಅಲ್ಲ: ಮತ್ಯಾರು?

ಜನಪ್ರಿಯ ನಟ, ನಿರ್ದೇಶಕ ಹಾಗೂ ನೃತ್ಯ ನಿರ್ದೇಶಕರೂ ಆಗಿರುವ ಹಾಗೂ ರಜನೀಕಾಂತ್​ರ ದೊಡ್ಡ ಅಭಿಮಾನಿಯೂ ಆಗಿರುವ ರಾಘವ್ ಲಾರೆನ್ಸ್ ಅವರು ರಜನೀಕಾಂತ್​ರ ಎದುರು ವಿಲನ್ ಆಗಿ ನಟಿಸಲಿದ್ದಾರೆ. ರಾಘವ್ ಲಾರೆನ್ಸ್, ರಜನೀಕಾಂತ್​ರ ದೊಡ್ಡ ಅಭಿಮಾನಿ. ರಜನೀಕಾಂತ್ ಅವರಿಂದಲೇ ತಾವು ನೃತ್ಯಗಾರನಾಗಿ ವೃತ್ತಿ ಆರಂಭಿಸಿದ್ದು ಎಂದು ಈ ಹಿಂದೆ ಹಲವು ಭಾರಿ ಹೇಳಿಕೊಂಡಿದ್ದರು ರಾಘವ್. ಈಗ ರಜನೀಕಾಂತ್ ಎದುರೇ ವಿಲನ್ ಆಗಿ ನಟಿಸಲಿದ್ದಾರೆ.

ರಜನೀಕಾಂತ್ ನಟಿಸಿದ್ದ ‘ಚಂದ್ರಮುಖಿ’ ಸಿನಿಮಾದ ಮುಂದಿನ ಭಾಗ ‘ಚಂದ್ರಮುಖಿ 2’ ಸಿನಿಮಾದಲ್ಲಿ ರಾಘವ್ ಲಾರೆನ್ಸ್ ನಾಯಕನಾಗಿ ನಟಿಸಿದ್ದರು. ಮೊದಲ ‘ಚಂದ್ರಮುಖಿ’ ಸಿನಿಮಾದಲ್ಲಿ ರಜನೀಕಾಂತ್ ನಿರ್ವಹಿಸಿದ್ದ ಪಾತ್ರವನ್ನೇ ರಾಘವ್ ನಿರ್ವಹಿಸಿದ್ದರು. ಆದರೆ ಈಗ ಸ್ವತಃ ರಜನೀಕಾಂತ್ ಎದುರು ವಿಲನ್ ಆಗಿಯೇ ನಟಿಸುವ ಅವಕಾಶ ಅವರನ್ನು ಅರಸಿ ಬಂದಿದೆ.

ರಜನೀಕಾಂತ್​ರ 171ನೇ ಸಿನಿಮಾ, ಲೋಕೇಶ್ ಕನಗರಾಜ್ ಅವರ ಆರನೇ ಸಿನಿಮಾ ಆಗಲಿದೆ. ರಜನೀಕಾಂತ್​ ಗೆ ನಿರ್ದೇಶಿಸಲಿರುವ ಮೊದಲ ಸಿನಿಮಾ. ಇನ್ನು ರಾಘವ್ ಲಾರೆನ್ಸ್​ಗೆ ಸಹ ರಜನೀಕಾಂತ್ ಅವರ ಜೊತೆಯಲ್ಲಿ ಇದು ಮೊದಲ ಸಿನಿಮಾ. ಸಿನಿಮಾದ ಚಿತ್ರೀಕರಣ ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಪ್ರಾರಂಭ ಆಗಲಿದೆ. ರಜನೀಕಾಂತ್ ಪ್ರಸ್ತುತ ಲಾಲ್ ಸಲಾಂ ಹಾಗೂ ಇನ್ನೂ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದು ಆ ಸಿನಿಮಾದ ಬಳಿಕವಷ್ಟೆ ಲೋಕೇಶ್ ಜೊತೆಗಿನ ಸಿನಿಮಾ ಪ್ರಾರಂಭವಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ