
ಕನ್ನಡದ ಪ್ರತಿಭಾವಂತ ನಟ ಮತ್ತು ನಿರ್ದೇಶಕ ರಾಜ್ ಬಿ ಶೆಟ್ಟಿ ಈಗ ತಮಿಳು ಚಿತ್ರರಂಗದಲ್ಲೂ ಸಖತ್ ಬ್ಯುಸಿಯಾಗಿದ್ದಾರೆ. ಸದ್ಯ ಅವರು ಖ್ಯಾತ ನಿರ್ದೇಶಕ ತ್ಯಾಗರಾಜನ್ ಕುಮಾರರಾಜ ಆಕ್ಷನ್ ಕಟ್ ಹೇಳಿರುವ ‘ಪಾಕೆಟ್ ನಾವೆಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಕಾಲಿವುಡ್ ಸ್ಟಾರ್ ನಟ ವಿಜಯ್ ಸೇತುಪತಿ ಜೊತೆ ರಾಜ್ ಬಿ ಶೆಟ್ಟಿ ತೆರೆ ಹಂಚಿಕೊಂಡಿದ್ದಾರೆ. ಇದೀಗ ರಾಜ್ ಅವರು ವಿಜಯ್ ಸೇತುಪತಿ ಜೊತೆಗಿರುವ ವಿಶೇಷ ಫೋಟೋ ಒಂದನ್ನು ಹಂಚಿಕೊಂಡು ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ.
ರಾಜ್ ಬಿ ಶೆಟ್ಟಿ ಹಂಚಿಕೊಂಡಿರುವ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಮತ್ತು ವಿಜಯ್ ಸೇತುಪತಿ ಇಬ್ಬರೂ ಪರಸ್ಪರರ ಶರ್ಟ್ ಕಾಲರ್ ಹಿಡಿದುಕೊಂಡಿದ್ದಾರೆ. ಕೋಪದಲ್ಲಿ ಇರೋ ಬದಲು ಆಕಾಶದತ್ತ ಮುಖ ಮಾಡಿ ಜೋರಾಗಿ ನಗುತ್ತಿರುವುದು ಫೋಟೋದ ವಿಶೇಷವಾಗಿದೆ. ಈ ಫೋಟೋವನ್ನು ಸ್ವತಃ ವಿಜಯ್ ಸೇತುಪತಿ ಅವರೇ ನಿರ್ದೇಶಿಸಿದ್ದಾರೆ ಎಂದು ರಾಜ್ ತಮ್ಮ ಪೋಸ್ಟ್‌ನಲ್ಲಿ ತಮಾಷೆಯಾಗಿ ಬರೆದುಕೊಂಡಿದ್ದಾರೆ.
‘ಸೂಪರ್ ಡಿಲಕ್ಸ್’ ಖ್ಯಾತಿಯ ನಿರ್ದೇಶಕ ತ್ಯಾಗರಾಜನ್ ಕುಮಾರರಾಜ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರಾಜ್ ಬಿ ಶೆಟ್ಟಿ ತಮ್ಮ ಪೋಸ್ಟ್‌ನಲ್ಲಿ ನಿರ್ದೇಶಕರನ್ನು ‘ಟಿಕೆ’ ಎಂದು ಉಲ್ಲೇಖಿಸಿದ್ದಾರೆ. ಈ ಬಹುನಿರೀಕ್ಷಿತ ‘ಪಾಕೆಟ್ ನಾವೆಲ್’ ಸಿನಿಮಾ ಮುಂದಿನ ವರ್ಷ ಜನವರಿ 14ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಸದ್ದಿಲ್ಲದೆ ಹೊಸ ಸಿನಿಮಾ ನಿರ್ದೇಶನ ಆರಂಭಿಸಿದರೇ ರಾಜ್ ಬಿ ಶೆಟ್ಟಿ?
ಕನ್ನಡದಲ್ಲಿ ಹಲವು ವಿಭಿನ್ನ ಸಿನಿಮಾಗಳನ್ನು ನೀಡಿರುವ ರಾಜ್ ಬಿ ಶೆಟ್ಟಿ, ಸದ್ಯ ನಿರ್ದೇಶನ ಮತ್ತು ನಟನೆ ಎರಡರಲ್ಲೂ ಸಕ್ರಿಯರಾಗಿದ್ದಾರೆ. ಮಲಯಾಳಂ ಚಿತ್ರರಂಗದಲ್ಲೂ ಮಿಂಚಿರುವ ಇವರು, ಈಗ ತಮಿಳಿನಲ್ಲಿ ವಿಜಯ್ ಸೇತುಪತಿ ಅಂತಹ ದಿಗ್ಗಜ ನಟನ ಜೊತೆ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಮಾಳವಿಕಾ ಮೋಹನನ್ ಹಾಗೂ ಕಿಶೋರ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.