ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರ ಪರಿಚಯವನ್ನು ಹೊಸದಾಗಿ ಹೇಳಬೇಕಿಲ್ಲ. ಅದ್ಭುತ ಕಥೆಗಳನ್ನು ರಚಿಸುವುದರಲ್ಲಿ ಅವರು ಎತ್ತಿದ ಕೈ. ‘ಬಾಹುಬಲಿ’, ‘ಬಾಹುಬಲಿ 2’, ‘ಬಜರಂಗಿ ಭಾಯಿಜಾನ್’, ‘ಆರ್ಆರ್ಆರ್’ ಸೇರಿ ಸಾಕಷ್ಟು ಹಿಟ್ ಸಿನಿಮಾಗಳಿಗೆ ಕಥೆ ಕೊಟ್ಟಿದ್ದು ಇವರೇ. ಕೆಲ ಸಿನಿಮಾಗಳನ್ನೂ ಅವರು ನಿರ್ದೇಶನ ಮಾಡಿದ್ದಾರೆ. ಆದರೆ, ಈ ವರೆಗೆ ಅವರು ನಟನೆಗೆ ಇಳಿದಿಲ್ಲ. ಸಾಕಷ್ಟು ಸಿನಿಮಾ ಆಫರ್ಗಳನ್ನು ಅವರು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಈಗ ಪ್ರಧಾನಿ ನರೇಂದ್ರ ಮೋದಿ ಪಾತ್ರದಲ್ಲಿ ಕಾಣಿಸಿಕೊಳ್ಳೋಕೆ ಅವರಿಗೆ ಆಫರ್ ಬಂದಿದೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಜೋರಾಗಿದೆ.
ಪ್ರಧಾನಿ ಮೋದಿ ಇತ್ತೀಚಿನ ದಿನಗಳಲ್ಲಿ ಉದ್ದನೆಯ ಗಡ್ಡ ಬಿಟ್ಟಿದ್ದಾರೆ. ಅವರ ಆ ಲುಕ್ ಅನೇಕರಿಗೆ ಇಷ್ಟವಾಗಿದೆ. ಇದೇ ರೀತಿ ವಿಜಯೇಂದ್ರ ಪ್ರಸಾದ್ ಕೂಡ ಉದ್ದನೆಯ ಗಡ್ಡದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಹಾವ ಭಾವ, ಲುಕ್ ಎಲ್ಲವೂ ಬೇರೆ ರೀತಿ ಆಗಿದೆಯಾದರೂ ಇವರ ಗಡ್ಡದಲ್ಲಿ ಸಾಮ್ಯತೆ ಇದೆ. ಇದು ಟಾಲಿವುಡ್ ಸಿನಿಮಾ ಮಂದಿಯ ಕಣ್ಣು ಕುಕ್ಕಿದೆ.
ಯುವ ನಿರ್ದೇಶಕರೊಬ್ಬರು ನರೇಂದ್ರ ಮೋದಿ ಜೀವನ ಆಧರಿಸಿ ಕಿರುಚಿತ್ರ ಮಾಡುತ್ತಿದ್ದಾರೆ. ಬಹಳ ಕಡಿಮೆ ಅವಧಿಯಲ್ಲಿ ಸಾಕಷ್ಟು ವಿಚಾರಗಳನ್ನು ತೋರಿಸುವ ಆಲೋಚನೆ ಅವರದ್ದು. ಈ ಕಿರುಚಿತ್ರದಲ್ಲಿ ನರೇಂದ್ರ ಮೋದಿ ಪಾತ್ರಕ್ಕೆ ಯಾರು ಸೂಕ್ತ ಎನ್ನುವ ಬಗ್ಗೆ ಆ ಯುವ ನಿರ್ದೇಶಕ ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಅವರಿಗೆ ವಿಜಯೇಂದ್ರ ಪ್ರಸಾದ್ ಲುಕ್ ನೆನಪಿಗೆ ಬಂದಿದೆ ಎನ್ನಲಾಗುತ್ತಿದೆ.
ವಿಜಯೇಂದ್ರ ಪ್ರಸಾದ್ ಅವರು ಈವರೆಗೆ ಒಂದೇ ಒಂದು ಸಿನಿಮಾದಲ್ಲಿ ನಟಿಸಿಲ್ಲ. ಈಗ ಅವರಿಗೆ ಬಂದಿರುವ ಈ ಆಫರ್ ಕೇಳಿ ಹೇಗೆ ಪ್ರತಿಕ್ರಿಯಿಸಿದ್ದಾರೆ, ಈ ಆಫರ್ಅನ್ನು ಅವರು ಒಪ್ಪಿಕೊಳ್ಳುತ್ತಾರಾ? ಅನ್ನೋದು ಸದ್ಯದ ಕುತೂಹಲ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದೆ. ಒಂದೊಮ್ಮೆ ಅವರು ಈ ಪಾತ್ರ ಒಪ್ಪಿಕೊಂಡರೆ ಇದೇ ಮೊದಲ ಬಾರಿಗೆ ಅವರು ನಟನೆಗೆ ಇಳಿದಂತಾಗುತ್ತದೆ.
ಇದನ್ನೂ ಓದಿ: ನಿರ್ದೇಶಕ ರಾಜಮೌಳಿಗೆ ‘ನಾವ್ ರೆಡಿ ಸಾರ್’ ಎಂದ RRR ಹೀರೋಗಳು
ರಾಜಮೌಳಿ ರಿಜೆಕ್ಟ್ ಮಾಡಿದ್ದ ಸಲ್ಮಾನ್ ಖಾನ್ ಸಿನಿಮಾ ಸೂಪರ್ ಹಿಟ್; ವಿಜಯೇಂದ್ರ ಪ್ರಸಾದ್ ಪಶ್ಚಾತ್ತಾಪ