ಭಾರತದಲ್ಲಿ ಸ್ಟಾರ್ ನಟರಷ್ಟೇ ಹಿಂಬಾಲಕರನ್ನು ಹೊಂದಿರುವ ಬೆರಳೆಣಿಕೆಯ ನಿರ್ದೇಶಕರಲ್ಲಿ ರಾಜಮೌಳಿ ಒಬ್ಬರು. ಇದೇ ಕಾರಣಕ್ಕೆ ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ‘ಬಾಹುಬಲಿ’ ಚಿತ್ರದ ನಂತರವಂತೂ ಈ ಸಂಖ್ಯೆ ಹೆಚ್ಚಾಗಿದೆ. ಇದೀಗ ಅಭಿಮಾನಿಗಳು ‘ಆರ್ಆರ್ಆರ್’ ಚಿತ್ರಕ್ಕೆ ಕಾಯುತ್ತಿದ್ದಾರೆ. ಆದರೆ ಚಿತ್ರ ಮುಂದೂಡಲ್ಪಟ್ಟಿದೆ. ಈ ಚಿತ್ರಗಳಿಗೂ ಮುನ್ನ ರಾಜಮೌಳಿ ನಿರ್ದೇಶನದ ‘ಈಗ’ ಚಿತ್ರ ಎಲ್ಲೆಡೆಯಿಂದ ಮೆಚ್ಚುಗೆ ಪಡೆದಿತ್ತು. ಕಿಚ್ಚ ಸುದೀಪ್, ಸಮಂತಾ, ನಾನಿ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಈ ಚಿತ್ರಕ್ಕೆ ‘ನೊಣ’ವೇ ನಾಯಕ! ಆದರೆ ಈ ನೊಣವನ್ನು ಆಧರಿಸಿ ಒಂದು ಗಟ್ಟಿ ಪಾತ್ರವನ್ನು ರಾಜಮೌಳಿ ತೆರೆಗೆ ತಂದಿದ್ದರ ಹಿಂದೆ ಒಂದು ಅಚ್ಚರಿಯ ಕತೆ ಇದೆ. ಹೌದು. ಅದು ಈಗ ಬಹಿರಂಗವಾಗಿದೆ. ಅದೂ ಕೂಡ ‘ಆರ್ಆರ್ಆರ್’ ಪ್ರಚಾರ ಕಾರ್ಯಕ್ರಮದಲ್ಲಿ!
‘ಆರ್ಆರ್ಆರ್’ ಹಿಂದಿಯಲ್ಲೂ ತೆರೆಕಾಣುತ್ತಿರುವುದರಿಂದ ಚಿತ್ರತಂಡ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿತ್ತು. ಕಿರುತೆರೆಯ ಖ್ಯಾತ ಕಾರ್ಯಕ್ರಮ ‘ಕಪಿಲ್ ಶರ್ಮಾ ಶೋ’ನಲ್ಲಿ ರಾಜಮೌಳಿ, ರಾಮ್ ಚರಣ್, ಜ್ಯೂ.ಎನ್ಟಿಆರ್ ಹಾಗೂ ಆಲಿಯಾ ಭಟ್ ಮೊದಲಾದವರು ಭಾಗಿಯಾಗಿದ್ದರು. ಈ ವೇಳೆ ಜ್ಯೂ.ಎನ್ಟಿಆರ್ ಅಚ್ಚರಿಯ ವಿಚಾರವೊಂದನ್ನು ಬಹಿರಂಗಗೊಳಿಸಿದ್ದಾರೆ.
ನೊಣಗಳನ್ನು ಫ್ರಿಡ್ಜ್ನಲ್ಲಿಟ್ಟು ಅದನ್ನು ಅಧ್ಯಯನ ಮಾಡಿದ್ದ ರಾಜಮೌಳಿ:
ಜ್ಯೂ.ಎನ್ಟಿಆರ್ ಮಾತನಾಡುತ್ತಾ ರಾಜಮೌಳಿ ‘ಈಗ’ ಚಿತ್ರದ ಸಂದರ್ಭದಲ್ಲಿ ನೊಣಗಳನ್ನು ಅಧ್ಯಯನ ಮಾಡಲು ಏನೆಲ್ಲಾ ಮಾಡಿದ್ದರು ಎಂದು ವಿವರಿಸಿದ್ದಾರೆ. ರಾಜಮೌಳಿ ನೊಣಗಳನ್ನು ಫ್ರಿಡ್ಜ್ನಲ್ಲಿಟ್ಟು ‘ಹೈಬರ್ನೇಟ್’ ಮಾಡುತ್ತಿದ್ದರು. ನಂತರ ಅವುಗಳ ಚಲನವಲನ, ದೇಹ ರಚನೆ ಮೊದಲಾದವುಗಳನ್ನು ಅಧ್ಯಯನ ಮಾಡುತ್ತಿದ್ದರು ಎಂದು ಜ್ಯೂ ಎನ್ಟಿಆರ್ ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಫ್ರಿಡ್ಜ್ ಬಾಗಿಲು ತೆಗೆದರೆ ಆಹಾರಕ್ಕಿಂತ ಹೆಚ್ಚು ನೊಣಗಳೇ ಇರುತ್ತಿದ್ದವು ಎಂದು ನಗುತ್ತಾ ವಿವರಿಸಿದ್ದಾರೆ ಜ್ಯೂ.ಎನ್ಟಿಆರ್.
ಹೈಬರ್ನೇಷನ್ ಎಂದರೆ ತಣ್ಣನೆಯ ವಾತಾವರಣದಲ್ಲಿ ಆವರಿಸುವ ಗಾಢ ನಿದ್ದೆ ಎನ್ನಬಹುದು. ರಾಜಮೌಳಿ ನೊಣಗಳನ್ನು ಫ್ರಿಡ್ಜ್ನಲ್ಲಿಟ್ಟು ಅವುಗಳನ್ನು ಅಧ್ಯಯನ ಮಾಡಲು ಇದೇ ವಿಧಾನ ಅನುಸರಿಸಿದ್ದರು. ಜ್ಯೂ.ಎನ್ಟಿಆರ್ ಮುಂದುವರೆದು ಮಾತನಾಡುತ್ತಾ, ‘‘ಈಗ ಚಿತ್ರದಲ್ಲಿ ನೊಣ ಹಾರಾಡುವುದು ಹಾಗೂ ಅವುಗಳ ದೇಹ ರಚನೆ ಕುರಿತು ತಮ್ಮ ಸ್ಕ್ರಿಪ್ಟ್ ಸರಿಯಿದೆಯೇ ಎಂಬುದನ್ನು ಪರೀಕ್ಷಿಸಲು ರಾಜಮೌಳಿ ಆ ವಿಧಾನ ಅನುಸರಿಸಿದ್ದರು’’ ಎಂದಿದ್ದಾರೆ.
ಆಗ ಕಪಿಲ್ ಶರ್ಮಾ ಮಧ್ಯಪ್ರವೇಶಿಸಿ, ‘‘ನೀವು (ರಾಜಮೌಳಿ) ಯಾರನ್ನಾದರೂ ಲಾಕ್ ಮಾಡಬಲ್ಲಿರಿ. ನೊಣಗಳನ್ನು ಫ್ರಿಡ್ಜ್ನಲ್ಲಿಟ್ಟಿದ್ದಿರಿ. ಫಿಲ್ಮ್ ಸಿಟಿಯೊಳಗೆ ಪ್ರಭಾಸ್ರನ್ನು ಐದು ವರ್ಷ ಕೂಡಿ ಹಾಕಿದ್ದಿರಿ’’ ಎಂದು ತಮಾಷೆ ಮಾಡಿದ್ದಾರೆ. ಈ ಮಾತಿಗೆ ಎಲ್ಲರೂ ನಕ್ಕಿದ್ದಾರೆ.
‘ಈಗ ಚಿತ್ರ ಮಾಡುವಾಗ ಡ್ರೈವರ್ ನನಗೆಲ್ಲೋ ಹುಚ್ಚು ಹಿಡಿದಿದೆ ಎಂದು ಭಾವಿಸಿದ್ದ’; ಆಗಿನ ಸಂದರ್ಭ ತೆರೆದಿಟ್ಟ ರಾಜಮೌಳಿ
ನಂತರ ಮಾತನಾಡಿದ ರಾಜಮೌಳಿ ‘ಈಗ’ ಚಿತ್ರ ಮಾಡುವಾಗ ಅವರ ಡ್ರೈವರ್ ಹೇಳಿದ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ. ‘ಮನುಷ್ಯರ ಚಿತ್ರ ಮಾಡುವುದು ಬಿಟ್ಟು ಜಿರಣೆ, ನೊಣಗಳ ಚಿತ್ರವನ್ನೇಕೆ ಮಾಡುತ್ತೀರಿ? ನಿಮಗೆ ಏನಾದರೂ ಹುಚ್ಚು ಹಿಡಿದಿದೆಯಾ?’ ಎಂದು ರಾಮೌಳಿ ಡ್ರೈವರ್ ಅವರನ್ನು ಪ್ರಶ್ನಿಸಿದ್ದರಂತೆ. ಇದನ್ನು ನಿರ್ದೇಶಕ ನಗುತ್ತಾ ಸ್ಮರಿಸಿಕೊಂಡಿದ್ದಾರೆ.
ಕಪಿಲ್ ಶರ್ಮಾ ಶೋ ಪ್ರೋಮೋ ಇಲ್ಲಿದೆ:
ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಜನವರಿ 7ರಂದು ತೆರೆಕಾಣಬೇಕಾಗಿತ್ತು. ಕೊರೊನಾ ಹೆಚ್ಚುತ್ತಿರುವುದು ಹಾಗೂ ವಿವಿಧ ರಾಜ್ಯಗಳಲ್ಲಿ ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರುತ್ತಿರುವುದರಿಂದ ಚಿತ್ರತಂಡ ಬಿಡುಗಡೆಯನ್ನು ಅನಿರ್ದಿಷ್ಟಾವಧಿ ಮುಂದೂಡಿದೆ.
ಇದನ್ನೂ ಓದಿ:
‘ನನಗೆ ಶಾಕ್ ಆಗಿ ಅಳಲು ಆರಂಭಿಸಿದೆ’; ಗೆಳೆಯ ಪ್ರಪೋಸ್ ಮಾಡಿದ ಸಂದರ್ಭ ವಿವರಿಸಿದ ಖ್ಯಾತ ನಟಿ
Kareena Kapoor: ಬರೀ ಮೂರೇ ದಿನಕ್ಕೆ ಹೊಸ ವರ್ಷದ ರೂಲ್ ಬ್ರೇಕ್ ಮಾಡಿದ ಕರೀನಾ; ಫ್ಯಾನ್ಸ್ಗೆ ನೀಡಿದ ಸಂದೇಶವೇನು?