
ರಾಜಮೌಳಿ (SS Rajamouli) ಸಿನಿಮಾ ಮೂಲಕ ಅದ್ಭುತವಾಗಿ ಕತೆ ಹೇಳುತ್ತಾರೆ. ಈ ಕತೆ ಹೇಳುವ ಪ್ರಕ್ರಿಯೆಗೆ ತಂತ್ರಜ್ಞಾನವನ್ನು ಅವರಷ್ಟು ಪರಿಣಾಮಕಾರಿಯಾಗಿ ಭಾರತದ ಇನ್ಯಾವ ನಿರ್ದೇಶಕರೂ ಬಳಸಿಕೊಳ್ಳುವುದಿಲ್ಲವೇನೋ. ವಿಎಫ್ಎಕ್ಸ್, ಮಿನಿಯೇಚರ್, ಹೊಸ ರೀತಿಯ ಕ್ಯಾಮೆರಾ-ಲೆನ್ಸ್ಗಳ ಬಳಕೆ ಎಲ್ಲವೂ ಅತ್ಯುತ್ತಮ ದರ್ಜೆಯಲ್ಲಿಯೇ ಇರುವಂತೆ ನೋಡಿಕೊಳ್ಳುತ್ತಾರೆ. ಇದೀಗ ‘ವಾರಣಾಸಿ’ ಸಿನಿಮಾಕ್ಕೆ ಸಹ ರಾಜಮೌಳಿ ಹೊಸ ತಂತ್ರಜ್ಞಾನವನ್ನು ಮೊದಲ ಬಾರಿಗೆ ಬಳಕೆ ಮಾಡುತ್ತಿದ್ದಾರೆ.
ನಿನ್ನೆ (ನವೆಂಬರ್ 15) ರಾಮೋಜಿರಾವ್ ಫಿಲಂ ಸಿಟಿಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸಿನಿಮಾ ಬಗ್ಗೆ ಮಾತನಾಡಿದ ರಾಜಮೌಳಿ, ಈ ಸಿನಿಮಾಕ್ಕೆ ಕೆಲ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿರುವುದಾಗಿ ಹೇಳಿದರು. ‘ವಾರಣಾಸಿ’ ಸಿನಿಮಾವನ್ನು ಫುಲ್ಸ್ಕ್ರೀನ್ ಫಾರ್ಮ್ಯಾಟ್ನಲ್ಲಿ ಚಿತ್ರೀಕರಣ ಮಾಡುತ್ತಿರುವುದಾಗಿ ರಾಜಮೌಳಿ ಹೇಳಿದ್ದಾರೆ. ಸಾಮಾನ್ಯವಾಗಿ ಸಿನಿಮಾಗಳನ್ನು ಸಿನಿಮಾ ಸ್ಕೋಪ್ನಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಬಳಿಕ ಅದನ್ನು ಐಮ್ಯಾಕ್ಸ್ ಫಾರ್ಮ್ಯಾಟ್ಗೆ ಬದಲಾವಣೆ ಮಾಡಲಾಗುತ್ತದೆ. ಆದರೆ ಈ ಸಿನಿಮಾವನ್ನು ನಾವು ಫುಲ್ ಸ್ಕ್ರೀನ್ ಫಾರ್ಮ್ಯಾಟ್ನಲ್ಲಿಯೇ ಚಿತ್ರೀಕರಣ ಮಾಡಿದ್ದೇವೆ ಎಂದಿದ್ದಾರೆ.
ರಾಜಮೌಳಿ ಈಗ ಬಳಸುತ್ತಿರುವ ಮಾದರಿಯನ್ನು ‘ಪ್ರೀಮಿಯಮ್ ಫುಲ್ ಸ್ಕ್ರೀಮ್ ಐಮ್ಯಾಕ್ಸ್’ ಫಾರ್ಮ್ಯಾಟ್ ಎಂದು ಕರೆಯಲಾಗುತ್ತದೆ. ಇದು ಅತ್ಯುತ್ತಮ ವೀಕ್ಷಣೆಯ ಅನುಭವವನ್ನು ಪ್ರೇಕ್ಷಕರಿಗೆ ನೀಡುತ್ತದೆ ಮತ್ತು ಚಿತ್ರದ ಗುಣಮಟ್ಟವೂ ಅದ್ಭುತವಾಗಿ ಇರಲಿದೆ. ಈ ಸಿನಿಮಾನಲ್ಲಿ ಪಿಎಸ್ ವಿನೋದ್ ಅವರು ಕ್ಯಾಮೆರಾಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ರಾಜಮೌಳಿ ಜೊತೆಗೆ ಇದು ಅವರ ಮೊದಲ ಕೊಲ್ಯಾಬರೇಷನ್. ‘ಪ್ರೀಮಿಯಮ್ ಫುಲ್ ಸ್ಕ್ರೀಮ್ ಐಮ್ಯಾಕ್ಸ್’ ಮಾತ್ರವೇ ಅಲ್ಲದೆ, ಸಿನಿಮಾದ ಧ್ವನಿ, ಹಿನ್ನೆಲೆ ಧ್ವನಿ, ವಿಎಫ್ಎಕ್ಸ್ ಇನ್ನಿತರೆ ವಿಭಾಗಗಳಲ್ಲಿಯೂ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಇದಕ್ಕಾಗಿ ಹಾಲಿವುಡ್ನ ಟಾಪ್ ಸಂಸ್ಥೆಗಳೊಟ್ಟಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:Varanasi: ಡ್ರೋನ್ ಹಾರಿಸಿ ರಾಜಮೌಳಿ ಕೆಲಸ ಕೆಡಿಸಲು ಪ್ರಯತ್ನಿಸಿದ ಕಿಡಿಗೇಡಿಗಳು
ರಾಜಮೌಳಿ ತಮ್ಮ ಹಿಂದಿನ ಸಿನಿಮಾಗಳಿಗೆಲ್ಲ ಕೆಕೆ ಸೆಂಥಿಲ್ ಅವರನ್ನೇ ಕ್ಯಾಮೆರಾಮ್ಯಾನ್ ಆಗಿ ಹಾಕಿಕೊಳ್ಳುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ರಾಜಮೌಳಿ ಅವರು ಕ್ಯಾಮೆರಾಮ್ಯಾನ್ ಅನ್ನು ಬದಲಾವಣೆ ಮಾಡಿ ವಿನೋದ್ ಅವರಿಗೆ ಅವಕಾಶ ನೀಡಿದ್ದಾರೆ. ಈ ಸಿನಿಮಾನಲ್ಲಿ ಸಂಗೀತ ನಿರ್ದೇಶಕರು ಸಹ ಬದಲಾವಣೆ ಆಗಲಿದ್ದಾರೆ ಎನ್ನಲಾಗಿತ್ತು, ಆದರೆ ರಾಜಮೌಳಿ ಅವರು ಕೀರವಾಣಿ ಅವರನ್ನೇ ಉಳಿಸಿಕೊಂಡಿದ್ದಾರೆ.
‘ವಾರಣಾಸಿ’ ಸಿನಿಮಾನಲ್ಲಿ ಮಹೇಶ್ ಬಾಬು ಜೊತೆಗೆ ಪ್ರಿಯಾಂಕಾ ಚೋಪ್ರಾ ನಾಯಕಿ. ಪೃಥ್ವಿರಾಜ್ ಸುಕುಮಾರನ್ ವಿಲನ್. ಮಾಧವನ್ ಅವರು ಮಹೇಶ್ ಬಾಬು ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಸಿನಿಮಾನಲ್ಲಿ ಖ್ಯಾತ ಹಾಲಿವುಡ್ ನಟರೊಬ್ಬರು ಸಹ ನಟಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಬಗ್ಗೆ ಖಾತ್ರಿ ಇಲ್ಲ. ಸಿನಿಮಾ 2027ರ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ