Varanasi: ಡ್ರೋನ್ ಹಾರಿಸಿ ರಾಜಮೌಳಿ ಕೆಲಸ ಕೆಡಿಸಲು ಪ್ರಯತ್ನಿಸಿದ ಕಿಡಿಗೇಡಿಗಳು
ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್ನಲ್ಲಿ ಬರುತ್ತಿರುವ ‘ವಾರಾಣಸಿ’ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಆಗಿದೆ. ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ದೊಡ್ಡ ಕಾರ್ಯಕ್ರಮ ಮಾಡಲಾಗಿದೆ. ಅಲ್ಲಿ ಕೆಲವರು ಡ್ರೋನ್ ತಂದು ಹಾರಿಸಿದ್ದಾರೆ. ಇದರಿಂದಾಗಿ ದೊಡ್ಡ ಪರದೆಯಲ್ಲಿ ಟೈಟಲ್ ಟೀಸರ್ ಪ್ಲೇ ಮಾಡುವುದು ತಡವಾಯಿತು. ಈ ಬಗ್ಗೆ ರಾಜಮೌಳಿ ಮಾತನಾಡಿದರು.

ನಿರ್ದೇಶಕ ರಾಜಮೌಳಿ (Rajamouli) ಅವರು ಏನೇ ಮಾಡಿದರೂ ಪರ್ಫೆಕ್ಟ್ ಆಗಿ ಮಾಡುತ್ತಾರೆ. ವರ್ಷಗಟ್ಟಲೆ ಶ್ರಮಹಾಕಿ ಅವರು ಸಿನಿಮಾ ನಿರ್ದೇಶಿಸುತ್ತಾರೆ. ಆದರೆ ಅವರ ಶ್ರಮವನ್ನು ಕ್ಷಣಾರ್ಧದಲ್ಲಿ ಹಾಳು ಮಾಡಲು ಕೆಲವು ಕಿಡಿಗೇಡಿಗಳು ಕಾದಿರುತ್ತಾರೆ. ರಾಜಮೌಳಿ ಅವರ ಹೊಸ ಸಿನಿಮಾ ‘ವಾರಾಣಸಿ’ (Varanasi) ವಿಚಾರದಲ್ಲೂ ಹಾಗೆಯೇ ಆಗಿದೆ. ಮಹೇಶ್ ಬಾಬು ಅಭಿನಯದ ಈ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಲು ಕೆಲವು ಕಿಡಿಗೇಡಿಗಳು ಅಡ್ಡಿಪಡಿಸಿದರು. ಇದರಿಂದ ರಾಜಮೌಳಿ ಅವರು ಅಭಿಮಾನಿಗಳ ಬಳಿ ಕ್ಷಮೆ ಕೇಳುವಂತಾಯಿತು.
ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಗ್ಲೋಬ್ ಟ್ರಾಟರ್ ಇವೆಂಟ್ ಮಾಡಲಾಗಿದೆ. ಇದರಲ್ಲಿ ಅಂದಾಜು 50 ಸಾವಿರ ಜನರು ಭಾಗಿ ಆಗಿರುವ ಸಾಧ್ಯತೆ ಇದೆ. ಇಷ್ಟು ಜನರ ಎದುರಿನಲ್ಲಿ ದೊಡ್ಡ ಎಲ್ಡಿಡಿ ಪರದೆ ಮೂಲಕ ‘ವಾರಾಣಸಿ’ ಟೈಟಲ್ ಟೀಸರ್ ಪ್ರದರ್ಶನ ಮಾಡಬೇಕು ಎಂಬುದು ರಾಜಮೌಳಿ ಅವರ ಪ್ಲ್ಯಾನ್ ಆಗಿತ್ತು. ಆದರೆ ಅದಕ್ಕೆ ತಾಂತ್ರಿಕ ಸಮಸ್ಯೆ ಉಂಟಾಯಿತು! ಅದಕ್ಕಾಗಿ ರಾಜಮೌಳಿ ಕ್ಷಮೆ ಕೇಳಿದರು. ಅಲ್ಲದೇ, ಅಸಲಿ ವಿಷಯ ಏನೆಂಬುದನ್ನು ವಿವರಿಸಿದರು.
‘ಕಳೆದ ರಾತ್ರಿ ನಾವು ಈ ದೊಡ್ಡ ಪರದೆಯಲ್ಲಿ ಗ್ಲಿಂಪ್ಸ್ ಪ್ಲೇ ಮಾಡಿ ಪರೀಕ್ಷಿಸಲಿಲ್ಲ. ಯಾಕೆಂದರೆ ಅದನ್ನು ಲೀಕ್ ಮಾಡಲು, ನಮ್ಮ ಒಂದು ವರ್ಷದ ಶ್ರಮವನ್ನು ಹಾಳು ಮಾಡಲು ಇಲ್ಲೊಂದು ಡ್ರೋನ್ ಹಾರಾಡುತ್ತಿತ್ತು. ಅದಕ್ಕಾಗಿ ನಾವು ಟೆಸ್ಟ್ ಮಾಡದೆಯೇ ರಿಸ್ಕ್ ತೆಗೆದುಕೊಂಡೆವು. ಆದರೆ ಈಗ ಗ್ಲಿಂಪ್ಟ್ ಪ್ಲೇ ಮಾಡಲು ವಿದ್ಯುತ್ ಶಕ್ತಿ ಸಾಕಾಗುತ್ತಿಲ್ಲ. ಅದಕ್ಕಾಗಿ ಇನ್ನೂ 10 ನಿಮಿಷ ಹಿಡಿಯಬಹುದು’ ಎಂದು ರಾಜಮೌಳಿ ಹೇಳಿದರು.
‘ಈ ಸ್ಕ್ರೀನ್ಗೆ ವಿದ್ಯುತ್ ನೀಡಲು 45 ಜನರೇಟರ್ ಬೇಕು. ನಾವು ನಿನ್ನೆ ರಾತ್ರಿಯೇ ವಿಡಿಯೋ ಟೆಸ್ಟ್ ಮಾಡಬೇಕಿತ್ತು. ಮಧ್ಯರಾತ್ರಿ 2 ಗಂಟೆ ತನಕ ನಾವು ಕೆಲಸ ಮಾಡಿದೆವು. ಜನರು ಎಲ್ಲಿಂದ ಬಂದರೋ ಗೊತ್ತಿಲ್ಲ. ಡ್ರೋನ್ ಹಾರಿಸಿ, ವಿಡಿಯೋ ಚಿತ್ರಿಸಿ ಲೀಕ್ ಮಾಡಿದರು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ಸಾವಿರಾರು ಜನರು ಕೆಲಸ ಮಾಡಿರುವ ಒಂದು ವರ್ಷದ ಶ್ರಮ ಇದು. ಇದು ಪರ್ಫೆಕ್ಟ್ ಆಗಿರಬೇಕೆಂದು ನಾವು ಬಯಸಿದ್ದೆವು’ ಎಂದಿದ್ದಾರೆ ರಾಜಮೌಳಿ.
ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾಗಲ್ಲ, ರಾಜಮೌಳಿ ಮೊದಲು ಆಫರ್ ಕೊಟ್ಟಿದ್ದು ಐಶ್ವರ್ಯಾಗೆ
2027ರಲ್ಲಿ ‘ವಾರಾಣಸಿ’ ಸಿನಿಮಾ ಬಿಡುಗಡೆ ಆಗಲಿದೆ. ಇಷ್ಟು ದಿನ ಈ ಸಿನಿಮಾಗೆ ‘ಎಸ್ಎಸ್ಎಂಬಿ 29’ ಎಂದು ಕರೆಯಲಾಗುತ್ತಿತ್ತು. ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಅವರು ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರೆಲ್ಲರ ಫಸ್ಟ್ ಲುಕ್ ಗಮನ ಸೆಳೆದಿದೆ. ಮಹೇಶ್ ಬಾಬು ಅವರು ರುದ್ರ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




