ಕಾಡಿ-ಬೇಡಿ ಒಳಗೆ ಬಂದಿದ್ದೀರ, ಪಕ್ಷಪಾತದ ಆರೋಪ ಮಾಡಿದ ಜಾನ್ವಿಗೆ ಸುದೀಪ್ ಚಾಟಿ
Bigg Boss Kannada: ಬಿಗ್ಬಾಸ್ ಮನೆಯಲ್ಲಿ ಪಕ್ಷಪಾತ ನಡೆಯುತ್ತಿದೆ. ಕಲರ್ಸ್ ವಾಹಿನಿ ತಮಗೆ ಬೇಕಾದವರಿಗೆ ಸಹಾಯ ಮಾಡುತ್ತಿದೆ, ತನ್ನ ವಾಹಿನಿಗೆ ಸಂಬಂಧಿಸಿದವರನ್ನು ಹೊರಗೆ ಹಾಕುತ್ತಿದೆ ಎಂಬ ಗಂಭೀರ ಆರೋಪವನ್ನು ಜಾನ್ವಿ, ಸ್ಪರ್ಧಿಗಳ ಎದುರು ಮಾಡಿದ್ದರು. ಜಾನ್ವಿಯ ಆರೋಪಕ್ಕೆ ತಕ್ಕ ಪ್ರತ್ಯುತ್ತರವನ್ನು ಸುದೀಪ್ ನೀಡಿದ್ದಾರೆ.

ಜನ ಯಾರಿಗೆ ಕಡಿಮೆ ಮತ ಹಾಕಿರುತ್ತಾರೊ ಅವರು ಬಿಗ್ಬಾಸ್ (Bigg Boss) ಮನೆಯಿಂದ ಹೊರಗೆ ಹೋಗುತ್ತಾರೆ. ಅದು ಸಾಮಾನ್ಯ. ಆದರೆ ಕೆಲ ದಿನಗಳ ಹಿಂದೆ ಜಾನ್ವಿ ಮನೆ ಸದಸ್ಯರೊಟ್ಟಿಗೆ ಸ್ಪಂದನಾ ಬಗ್ಗೆ ಮಾತನಾಡುತ್ತಾ, ಅವರೆಲ್ಲ ವಾಹಿನಿ ಕಡೆಯವರು ಹಾಗಾಗಿ ಅವರನ್ನು ವಾಹಿನಿಯೇ ‘ಎತ್ತುತ್ತದೆ’ ಎಂದಿದ್ದರು. ಅರ್ಥಾತ್, ಕಲರ್ಸ್ ಚಾನೆಲ್ನ ಧಾರಾವಾಹಿ, ಬೇರೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವವರನ್ನು ಬಿಗ್ಬಾಸ್ ಮನೆಯಿಂದ ಬೇಗ ಹೊರಗೆ ಕಳಿಸಲ್ಲ, ಪಕ್ಷಪಾತ ಮಾಡಲಾಗುತ್ತದೆ ಎಂಬುದು ಅವರ ಮಾತಾಗಿತ್ತು.
ಶನಿವಾರದ ಎಪಿಸೋಡ್ನಲ್ಲಿ ಕಿಚ್ಚ ಈ ಬಗ್ಗೆ ಮಾತನಾಡಿದರು. ಎಪಿಸೋಡ್ ಪ್ರಾರಂಭ ಆಗುತ್ತಿದ್ದಂತೆ ಸುದೀಪ್ ಅವರು ‘ವಾಹಿನಿ’ಯಿಂದ ಬಂದವರು ಎಂದು ತಮಾಷೆಯಾಗಿ ಹೇಳಿದರು. ಆಗಲೇ ಜಾನ್ವಿಗೆ ಅವರಿಗೆ ‘ಇಂದು ಕಾದಿದೆ ಹಬ್ಬ’ ಎಂಬ ಸೂಚನೆ ಸಿಕ್ಕಿತು. ಮೊದಲಿಗೆ ಸುದೀಪ್ ಅವರು, ಅಶ್ವಿನಿ ಹಾಗೂ ಜಾನ್ವಿ ಅವರು ಚೇಂಜಿಂಗ್ ರೂಂನಲ್ಲಿ ಮಾಡಿಕೊಂಡ ಒಳ ಒಪ್ಪಂದದ ಬಗ್ಗೆ ಮಾತನಾಡಿದರು.
ಚೇಂಜಿಂಗ್ ರೂಂ ಅನ್ನು ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕಾಗಿ ನೀಡಿರುವ ಜಾಗ ಅಲ್ಲಿ, ಗೇಮ್ಗೆ ಸಂಬಂಧಿಸಿದ್ದು ಮಾತನಾಡುವಂತಿಲ್ಲ ಎಂಬ ನಿಯಮ ಇದ್ದರೂ ಮಾತನಾಡಿದ್ದು ಸರಿಯೇ ಎಂದು ಕೇಳಿದರು. ಅದಕ್ಕೆ ಅಶ್ವಿನಿ ಮತ್ತು ಜಾನ್ವಿ ತಪ್ಪೆಂದರು. ಬಳಿಕ ಜಾನ್ವಿಯ ವಿಚಾರಕ್ಕೆ ಬಂದ ಸುದೀಪ್, ‘ನೀವು ಅಷ್ಟೆಲ್ಲ ತಿಳಿದಿರುವವರು, ನಿಮಗೆ ಅಷ್ಟೆಲ್ಲ ಗೊತ್ತಿದೆ ಹಾಗಿದ್ದ ಮೇಲೆ ಈ ಮನೆಯಲ್ಲಿ ಯಾರಿಗೆ ಮತ ಕಡಿಮೆ ಬಂದಿದೆಯೋ ಅವರು ಹೊರಗೆ ಹೋಗುತ್ತಾರೆ, ಇದರಲ್ಲಿ ವಾಹಿನಿಯ ಪಾತ್ರ ಇರುವುದಿಲ್ಲ’ ಎಂಬುದು ತಿಳಿದಿಲ್ಲವೇ ಎಂದರು.
ಜಾನ್ವಿ ವಾಹಿನಿ ಬಗ್ಗೆ ಆಡಿದ ಮಾತುಗಳ ವಿಡಿಯೋ ಪ್ರಸಾರ ಮಾಡಿ, ‘ಚಂದ್ರಪ್ರಭಾ ಕಲರ್ಸ್ ವಾಹಿನಿಯಲ್ಲೇ ಇರುವುದು ಆದರೆ ಅವರೇ ಮೊದಲು ಹೋದರು. ಈ ಶೋ ಅನ್ನು ವಾಹಿನಿಯೊಟ್ಟಿಗೆ ನೇರ ಸಂಬಂಧ ಇಲ್ಲದಿರುವವರೇ ಗೆದ್ದಿರುವುದು ಹೆಚ್ಚು. ಅಷ್ಟೆಲ್ಲ ಯಾಕೆ? ನೀವು ಸಹ ವಾಹಿನಿಗೆ ಸಂಬಂಧಿಸಿದವರೇ. ಹಾಗಿದ್ದರೆ ನಿಮ್ಮನ್ನೂ ವಾಹಿನಿಯವರು ನೀವು ಹೇಳಿದಂತೆ ‘ಎತ್ತುತ್ತಿದ್ದಾರಾ’ ಎಂದು ಪ್ರಶ್ನೆ ಮಾಡಿದರು.
ಆದರೆ ಜಾನ್ವಿ, ಬ್ರೇಕ್ನಲ್ಲಿ ಮತ್ತೆ ನಾನು ಹೇಳಿದ್ದು ಸರಿ ಎಂಬಂತೆ ಮಾತನಾಡಿದರು. ಅದು ಸುದೀಪ್ ಅವರಿಗೆ ಮತ್ತಷ್ಟು ಸಿಟ್ಟು ತರಿಸಿತು. ‘ನೀವು ಇದೇ ವಾಹಿನಿಯನ್ನು ಕಾಡಿ-ಬೇಡಿ ಒಳಗೆ ಹೋಗಿರುವುದು ಎಂಬುದನ್ನು ಮರೆಯಬೇಡಿ’ ಎಂದು ಖಾರವಾಗಿಯೇ ಹೇಳಿದರು. ಅಲ್ಲಿಗೆ ಜಾನ್ವಿ ಕ್ಷಮೆ ಕೇಳಿ ಸುಮ್ಮನಾದರು. ಬಳಿಕ ‘ವಾಹಿನಿ ಸಹಾಯ ಮಾಡುತ್ತೆ, ಪಕ್ಷಪಾತ ಮಾಡುತ್ತೆ ಎಂಬುದೆಲ್ಲ ಗಂಭೀರವಾದ ಆರೋಪಗಳು. ಆ ರೀತಿಯ ಯಾವುದೇ ಕಾರ್ಯ ನಡೆಯುವುದಿಲ್ಲ. ಅಂಥಹಾ ಅನುಮಾನಗಳು ಯಾರಿಗೂ ಬೇಡ’ ಎಂದರು ಸುದೀಪ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




