ಕ್ರಿಕೆಟ್ (Cricket) ಹಾಗೂ ಸಿನಿಮಾ (Cinema) ಪರಸ್ಪರ ಹತ್ತಿರದ ಸಂಬಂಧ ಹೊಂದಿವೆ. ಕ್ರಿಕೆಟಿಗರು ಸಿನಿಮಾ ಮಂದಿಯನ್ನು ಮದುವೆಯಾಗುವುದು ಬಹು ದಶಕಗಳಿಂದಲೂ ನಡೆದು ಬಂದಿದೆ. ಕ್ರಿಕೆಟ್ ತಾರೆಯರು ಸಿನಿಮಾ ನಟರಾಗುವುದು, ಸಿನಿಮಾ ತಾರೆಯರು ಕ್ರಿಕೆಟ್ ಪಂದ್ಯಾವಳಿಗಳನ್ನು ಆಡುವುದು ಸಹ ಸಾಮಾನ್ಯವೇ. ಈ ಹಿಂದೆ ಕೆಲವಾರು ಕ್ರಿಕೆಟಿಗರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲವು ಕ್ರಿಕೆಟರ್ಗಳ ಜೀವನ ಸಿನಿಮಾ ಸಹ ಆಗಿದೆ. ಅವರಲ್ಲಿ ಕಪಿಲ್ ದೇವ್ (Kapil Dev) ಸಹ ಒಬ್ಬರು. ಆದರೆ ಇದೀಗ ಸ್ವತಃ ಕಪಿಲ್ ದೇವ್ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ ಅದೂ ರಜನೀಕಾಂತ್ (Rajinikanth) ಜೊತೆ!
ಕಪಿಲ್ ದೇವ್ಗೆ ಸಿನಿಮಾ ಹೊಸತಲ್ಲ. ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಕಪಿಲ್ ದೇವ್ ಕಾಣಿಸಿಕೊಂಡಿದ್ದಾರೆ. ಅವರ ನಾಯಕತ್ವದಲ್ಲಿ 1983 ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಘಟನೆ 83 ಹೆಸರಿನಲ್ಲಿ ಸಿನಿಮಾ ಆಗಿದೆ. ಸಿನಿಮಾದಲ್ಲಿ ಅವರ ಪಾತ್ರಕ್ಕೆ ಪ್ರಧಾನ ಪಾತ್ರ. ಇದೀಗ ರಜನೀಕಾಂತ್ರ ಹೊಸ ಸಿನಿಮಾ ಲಾಲ್ ಸಲಾಮ್ನಲ್ಲಿ ಕಪಿಲ್ ದೇವ್ ನಟಿಸುತ್ತಿದ್ದಾರೆ. ಈ ಬಗ್ಗೆ ಸ್ವತಃ ರಜನೀಕಾಂತ್ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಕಪಿಲ್ ದೇವ್ ಹಾಗೂ ತಾವು ಒಟ್ಟಿಗೆ ನಿಂತಿರುವ ಚಿತ್ರ ಹಂಚಿಕೊಂಡಿರುವ ನಟ ರಜನೀಕಾಂತ್, ”ಭಾರತಕ್ಕೆ ಮೊದಲ ಬಾರಿಗೆ ಕ್ರಿಕೆಟ್ ವಿಶ್ವಕಪ್ ಗೆದ್ದು ಹೆಮ್ಮೆ ತಂದ ಲೆಜೆಂಡರಿ, ಅತ್ಯಂತ ಗೌರವಾನ್ವಿತ ಮತ್ತು ಅದ್ಭುತ ವ್ಯಕ್ತಿತ್ವದ ಕಪಿಲ್‌ದೇವ್ ಅವರೊಂದಿಗೆ ಕೆಲಸ ಮಾಡುವುದು ನನಗೆ ಗೌರವ ತಂದಿದೆ” ಎಂದು ಬರೆದುಕೊಂಡಿದ್ದಾರೆ. ಇಬ್ಬರೂ ಯಾವುದೋ ಕ್ರಿಕೆಟ್ ಗ್ರೌಂಡ್ನಲ್ಲಿ ನಿಂತುಕೊಂಡಿರುವ ಚಿತ್ರವನ್ನು ರಜನೀಕಾಂತ್ ಹಂಚಿಕೊಂಡಿದ್ದಾರೆ. ಇಬ್ಬರು ಲೆಜೆಂಡ್ಗಳು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನು ಅಭಿಮಾನಿಗಳು ಸ್ವಾಗತಿಸಿದ್ದಾರೆ, ಸಂಭ್ರಮಿಸುತ್ತಿದ್ದಾರೆ.
ರಜನೀಕಾಂತ್ ಪ್ರಸ್ತುತ ಲಾಲ್ ಸಲಾಮ್ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಸಿನಿಮಾದ ಪೋಸ್ಟರ್ ಒಂದು ಈಗಾಗಲೇ ಬಿಡುಗಡೆ ಆಗಿದೆ. ಸಿನಿಮಾವು ತಮಿಳುನಾಡಿನ ಕ್ರಿಕೆಟ್ ಬೋರ್ಡ್ನಲ್ಲಿ ಜಾತಿ ರಾಜಕೀಯ ಕುರಿತಾದ ಕತೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ಜೊತೆಗೆ ತಮಿಳುನಾಡು ಮಾಫಿಯಾ ಕತೆಯನ್ನು ಸಹ ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ಮುಸ್ಲಿಂ ಮಾಫಿಯಾ ಡಾನ್ ಪಾತ್ರದಲ್ಲಿ ರಜನೀಕಾಂತ್ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ರಜನೀಕಾಂತ್ ಸೂಪರ್ ಸ್ಟಾರ್ ಅಲ್ಲ, ಚಿರಂಜೀವಿ ನಮ್ಮ ಸೂಪರ್ ಸ್ಟಾರ್: ಪೋಸಾನಿ
ಲಾಲ್ ಸಲಾಮ್ ಸಿನಿಮಾವನ್ನು ರಜನೀಕಾಂತ್ ಪುತ್ರಿ, ಧನುಶ್ ಪತ್ನಿ ಐಶ್ವರ್ಯಾ ನಿರ್ದೇಶನ ಮಾಡುತ್ತಿದ್ದಾರೆ. ಐಶ್ವರ್ಯಾ ಈ ಹಿಂದೆ ‘3’, ವಾಯ್ ರಾಜಾ ವಾಯ್ ಸಿನಿಮಾ ಹಾಗೂ ಸಿನಿಮಾ ವೀರನ್ ಹೆಸರಿನ ಡಾಕ್ಯುಮೆಂಟರಿ ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ತಂದೆ ರಜನೀಕಾಂತ್ಗಾಗಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಮಕ್ಕಳ ನಿರ್ದೇಶನದ ಸಿನಿಮಾದಲ್ಲಿ ರಜನೀ ನಟಿಸುತ್ತಿರುವುದು ಇದು ಮೊದಲೇನಲ್ಲ. ಮತ್ತೊಬ್ಬ ಮಗಳು ಸೌಂದರ್ಯ ನಿರ್ದೇಶನದ ಕೊಚಾಡಿಯನ್ ಸಿನಿಮಾದಲ್ಲಿ ರಜನೀಕಾಂತ್ ನಟಿಸಿದ್ದರು. ಆ ಸಿನಿಮಾ ಫ್ಲಾಪ್ ಆಗಿತ್ತು.
ರಜನೀಕಾಂತ್ ಈ ವಯಸ್ಸಿನಲ್ಲಿಯೂ ಬಹಳ ಬ್ಯುಸಿ ನಟ. ಇತ್ತೀಚೆಗಷ್ಟೆ ಜೈಲರ್ ಸಿನಿಮಾದ ಚಿತ್ರೀಕರಣವನ್ನು ಅವರು ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ರಜನೀಕಾಂತ್ ಜೊತೆಗೆ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್, ಮಲಯಾಳಂನ ಮೋಹನ್ಲಾಲ್, ಹಿಂದಿಯ ಜಾಕಿ ಶ್ರಾಫ್, ತೆಲುಗಿನ ಸುನಿಲ್ ನಟಿಸಿದ್ದಾರೆ. ನಾಯಕಿಯರಾಗಿ ತಮನ್ನಾ ಭಾಟಿಯಾ ಇದ್ದಾರೆ. ಸಿನಿಮಾದಲ್ಲಿ ರಮ್ಯಾ ಕೃಷ್ಣ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ