ಈ ಮಂತ್ರ ಹೇಳದೆ ಮನೆಯಿಂದ ಹೊರ ಹೋಗಲ್ಲ ರಜನೀಕಾಂತ್

Rajinikanth: ರಜನೀಕಾಂತ್ ಸೂಪರ್ ಸ್ಟಾರ್ ಜೊತೆಗೆ ಧಾರ್ಮಿಕ ವ್ಯಕ್ತಿಯೂ ಹೌದು. ಈ ವಯಸ್ಸಿನಲ್ಲೂ ಅವರು ಆಗಾಗ್ಗೆ ಹಿಮಾಲಯಕ್ಕೆ ಹೋಗಿ ಅಲ್ಲ ಧ್ಯಾನ, ಪೂಜೆ, ಸಾಧು-ಸಂತರ ಸಂಘದಲ್ಲಿ ಕೆಲ ದಿನ ಕಳೆದು ಬರುತ್ತಾರೆ. ಮನೆಯಲ್ಲಿಯೂ ಸಹ ತಪ್ಪದೇ ಪೂಜೆ, ಪುನಸ್ಕಾರಗಳನ್ನು ಮಾಡುತ್ತಾರೆ. ಅಂತೆಯೇ ರಜನೀಕಾಂತ್ ಅವರು ಈ ಒಂದು ಶ್ಲೋಕ ಹೇಳದೆ ಎಂದಿಗೂ ಮನೆಯಿಂದ ಹೊರಗೆ ಕಾಲಿಡುವುದೇ ಇಲ್ಲವಂತೆ.

ಈ ಮಂತ್ರ ಹೇಳದೆ ಮನೆಯಿಂದ ಹೊರ ಹೋಗಲ್ಲ ರಜನೀಕಾಂತ್
Rajinikanth

Updated on: Nov 29, 2025 | 7:15 PM

ರಜನೀಕಾಂತ್ (Rajinikanth) ಭಾರತದ ನಂಬರ್ 1 ಸೂಪರ್ ಸ್ಟಾರ್, ಪೋಯಸ್ ಗಾರ್ಡನ್​​ನ ದೊಡ್ಡ ಬಂಗಲೆಯಲ್ಲಿ ವಾಸ, ನೂರಾರು ಕೋಟಿ ಮೌಲ್ಯದ ಆಸ್ತಿಗಳು, ದೊಡ್ಡ ದೊಡ್ಡ ಕಾರುಗಳು, ನೂರಾರು ಕೋಟಿ ಸಂಭಾವನೆ ಎಲ್ಲವೂ ಹೌದು. ಆದರೆ ಅವರೊಬ್ಬ ಅಪ್ಪಟ ಧಾರ್ಮಿಕ ವ್ಯಕ್ತಿ. ಮೈಮೇಲೆ ಬೆಲೆ ಆಭರಣ ಧರಿಸುವುದಿಲ್ಲ. ಪಂಚೆ ಕಟ್ಟಿಕೊಂಡು ಸರಳರಲ್ಲಿ ಸರಳ ವ್ಯಕ್ತಿಯಾಗಿ ಒಂದು ಊರುಗೋಲು ಹಿಡಿದು ಹಿಮಾಲಯ ಸುತ್ತಲು ಹೊರಟು ಬಿಡುತ್ತಾರೆ. ರಜನೀಕಾಂತ್ ವಯಸ್ಸಾದ ಮೇಲೆ ಧಾರ್ಮಿಕತೆಯ ಕಡೆಗೆ ಹೊರಳಿದವರಲ್ಲ. ಅವರು ನಟನಾ ವೃತ್ತಿಯಲ್ಲಿದ್ದಾಗಲೇ ಹಲವು ಧಾರ್ಮಿಕ ಆಚರಣೆಗಳನ್ನು ಅವರು ಮಾಡುತ್ತಿದ್ದರು. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ತಾವು ಮಂತ್ರವೊಂದನ್ನು ಹೇಳದೆ ಮನೆಯಿಂದ ಹೊರಗೆ ಬರುವುದಿಲ್ಲ ಎಂದು ಹೇಳಿದ್ದಾರೆ.

ಮಿಸಸ್ ವೈಜಿಪಿ ಅವರ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಜನೀಕಾಂತ್, ‘1987-88 ರ ಸಮಯದಲ್ಲಿ ನಮ್ಮ ಮನೆಯಲ್ಲೊಂದು ಕಾರ್ಯಕ್ರಮ ನಡೆದಿತ್ತು. ಆಗ ನಾನು ಶ್ಲೋಕಗಳನ್ನು ಹೇಳುವುದು ನೋಡಿ, ಮಿಸಸ್ ವೈಜಿಪಿಯವರು ನನ್ನನ್ನು ಕರೆದು ಅದು ಹೇಗೆ ಅಷ್ಟು ಸ್ಪಷ್ಟವಾಗಿ ಶ್ಲೋಕಗಳನ್ನು ಹೇಳುತ್ತಿದ್ದೀಯ ಎಂದು ಕೇಳಿದಾಗ ನಾನು ರಾಮಕೃಷ್ಣ ಆಶ್ರಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದಾಗಿ ಹೇಳಿದ್ದೆ. ಆಗ ಅವರು ನೀನು ಇಂದಿನಿಂದ ಪ್ರತಿದಿನ ಗಾಯತ್ರಿ ಮಂತ್ರ ಪಠಿಸು, ನೀನು ಕಲಾವಿದರ ಇದರಿಂದ ನಿನ್ನ ಮುಖದ ತೇಜಸ್ಸು ಹೆಚ್ಚುತ್ತದೆ. ಸಂಭಾಷಣೆ ಸುಲಲಿತವಾಗುತ್ತದೆ ಎಂದರು. ಅವರ ಶಿಷ್ಯನೊಬ್ಬನಿಂದ ನನಗೆ ಗಾಯತ್ರಿ ಮಂತ್ರವನ್ನು ಬೋಧಿಸಿದರು. ನಾನು ಅದನ್ನು ಕೇಳಿ ಆ ನಂತರ ಮರೆತುಬಿಟ್ಟೆ’ ಎಂದಿದ್ದಾರೆ ರಜನೀಕಾಂತ್.

ಇದನ್ನೂ ಓದಿ:ಹುಲಿಗೆ ಭಾರಿಸಿದ್ದ ಧರ್ಮೆಂದ್ರ, ಹೆದರಿ ಸೆಟ್ ಬಿಟ್ಟು ಹೋಗಿದ್ದ ರಜನೀಕಾಂತ್

‘ನಾನು ಸತ್ಯ ಸಾಯಿ ಬಾಬ ಅವರ ಭಕ್ತ. ಒಮ್ಮೆ ಅವರ ಆಶೀರ್ವಾದಕ್ಕಾಗಿ ಭೇಟಿ ಆಗಿದ್ದಾಗ ಅದೇ ಸಮಯದಲ್ಲಿ ಭಾರತದಿಂದ ಅಂಡಾಮಾನ್​​ಗೆ ಹೋಗುತ್ತಿದ್ದ ವಿಮಾನವೊಂದರ ಅಪಘಾತ ಆಗಿ ಸುಮಾರು 60ಕ್ಕೂ ಹೆಚ್ಚು ಮಂದಿ ನಿಧನ ಹೊಂದಿದ್ದರು. ಅದರ ಬಗ್ಗೆ ಮಾತನಾಡಿದ ಸತ್ಯ ಸಾಯಿ ಬಾಬ ಅವರು, ಆ ವಿಮಾನದಲ್ಲಿ ಒಬ್ಬರಾದರೂ ಗಾಯತ್ರಿ ಮಂತ್ರ ಪಠಿಸಿದ್ದರೆ ಆಗುವ ಅನಾಹುತ ತಪ್ಪಿಬಿಡುತ್ತಿತ್ತು’ ಎಂದರು. ಅದನ್ನು ಕೇಳಿದೊಡನೆ ನಾನು ಮತ್ತೆ ಗಾಯತ್ರಿ ಮಂತ್ರವನ್ನು ಪಠಿಸಲು ಆರಂಭಿಸಿದೆ’ ಎಂದಿದ್ದಾರೆ.

ಇದನ್ನೂ ಓದಿ:ಹುಲಿಗೆ ಭಾರಿಸಿದ್ದ ಧರ್ಮೆಂದ್ರ, ಹೆದರಿ ಸೆಟ್ ಬಿಟ್ಟು ಹೋಗಿದ್ದ ರಜನೀಕಾಂತ್

‘ಮೊದಲಿಗೆ ದಿನಕ್ಕೆ ಒಮ್ಮೆ ಗಾಯತ್ರಿ ಮಂತ್ರ ಪಠಿಸುತ್ತಿದ್ದೆ. ಆ ಬಳಿಕ ದಿನಕ್ಕೆ ಮೂರು ಬಾರಿ, ಬಳಿಕ ಒಂಬತ್ತು ಬಾರಿ, ಬಳಿಕ 24 ಬಾರಿ ಈಗ ದಿನಕ್ಕೆ ನೂರು ಬಾರಿ ಗಾಯತ್ರಿ ಮಂತ್ರ ಪಠಿಸದೆ ನಾನು ಮನೆಯಿಂದ ಹೊರಗೆ ಕಾಲಿಡುವುದಿಲ್ಲ’ ಎಂದು ರಜನೀಕಾಂತ್ ಅವರು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಅಂದಹಾಗೆ ರಜನೀಕಾಂತ್ ಅವರು ಭಾಗವಹಿಸಿದ್ದ ಮಿಸಸ್ ವೈಜಿಪಿ ಅವರು ತಮಿಳುನಾಡಿನ ಖ್ಯಾತ ಸಮಾಜ ಸೇವಕಿ, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ ಮಹಿಳೆ ಮತ್ತು ಪತ್ರಕರ್ತೆಯೂ ಹೌದು. ತಮಿಳುನಾಡಿನಾದ್ಯಂತ ಅತ್ಯಂತ ಗೌರವಾನ್ವಿತ ಶಿಕ್ಷಣ ಸಮೂಹವಾದ ಪಿಎಸ್​​ಬಿಬಿಯನ್ನು ಸ್ಥಾಪಿಸಿದ್ದು ಮಿಸಸ್ ವೈಜಿಪಿ (ರಾಜಲಕ್ಷ್ಮಿ). ಅವರ ಪತಿ ವೈಜಿಪಿ, ತಮಿಳುನಾಡಿನ ಖ್ಯಾತ ರಂಗಕರ್ಮಿ. ವೈಜಿಪಿ ಮತ್ತು ಮಿಸಸ್ ವೈಜಿಪಿ ಎಂದರೆ ರಜನೀಕಾಂತ್ ಅವರಿಗೆ ಅಪಾರ ಅಭಿಮಾನ ಮತ್ತು ಗೌರವ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ