ದೈವವನ್ನು ದೆವ್ವ ಎಂದ ಬಾಲಿವುಡ್ ಸ್ಟಾರ್: ರಿಷಬ್ ಮುಂದೆಯೇ ಅವಮಾನ
Kantara Chapter 1: ದೈವದ ಅನುಕರಣೆ ಮಾಡಬಾರದು, ದೈವಕ್ಕೆ ಅಪಮಾನ ಆಗುವಂತೆ ಯಾರೂ ಸಹ ನಡೆದುಕೊಳ್ಳಬಾರದು, ದೈವದ ಬಗ್ಗೆ ವ್ಯಂಗ್ಯವಾಗಿ ಮಾತನಾಡಬಾರದು ಎಂದೆಲ್ಲ ಈ ಹಿಂದೆ ಹಲವು ಬಾರಿ ರಿಷಬ್ ಶೆಟ್ಟಿ ಹೇಳಿದ್ದಾರೆ. ಆದರೆ ಇದೀಗ ಅವರ ಎದುರೇ, ಬಾಲಿವುಡ್ನ ಸ್ಟಾರ್ ನಟರೊಬ್ಬರು ಕೆಟ್ಟ ರೀತಿಯಲ್ಲಿ ದೈವದ ಅನುಕರಣೆ ಮಾಡಿದ್ದಲ್ಲದೆ, ದೈವವನ್ನು ದೆವ್ವ ಎಂದು ಕರೆದಿದ್ದಾರೆ.

‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾ ಬಿಡುಗಡೆ ಆಗಿ ಭರ್ಜರಿ ಕಲೆಕ್ಷನ್ ಮಾಡಿದೆ. ಸಿನಿಮಾ ದೈವಗಳ ಕುರಿತಾದದ್ದಾಗಿದ್ದು ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಸಿನಿಮಾದ ಬಗ್ಗೆ, ಸಿನಿಮಾನಲ್ಲಿ ಹೇಳಲಾಗಿರುವ ದೈವಗಳ ಕತೆಯ ಬಗ್ಗೆ ಭಕ್ತಿ ಮತ್ತು ಗೌರವಗಳು ಇವೆ. ಸ್ವತಃ ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾದ ಬಗ್ಗೆ ಗೌರವಯುತವಾಗಿ ನಡೆದುಕೊಳ್ಳಬೇಕೆಂದು, ದೈವಗಳಿಗೆ ಅಪಮಾನ ಆಗುವಂತೆ ನಡೆದುಕೊಳ್ಳುವುದು, ಮಾತನಾಡುವುದು ಬೇಡವೆಂದು ಹಲವಾರು ಬಾರಿ ಹೇಳಿದ್ದಾರೆ. ಆದರೆ ಇದೀಗ ರಿಷಬ್ ಶೆಟ್ಟಿಯ ಎದುರೇ, ಅಂತರಾಷ್ಟ್ರೀಯ ವೇದಿಕೆಯಲ್ಲಿ ದೈವದ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ.
ಗೋವಾ ಅಂತರಾಷ್ಟ್ರೀಯ ಸಿನಿಮೋತ್ಸವದ ಸಮಾರೋಪ ಸಮಾರಂಭದ ಅತಿಥಿಯಾಗಿ ರಣ್ವೀರ್ ಸಿಂಗ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರಜನೀಕಾಂತ್ ಅವರ 50 ವರ್ಷದ ಸಿನಿಮಾ ಸೇವೆಗಾಗಿ ಅವರನ್ನು ಗೌರವಿಸಲಾಯ್ತು. ಅದೇ ಸಮಾರಂಭದಲ್ಲಿ ಕನ್ನಡದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಹ ಹಾಜರಿದ್ದರು. ವೇದಿಕೆ ಮುಂಬಾಗ, ಮುಂದಿನ ಸಾಲಿನಲ್ಲಿಯೇ ಕುಳಿತಿದ್ದರು. ರಿಷಬ್ ಉದ್ದೇಶಿಸಿ, ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಗ್ಗೆ ಮಾತನಾಡುತ್ತಾ, ದೈವವನ್ನು ದೆವ್ವ ಎಂದಿದ್ದಾರೆ ರಣ್ವೀರ್ ಸಿಂಗ್.
ಇದನ್ನೂ ಓದಿ: 50 ಲಕ್ಷ ಬಜೆಟ್ನ ಈ ಸಿನಿಮಾ, ‘ಕಾಂತಾರ’, ‘ಸೈಯ್ಯಾರ’ ಅನ್ನೇ ಹಿಂದಿಕ್ಕಿದೆ
ಆಗಿದ್ದಿಷ್ಟು, ವೇದಿಕೆ ಮೇಲಿದ್ದ ರಣ್ವೀರ್ ಸಿಂಗ್, ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಗ್ಗೆ ಮಾತನಾಡುತ್ತಾ, ‘ರಿಷಬ್ ಅವರೇ ‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ನಾನು ಚಿತ್ರಮಂದಿರದಲ್ಲಿ ನೋಡಿದೆ. ನಿಮ್ಮ ನಟನೆ ಅತ್ಯದ್ಭುತವಾಗಿತ್ತು. ಅದರಲ್ಲೂ ಹೆಣ್ಣು ‘ದೆವ್ವ’ ನಿಮ್ಮ ಮೈ ಸೇರುವ ದೃಶ್ಯದಲ್ಲಿ ನೀವು ಕೊಡುವ ಆ ಲುಕ್ ಮತ್ತು ನಟನೆ ಅದ್ಭುತವಾಗಿತ್ತು’ ಎಂದ ರಣ್ವೀರ್ ಸಿಂಗ್, ಸ್ವತಃ ಅವರೇ ನಟಿಸಿ ಸಹ ತೋರಿಸಿದರು. ಆದರೆ ಅವರ ನಟನೆಯೂ ಸಹ ಒಂದು ರೀತಿ ವ್ಯಂಗ್ಯ ಮಾಡುವಂತೆಯೇ ಇತ್ತು. ನಾಲಗೆ ಹೊರಗೆ ಚಾಚಿ ಕೆಟ್ಟದಾಗಿ ಅನುಕರಣೆಯನ್ನು ರಣ್ವೀರ್ ಸಿಂಗ್ ಮಾಡಿದರು. ವೇದಿಕೆ ಮೇಲೆ ರಣ್ವೀರ್ ಸಿಂಗ್, ಅನುಕರಣೆ ಮಾಡುತ್ತಿದ್ದಂತೆ, ರಿಷಬ್ ಶೆಟ್ಟಿ ನಗುತ್ತಾ, ನಾಚಿಕೆಯಿಂದ ಮುಖ ಪಕ್ಕಕ್ಕೆ ತಿರುಗಿಸಿಕೊಂಡರು.
Dear @RanveerOfficial you don’t know the difference between God and Ghost ….🤦🤦🤦
Chavundi is Goddess not ghost ..🙏 And you literally mocking on big stage..🤦#KantaraChapter1 #RanveerSingh pic.twitter.com/SXV3HZdUfq
— Agasthya ᵀᵒˣᶦᶜ (@sachi_1933) November 29, 2025
‘ಕಾಂತಾರ’ ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇರುವುದು ದೈವಗಳ ಕುರಿತಾಗಿ. ರಿಷಬ್ ಶೆಟ್ಟಿ ಮೈಮೇಲೆ ದೈವ ಬಂದಾಗಲೂ ಸಹ ಕತೆಯಲ್ಲಿನ ಪಾತ್ರಗಳೇ ಕೈಮುಗಿದು, ದೈವದ ಹೆಸರು ಹೇಳುವ ದೃಶ್ಯವಿದೆ. ಗುಳಿಗ ದೈವದ ಸಹೋದರಿ ಚಾವುಂಡಿ, ರಿಷಬ್ ಪಾತ್ರದ ಮೈಮೇಲೆ ಬಂದಾಗಲೂ ಸಹ ಅದರ ವಿವರ ಹೇಳುವ ಸಂಭಾಷಣೆ ಚಿತ್ರದಲ್ಲಿದೆ. ಅಷ್ಟೆಲ್ಲ ಮಾಹಿತಿ ಒದಗಿಸಿದ್ದರೂ ಸಹ ರಣ್ವೀರ್ ಸಿಂಗ್, ದೈವವನ್ನು ‘ಘೋಸ್ಟ್’ (ದೆವ್ವ) ಎಂದು ಕರೆದಿದ್ದಾರೆ. ಅಷ್ಟು ಸಾಲದೆ, ‘ನಾನು ‘ಕಾಂತಾರ ಚಾಪ್ಟರ್ 3’ ನಟಿಸಬೇಕು ಎಂದು ಸಹ ಹೇಳಿದ್ದಾರೆ.
ಈ ಹಿಂದೆ, ‘ಕಾಂತಾರ’ ಸಿನಿಮಾ ಬಿಡುಗಡೆ ಆದಾಗ ಸಿನಿಮಾದಲ್ಲಿ ರಿಷಬ್ ಪಾತ್ರವನ್ನು ಅನುಕರಣೆ ಮಾಡಿದಕ್ಕೆ, ದೈವಗಳ ಕುರಿತಾಗಿ ತಮಾಷೆ ಮಾಡಿದ್ದಕ್ಕೆ ರಿಷಬ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದರು. ಯಾರೂ ಸಹ ದೈವಕ್ಕೆ ಅಪಮಾನ ಆಗುವ ರೀತಿಯಲ್ಲಿ ನಡೆದುಕೊಳ್ಳಬಾರದು ಎಂದು ಮನವಿ ಮಾಡಿದ್ದರು. ಆದರೆ ಈಗ ಅವರ ಎದುರೇ ಬಾಲಿವುಡ್ನ ನಟರೊಬ್ಬರು ದೈವವನ್ನು ದೆವ್ವ ಎಂದು ಕರೆದಿದ್ದಾರೆ. ರಿಷಬ್ ಅವರ ನಡೆ ಏನಿರುತ್ತದೆ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:47 pm, Sat, 29 November 25




