ಹುಲಿಗೆ ಭಾರಿಸಿದ್ದ ಧರ್ಮೆಂದ್ರ, ಹೆದರಿ ಸೆಟ್ ಬಿಟ್ಟು ಹೋಗಿದ್ದ ರಜನೀಕಾಂತ್
Rajinikanth-Dharmendra: ಬಾಲಿವುಡ್ನ ಸ್ಟಾರ್ ನಟರಾಗಿ ದಶಕಗಳ ಕಾಲ ಮಿಂಚಿದ ನಟ ಧರ್ಮೇಂದ್ರ ಇತ್ತೀಚೆಗಷ್ಟೆ ಅಗಲಿದ್ದಾರೆ. ಅವರು ಬಿಟ್ಟು ಹೋಗಿರುವ ನೆನಪುಗಳು, ಸಿನಿಮಾಗಳು ಅಪಾರ. ಇದೀಗ ದಕ್ಷಿಣದ ಖ್ಯಾತ ನಟಿಯೊಬ್ಬರು ಧರ್ಮೇಂದ್ರ ಹಾಗೂ ರಜನೀಕಾಂತ್ ನಡುವೆ ನಡೆದಿದ್ದ ಘಟನೆಯೊಂದನ್ನು ನೆನಪು ಮಾಡಿಕೊಂಡಿದ್ದಾರೆ. ಧರ್ಮೇಂದ್ರ ಮಾಡಿದ ಕೆಲಸಕ್ಕೆ ಹೆದರಿ ಸೆಟ್ ಬಿಟ್ಟು ಹೋಗಿದ್ದರಂತೆ ರಜನೀಕಾಂತ್.

ಧರ್ಮೇಂದ್ರ, ಬಾಲಿವುಡ್ನ (Bollywood) ಸ್ಟಾರ್ ನಟ. ಸಿನಿಮಾಗಳಲ್ಲಿ ಮಾತ್ರವಲ್ಲ ನಿಜ ಜೀವನದಲ್ಲಿಯೂ ಬಣ್ಣದ ಬದುಕು ಬದುಕಿದವರು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮಗೆ ಇಷ್ಟ ಬಂದಿದ್ದನ್ನು ಮಾಡುತ್ತಾ ಬದುಕಿದ್ದವರು ಧರ್ಮೇಂದ್ರ. ಸ್ಟಾರ್ ಆಗಿದ್ದ ಸಮಯದಲ್ಲಂತೂ ಅವರ ಜಲ್ವಾ ಬಲು ಜೋರಾಗಿತ್ತು. ಬಾಲಿವುಡ್ನಲ್ಲಿ ಮಾತ್ರವೇ ಅಲ್ಲದೆ ಹಲವು ಚಿತ್ರರಂಗದಲ್ಲಿ ಅವರಿಗೆ ಗೆಳೆಯರಿದ್ದರು. ರಜನೀಕಾಂತ್ ಸಹ ಧರ್ಮೇಂದ್ರ ಅವರಿಗೆ ಗೆಳೆಯರೇ ಆಗಿದ್ದರು. ಆದರೆ ಒಮ್ಮೆ ಧರ್ಮೇಂದ್ರ ಮಾಡಿದ ಕೆಲಸಕ್ಕೆ ಹೆದರಿ ಸೆಟ್ ಬಿಟ್ಟು ಹೋಗಿಬಿಟ್ಟಿದ್ದರು ರಜನೀಕಾಂತ್.
ರಾಧಿಕಾ ಶರತ್ಕುಮಾರ್ ತಮಿಳು ಚಿತ್ರರಂಗದ ಖ್ಯಾತ ನಟಿ. ರಜನೀಕಾಂತ್ ಸೇರಿದಂತೆ ಹಲವು ಸ್ಟಾರ್ ನಟರುಗಳೊಡನೆ ರಾಧಿಕಾ ನಟಿಸಿದ್ದಾರೆ. ಅವರು ಸಂದರ್ಶನವೊಂದರಲ್ಲಿ ಧರ್ಮೇಂದ್ರ ಮತ್ತು ರಜನೀಕಾಂತ್ ಕುರಿತಾಗಿ ಅಪರೂಪದ ಘಟನೆಯೊಂದನ್ನು ಹಂಚಿಕೊಂಡಿದ್ದರು.
ರಜನೀಕಾಂತ್ ಮತ್ತು ರಾಧಿಕಾ ಶರತ್ಕುಮಾರ್ ಅವರು ತಮಿಳು ಸಿನಿಮಾ ಒಂದರಲ್ಲಿ ನಟಿಸುತ್ತಿದ್ದರಂತೆ. ಸ್ಟುಡಿಯೋ ಒಂದರಲ್ಲಿ ಸಿನಿಮಾದ ಶೂಟಿಂಗ್ ನಡೆದಿತ್ತಂತೆ. ಅದೇ ಸ್ಟುಡಿಯೋದ ಪಕ್ಕದ ಸೆಟ್ನಲ್ಲಿ ಧರ್ಮೇಂದ್ರ ಅವರ ಸಿನಿಮಾದ ಶೂಟಿಂಗ್ ನಡೆದಿತ್ತಂತೆ. ರಾಧಿಕಾ ಅವರು ಹೋಗಿ ಧರ್ಮೇಂದ್ರ ಅವರನ್ನು ಮಾತನಾಡಿಸಿ, ತಾವು ಪಕ್ಕದ ಸೆಟ್ನಲ್ಲಿ ಶೂಟಿಂಗ್ ಮಾಡುತ್ತಿರುವುದಾಗಿಯೂ, ರಜನೀಕಾಂತ್ ಸಹ ನಟಿಸುತ್ತಿರುವುದಾಗಿಯೂ ಹೇಳಿ ಬಂದರಂತೆ.
ಇದನ್ನೂ ಓದಿ:ಚಿರಂಜೀವಿಗೆ ನೋ ಹೇಳಿ ಈಗ ರಜನೀಕಾಂತ್ಗೆ ಎಸ್ ಎಂದ ಸಾಯಿ ಪಲ್ಲವಿ
ರಜನೀಕಾಂತ್ ಅವರು ಅಂದು ಶೂಟಿಂಗ್ ಮಾಡಲು ಅಷ್ಟು ಉತ್ಸುಕರಾಗಿರಲಿಲ್ಲವಂತೆ ಏಕೆಂದರೆ ಅವರು ನಿಜವಾದ ಹುಲಿಯೊಂದಿಗೆ ಫೈಟ್ ಮಾಡಬೇಕಿತ್ತಂತೆ. ರಾಧಿಕಾರನ್ನು ವಿಲನ್ಗಳು ಮರಕ್ಕ ಕಟ್ಟಿ ಹಾಕಿರುವ ಸೀನ್, ರಾಧಿಕಾಗೆ ಹುಲಿ ಕಾವಲು, ರಜನೀಕಾಂತ್ ಹುಲಿಯೊಟ್ಟಿಗೆ ಫೈಟ್ ಮಾಡಿ ರಾಧಿಕಾರನ್ನು ಬಿಡಿಸಿಕೊಳ್ಳಬೇಕು, ಇದು ಸೀನ್. ಚಿತ್ರೀಕರಣ ನಡೆಯುವ ವೇಳೆ ಧರ್ಮೇಂದ್ರ ಸೆಟ್ಗೆ ಎಂಟ್ರಿ ಕೊಟ್ಟರಂತೆ. ಬಂದವರೇ ಎಲ್ಲರಿಗೂ ತಮ್ಮದೇ ಶೈಲಿಯಲ್ಲಿ ಹಾಯ್ ಹೇಳಿ, ಕೆಲವರನ್ನು ಗದರಿ, ಕೊನೆಗೆ ಹುಲಿಯ ಬಳಿ ಬಂದವರೇ ಹುಲಿಯ ಮುಖಕ್ಕೆ ಸರಿಯಾಗಿ ಭಾರಿಸಿಬಿಟ್ಟರಂತೆ.
ಧರ್ಮೇಂದ್ರ ಅವರ ಅಗಲವಾದ ಕೈಯಿಂದ ಏಟು ಬಿದ್ದೊಡನೆ ಹುಲಿ, ಬೆಕ್ಕಿನಂತಾಗಿಬಿಟ್ಟಿತಂತೆ. ಆದರೆ ಅದಾದ ಕೆಲವು ಹೊತ್ತಿನಲ್ಲೇ ರಜನೀಕಾಂತ್ ಸೆಟ್ ಬಿಟ್ಟು ಕಾರಿನಲ್ಲಿ ಹೋಗಿ ಬಿಟ್ಟರಂತೆ. ಅವರು ಎಷ್ಟು ಹೊತ್ತಾದರೂ ಬಾರದ್ದು ನೋಡಿ ನಿರ್ದೇಶಕರು ಹೋಟೆಲ್ ರೂಂಗೆ ಕರೆ ಮಾಡಿದರೆ ರಜನೀಕಾಂತ್ ಸಿಕ್ಕರಂತೆ. ಏಕೆ ಹೋಗಿಬಿಟ್ಟಿರಿ, ಎಂದರೆ, ‘ಧರ್ಮೇಂದ್ರ ಆ ಹುಲಿಗೆ ಹೊಡೆದು ಹೋಗಿಬಿಟ್ಟರು. ಈಗ ಅದರೊಂದಿಗೆ ಫೈಟ್ ಮಾಡಬೇಕಿರುವುದು ನಾನು. ಹೊಡೆತ ತಿಂದ ಹುಲಿ ನನಗೆ ಏನಾದರೂ ಮಾಡಿದರೆ, ಆ ಹುಲಿ ಸ್ವಲ್ಪ ಸಮಾಧಾನ ಆಗಲಿ ಆ ಮೇಲೆ ನಾನು ಬರುತ್ತೇನೆ’ ಎಂದರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




