Keerthy Suresh: ‘ಅಣ್ಣಾಥೆ’ ಚಿತ್ರದಲ್ಲಿ ರಜನಿಕಾಂತ್​ ತಂಗಿ ಪಾತ್ರ ಮಾಡಲು 2 ಕೋಟಿ ರೂ. ಪಡೆದ ನಟಿ ಕೀರ್ತಿ ಸುರೇಶ್​

| Updated By: ಮದನ್​ ಕುಮಾರ್​

Updated on: Nov 11, 2021 | 12:47 PM

Annaatthe: ಕೀರ್ತಿ ಸುರೇಶ್​ ಅವರ ಪ್ರತಿಭೆ ಬಗ್ಗೆ ಅನುಮಾನವೇ ಬೇಡ. ರಜನಿಕಾಂತ್​ ನಾಯಕತ್ವದ ‘ಅಣ್ಣಾಥೆ’ ಸಿನಿಮಾ ನ.4ರಂದು ಬಿಡುಗಡೆ ಆಗಿದ್ದು, ಅದರಲ್ಲಿ ಕೀರ್ತಿ ಸುರೇಶ್​ ಅವರ ನಟನೆಗೆ ಎಲ್ಲರೂ ಭೇಷ್​ ಎನ್ನುತ್ತಿದ್ದಾರೆ.

Keerthy Suresh: ‘ಅಣ್ಣಾಥೆ’ ಚಿತ್ರದಲ್ಲಿ ರಜನಿಕಾಂತ್​ ತಂಗಿ ಪಾತ್ರ ಮಾಡಲು 2 ಕೋಟಿ ರೂ. ಪಡೆದ ನಟಿ ಕೀರ್ತಿ ಸುರೇಶ್​
ಕೀರ್ತಿ ಸುರೇಶ್​, ರಜನಿಕಾಂತ್​
Follow us on

ನಟಿ ಕೀರ್ತಿ ಸುರೇಶ್​ (Keerthy Suresh) ಅವರ ಖ್ಯಾತಿ ದಿನೇದಿನೆ ಹೆಚ್ಚುತ್ತಿದೆ. ‘ಮಹಾನಟಿ’ ಸಿನಿಮಾ ಮೂಲಕ 2019ರಲ್ಲಿ ಅವರಿಗೆ ಬಿಗ್​ ಹಿಟ್​ ಸಿಕ್ಕಿತ್ತು. ಆ ನಂತರ ಅವರ ಬೇಡಿಕೆ ದುಪ್ಪಟ್ಟಾಯಿತು. ಸ್ಟಾರ್​ ಹೀರೋಗಳ ಸಿನಿಮಾಗಳಲ್ಲಿ ನಾಯಕಿ ಆಗುತ್ತಿರುವ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ‘ಸೂಪರ್​ ಸ್ಟಾರ್​’ ರಜನಿಕಾಂತ್​ (Rajinikanth) ಜೊತೆ ಒಮ್ಮೆಯಾದರೂ ಅಭಿನಯಿಸಬೇಕು ಎಂಬುದು ಎಲ್ಲ ಹೀರೋಯಿನ್​ಗಳ ಆಸೆ. ಅಂಥ ಆಸೆ ಈಡೇರುವುದರ ಜೊತೆಗೆ ಭಾರಿ ಸಂಭಾವನೆ ಕೂಡ ಸಿಕ್ಕರೆ ಲಾಟರಿ ಹೊಡೆದಂತೆಯೇ ಸರಿ. ನಟಿ ಕೀರ್ತಿ ಸುರೇಶ್​ ಅವರಿಗೆ ‘ಅಣ್ಣಾಥೆ’ (Annaatthe) ಸಿನಿಮಾದಲ್ಲಿ ಆ ರೀತಿಯ ಲಾಟರಿ ಹೊಡೆದಿದೆ ಎಂದರೂ ತಪ್ಪಿಲ್ಲ. ಈ ಸಿನಿಮಾದಲ್ಲಿ ಅವರು ರಜನಿಕಾಂತ್​ ತಂಗಿ ಪಾತ್ರದಲ್ಲಿ ನಟಿಸಿದ್ದಾರೆ. ಅದಕ್ಕಾಗಿ ನಿರ್ಮಾಪಕರು ಕೀರ್ತಿ ಸುರೇಶ್​ ಅವರಿಗೆ ಬರೋಬ್ಬರಿ 2 ಕೋಟಿ ರೂಪಾಯಿ ಸಂಭಾವನೆ (Keerthy Suresh Remuneration) ನೀಡಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಕೀರ್ತಿ ಸುರೇಶ್​ ಅವರ ಪ್ರತಿಭೆ ಬಗ್ಗೆ ಅನುಮಾನವೇ ಬೇಡ. ಎಂಥ ಪಾತ್ರ ಕೊಟ್ಟರೂ ಮನೋಜ್ಞನಾಗಿ ಅವರು ಅಭಿನಯಿಸುತ್ತಾರೆ. ‘ಅಣ್ಣಾಥೆ’ ಸಿನಿಮಾ ನ.4ರಂದು ಬಿಡುಗಡೆ ಆಗಿದ್ದು, ಅದರಲ್ಲಿ ಕೀರ್ತಿ ಸುರೇಶ್​ ಅವರ ನಟನೆಗೆ ಎಲ್ಲರೂ ಭೇಷ್​ ಎನ್ನುತ್ತಿದ್ದಾರೆ. ಇಂಥ ಕಲಾವಿದೆಗೆ ನಿರ್ಮಾಪಕರು 2 ಕೋಟಿ ರೂ. ಸಂಭಾವನೆ ಕೊಟ್ಟರೆ ನಷ್ಟವೇನಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಕೀರ್ತಿ ಸುರೇಶ್​ ಅವರು ತಮ್ಮ ಈವರೆಗಿನ ವೃತ್ತಿ ಜೀವನದಲ್ಲಿ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆದಿರುವುದು ಇದೇ ಮೊದಲ ಎನ್ನಲಾಗುತ್ತಿದೆ.

ಗಲ್ಲಾಪೆಟ್ಟಿಗೆಯಲ್ಲಿ ‘ಅಣ್ಣಾಥೆ’ ಭರ್ಜರಿ ಕಮಾಯಿ:

ದೀಪಾವಳಿ ಹಬ್ಬದ ಪ್ರಯುಕ್ತ ವಿಶ್ವಾದ್ಯಂತ ತೆರೆಕಂಡಿರುವ ‘ಅಣ್ಣಾಥೆ’ ಚಿತ್ರಕ್ಕೆ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್​ ಆಗಿದೆ. ಆ ಮೂಲಕ ರಜನಿಕಾಂತ್​ ಅವರ ಖಾತೆಗೆ ಮತ್ತೊಂದು ಸೂಪರ್​ ಹಿಟ್​ ಸಿನಿಮಾ ಸೇರ್ಪಡೆ ಆಗಿದೆ. ವಿಶ್ವಾದ್ಯಂತ ಸುಮಾರು 2200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆಕಂಡಿತು. ತಮಿಳುನಾಡು ಒಂದರಲ್ಲೇ 800ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಜನಿಕಾಂತ್ ಸಿನಿಮಾ ತೆರೆಗೆ ಬಂದಿದೆ. ಕರ್ನಾಟಕ ಹಾಗೂ ಆಂಧ್ರ ಸೇರಿ ಮತ್ತಿತರ ರಾಜ್ಯಗಳಲ್ಲೂ ಈ ಸಿನಿಮಾ ದೊಡ್ಡ ಮಟ್ಟದಲ್ಲೇ ರಿಲೀಸ್​ ಆಗಿದೆ.

ವಿಶ್ವ ಮಟ್ಟದಲ್ಲಿ ಈ ಸಿನಿಮಾ ಮೊದಲ ದಿನ 70 ಕೋಟಿ ಗಳಿಕೆ ಮಾಡಿತ್ತು. ನವೆಂಬರ್​​ 5ರಂದು ಸಿನಿಮಾ 42.6 ಕೋಟಿ ರೂಪಾಯಿ, ನವೆಂಬರ್​ 6ರಂದು ಚಿತ್ರ 33.71 ಕೋಟಿ ಗಳಿಸಿತು. ಭಾನುವಾರ (ನ.7) ಸಿನಿಮಾ ಗಳಿಕೆ 28.20 ಕೋಟಿ ಹಾಗೂ ಸೋಮವಾರ 11.85 ಕೋಟಿ ಬಾಚಿಕೊಂಡಿತು. ಈ ಮೂಲಕ ಸಿನಿಮಾ ಕಲೆಕ್ಷನ್​ 186.58 ಕೋಟಿ ರೂಪಾಯಿ ಆಗಿತ್ತು. ಬಾಕ್ಸ್​​ಆಫೀಸ್​ನಲ್ಲಿ ಚಿತ್ರದ ನಾಗಾಲೋಟ ಮುಂದುವರಿದಿದೆ.