ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಾಲು ಸಾಲು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಸ್ಟಾರ್ ನಟರ ಅನೇಕ ಚಿತ್ರಗಳು ಹಬ್ಬದ ಆಸುಪಾಸಿನಲ್ಲಿ ತೆರೆಕಾಣುತ್ತಿರುವುದರಿಂದ ಕ್ಲ್ಯಾಶ್ ಆಗುವುದು ಗ್ಯಾರಂಟಿ. ‘ಕ್ಯಾಪ್ಟನ್ ಮಿಲ್ಲರ್’, ‘ಗುಂಟೂರು ಖಾರಂ’, ‘ನಾ ಸಾಮಿ ರಂಗ’ ಮುಂತಾದ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಜನಿಕಾಂತ್ (Rajinikanth) ನಟನೆಯ ‘ಲಾಲ್ ಸಲಾಂ’ ಸಿನಿಮಾ ಕೂಡ ಇದೇ ಸಂದರ್ಭದಲ್ಲಿ ತೆರೆಕಾಣಬೇಕಿತ್ತು. ಆದರೆ ಈಗ ಆ ಸಿನಿಮಾದ ರಿಲೀಸ್ ದಿನಾಂಕ ಮುಂದೂಡಿಕೆ ಆಗಿದೆ. ಆ ಬಗ್ಗೆ ‘ಲಾಲ್ ಸಲಾಂ’ (Lal Salaam) ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ.
‘ಲಾಲ್ ಸಲಾಂ’ ಸಿನಿಮಾಗೆ ಐಶ್ವರ್ಯಾ ರಜನಿಕಾಂತ್ ಅವರು ನಿರ್ದೇಶನ ಮಾಡಿದ್ದಾರೆ. ‘ಜೈಲರ್’ ಸಿನಿಮಾದ ಅಭೂತಪೂರ್ವ ಗೆಲುವಿನ ಬಳಿಕ ‘ಸೂಪರ್ ಸ್ಟಾರ್’ ರಜನಿಕಾಂತ್ ಅಭಿನಯಿಸಿರುವ ಈ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗಲಿದೆ ಎಂದು ಈ ಮೊದಲು ತಿಳಿಸಲಾಗಿತ್ತು. ಅದೇ ಸಂದರ್ಭದಲ್ಲಿ (ಜ.12) ಶಿವರಾಜ್ಕುಮಾರ್ ನಟನೆಯ ‘ಕ್ಯಾಪ್ಟನ್ ಮಿಲ್ಲರ್’ ಕೂಡ ಬಿಡುಗಡೆ ಆಗಲಿದೆ. ಆದರೆ ಈಗ ಆ ಕ್ಲ್ಯಾಶ್ ತಪ್ಪಿದೆ. ‘ಲಾಲ್ ಸಲಾಂ’ ರಿಲೀಸ್ ಡೇಟ್ ಫೆಬ್ರವರಿ 9ಕ್ಕೆ ಮುಂದೂಡಿಕೆ ಆಗಿದೆ.
ಇದನ್ನೂ ಓದಿ: ರಜನಿಕಾಂತ್ ಹೊಸ ಸಿನಿಮಾ ಹೆಸರು ‘ವೆಟ್ಟೈಯನ್’; ಧೂಳೆಬ್ಬಿಸಿದ ಟೈಟಲ್ ಟೀಸರ್
ಸ್ಪೋರ್ಟ್ಸ್ ಡ್ರಾಮಾ ಹೊಂದಿರುವ ‘ಲಾಲ್ ಸಲಾಂ’ ಸಿನಿಮಾದಲ್ಲಿ ರಜನಿಕಾಂತ್ ಜೊತೆ ವಿಷ್ಣು ವಿಶಾಲ್, ವಿಕ್ರಾಂತ್ ಅವರು ನಟಿಸಿದ್ದಾರೆ. ವಿಘ್ನೇಶ್, ಸೆಂಥಿಲ್, ಕೆ.ಎಸ್. ರವಿಕುಮಾರ್, ಜೀವಿತಾ, ತಂಬಿ ರಾಮಯ್ಯ ಮುಂತಾದವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ರಜನಿಕಾಂತ್ ಅವರು ಈ ಸಿನಿಮಾದಲ್ಲಿ ಮೊಯಿದ್ದೀನ್ ಭಾಯ್ ಎಂಬ ಪವರ್‌ಫುಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರ ಗೆಟಪ್ ಗಮನ ಸೆಳೆಯುವಂತಿದೆ.
9-2-2024 ! #LalSalaam pic.twitter.com/3pk9jWb8MG
— Aishwarya Rajinikanth (@ash_rajinikanth) January 9, 2024
ತಮಿಳು ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ‘ಲೈಕಾ ಪ್ರೊಡಕ್ಷನ್ಸ್’ ಮೂಲಕ ಸುಭಾಸ್ಕರನ್ ಅವರು ‘ಲಾಲ್ ಸಲಾಂ’ ಸಿನಿಮಾ ನಿರ್ಮಿಸಿದ್ದಾರೆ. ತಮಿಳುನಾಡಲ್ಲಿ ಈ ಚಿತ್ರದ ವಿತರಣೆ ಹಕ್ಕನ್ನು ‘ರೆಡ್ ಜೈಂಟ್’ ಸಂಸ್ಥೆ ಪಡೆದಿದೆ. ತಮಿಳು ಮಾತ್ರವಲ್ಲದೇ ಕನ್ನಡ, ತೆಲುಗು, ಹಿಂದಿ, ಮಲಯಾಳಂನಲ್ಲಿ ಈ ಚಿತ್ರ ತೆರೆಕಾಣಲಿದೆ. ‘ಲಾಲ್ ಸಲಾಂ’ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣು ರಂಗಸಾಮಿ ಛಾಯಾಗ್ರಹಣ, ಬಿ. ಪ್ರವೀಣ್ ಭಾಸ್ಕರ್ ಸಂಕಲನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:29 pm, Thu, 11 January 24