ನಟ ರಜನಿಕಾಂತ್ (Rajinikanth) ಅವರು ಒಂದರ ಹಿಂದೊಂದು ಸಿನಿಮಾಗಳನ್ನು ಒಪ್ಪಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡುತ್ತಿದ್ದಾರೆ. ಈಗ ಅವರು 170ನೇ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಆ ಚಿತ್ರಕ್ಕೆ ‘ವೆಟ್ಟಯ್ಯನ್’ ಎಂದು ಶೀರ್ಷಿಕೆ ಇಡಲಾಗಿದೆ. ಅದಕ್ಕೆ ಟಿ.ಜೆ. ಜ್ಞಾನವೇಲ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಆ ಸಿನಿಮಾದ ಬಳಿಕ 171ನೇ ಸಿನಿಮಾ ಸೆಟ್ಟೇರಲಿದೆ. ಅದಕ್ಕೆ ಲೋಕೇಶ್ ಕನಗರಾಜ್ (Lokesh Kanagaraj) ಅವರು ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಸದ್ಯಕ್ಕೆ ‘ತಲೈವರ್ 171’ (Thalaivar 171) ಎಂದು ಕರೆಯಲಾಗುತ್ತಿದೆ. ಇದರ ಹೊಸ ಪೋಸ್ಟರ್ ಬಿಡುಗಡೆ ಆಗಿದೆ.
ಲೋಕೇಶ್ ಕನಗರಾಜ್ ಮತ್ತು ರಜನಿಕಾಂತ್ ಅವರ ಕಾಂಬಿನೇಷನ್ ಎಂಬ ಕಾರಣಕ್ಕೆ ‘ತಲೈವರ್ 171’ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಈ ಸಿನಿಮಾದ ಪೋಸ್ಟರ್ ಕೂಡ ಅಷ್ಟೇ ಇಂಟರೆಸ್ಟಿಂಗ್ ಆಗಿ ಮೂಡಿಬಂದಿದೆ. ರಜನಿಕಾಂತ್ ಅವರ ಕೈಗೆ ಬೇಡಿ ಹಾಕಲಾಗಿದೆ. ಆದರೆ ಅದು ಚಿನ್ನದ ವಾಚ್ನಿಂದ ಮಾಡಿದ ಬೇಡಿ! ಅದನ್ನು ನೋಡಿದ ಅಭಿಮಾನಿಗಳಿಗೆ ಸಿನಿಮಾದ ಕಥೆಯ ಬಗ್ಗೆ ಕೌತುಕ ಮೂಡಿದೆ.
ಈ ಪೋಸ್ಟರ್ನ ಜೊತೆಯಲ್ಲಿ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಒಂದು ಗುಡ್ ನ್ಯೂಸ್ ನೀಡಿದ್ದಾರೆ. ಅದೇನೆಂದರೆ, ಏಪ್ರಿಲ್ 22ರಂದು ಈ ಸಿನಿಮಾದ ಶೀರ್ಷಿಕೆ ಅನಾವರಣ ಆಗಲಿದೆ ಎಂದು ಅವರು ತಿಳಿಸಿದ್ದಾರೆ. ದೊಡ್ಡ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಪ್ರತಿಷ್ಠಿತ ‘ಸನ್ ಪಿಕ್ಚರ್ಸ್’ ಸಂಸ್ಥೆಯು ‘ತಲೈವರ್ 171’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.
ಇದನ್ನೂ ಓದಿ: ಮಕ್ಕಳು, ಮೊಮ್ಮಕ್ಕಳ ಜೊತೆ ರಜನಿಕಾಂತ್ ಸರಳ ಸುಂದರ ಹೋಳಿ ಆಚರಣೆ
ಕಾಲಿವುಡ್ನಲ್ಲಿ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಸಿನಿಮಾಗಳ ಕಥೆಯಲ್ಲಿ ಒಂದಕ್ಕೊಂದು ಲಿಂಕ್ ಇರುತ್ತದೆ. ಅದನ್ನು ಅವರು ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್ ಎಂದು ಕರೆದಿದ್ದಾರೆ. ‘ಖೈದಿ’, ‘ವಿಕ್ರಮ್’ ಸಿನಿಮಾಗಳ ಕಥೆಗಳು ಒಂದಕ್ಕೊಂದು ಬೆಸೆದುಕೊಂಡಿವೆ. ಆದರೆ ಈಗ ಅವರು ನಿರ್ದೇಶನ ಮಾಡಲಿರುವ ‘ತಲೈವರ್ 171’ ಚಿತ್ರದಲ್ಲಿ ಆ ರೀತಿಯ ಲಿಂಕ್ ಇರುವುದಿಲ್ಲ ಎನ್ನಲಾಗಿದೆ. ಅಲ್ಲದೇ ಇದೊಂದು ಪ್ರಯೋಗಾತ್ಮಕ ಸಿನಿಮಾ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಸಿನಿಮಾ ಸೆಟ್ಟೇರುವ ಮುನ್ನವೇ ಹೈಪ್ ಸೃಷ್ಟಿ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.