
ತೆಲುಗಿನ ಸ್ಟಾರ್ ನಟ ರಾಮ್ ಚರಣ್ ಮತ್ತು ಉಪಾಸನಾ ಅವರುಗಳು ವಿವಾಹವಾಗಿ 13 ವರ್ಷಗಳಾಗಿವೆ. ಖ್ಯಾತ ಉದ್ಯಮಿಯ ಪುತ್ರಿ ಉಪಾಸನಾ ಸ್ವತಃ ಉದ್ಯಮಿ ಆಗಿರುವ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ದಂಪತಿ ಮದುವೆಯಾದ 11 ವರ್ಷಗಳ ಬಳಿಕ ಅಂದರೆ 2023 ರಲ್ಲಿ ಪೋಷಕರಾದರು. ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮಗುವಿಗೆ ಕ್ಲಿನ್ ಕಾರಾ ಎಂದು ಹೆಸರಿಡಲಾಗಿದೆ. ಇದೀಗ ಈ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಅಸಲಿಗೆ ರಾಮ್ ಚರಣ್ ದಂಪತಿ ಮಗುವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದರು. ಈ ಬಗ್ಗೆ ಉಪಾಸನಾ ಒಮ್ಮೆ ಬಹಿರಂಗವಾಗಿ ಮಾತನಾಡಿದ್ದರು. ಸದ್ಗುರುಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಉಪಾಸನಾ, ತಮಗೆ ಮಗು ಮಾಡಿಕೊಳ್ಳುವ ಇಚ್ಛೆ ಇಲ್ಲ ಆದರೆ ನನ್ನ ತಾಯಿ ಮತ್ತು ಅತ್ತೆ ಬಲವಂತ ಮಾಡುತ್ತಿದ್ದಾರೆ ಎಂದಿದ್ದರು. ಆದರೆ ಕೊನೆಗೆ ಕೌಟುಂಬಿಕ ಒತ್ತಾಯಕ್ಕೆ ಮಣಿದು, 2023 ರಲ್ಲಿ ಹೆಣ್ಣು ಮಗುವಿಗೆ ತಾಯಿ ಆದರು. ಮೊದಲ ಮಗುವಾದ ಎರಡನೇ ವರ್ಷದಲ್ಲಿ ಈಗ ಎರಡನೇ ಮಗುವಿಗೆ ತಯಾರಾಗಿದ್ದಾರೆ ದಂಪತಿ.
ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಉಪಾಸನಾ, ಈ ದೀಪಾವಳಿ ನಮ್ಮ ಮನೆಯಲ್ಲಿ ಡಬಲ್ ಧಮಾಕ. ಡಬಲ್ ಖುಷಿ, ಡಬಲ್ ಆಶೀರ್ವಾದ ಎಂದಿದ್ದಾರೆ. ಗರ್ಭಿಣಿ ಆಗಿರುವ ಉಪಾಸನಾ ಅವರ ಸೀಮಂತವನ್ನು ರಾಮ್ ಚರಣ್ ಅವರ ನಿವಾಸದಲ್ಲಿ ನೆರವೇರಿಸಲಾಗಿದೆ. ರಾಮ್ ಚರಣ್ ಅವರ ಕುಟುಂಬದವರು, ಉಪಾಸನಾ ಅವರ ಕುಟುಂಬದವರು ಎಲ್ಲರೂ ಸೇರಿ ಉಪಾಸನಾ ಅವರ ಸೀಮಂತ ಕಾರ್ಯ ನೆರವೇರಿಸಿದ್ದಾರೆ. ಚಿರಂಜೀವಿ, ರಾಮ್ ಚರಣ್ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.
ಇದನ್ನೂ ಓದಿ:ರಾಮ್ ಚರಣ್ ಅನ್ನು ಕೊಂಡಾಡಿದ ನಟಿ ಜಾನ್ಹವಿ ಕಪೂರ್
ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮೆಗಾಸ್ಟಾರ್ ಚಿರಂಜೀವಿ, ಮನೆಯಲ್ಲೆಲ್ಲ ಬರೀ ಹೆಣ್ಣು ಮಕ್ಕಳೇ ಇದ್ದಾರೆ. ಮಹಿಳಾ ಹಾಸ್ಟೆಲ್ಗೆ ವಾರ್ಡನ್ ಆಗಿದ್ದೀನೇನೋ ಅನಿಸುತ್ತಿದೆ. ಒಂದೂ ಗಂಡು ಮಗುವಿಲ್ಲ ಎಂದು ಹೇಳಿದ್ದರು. ಪರೋಕ್ಷವಾಗಿ ರಾಮ್ ಚರಣ್ಗೆ ಗಂಡು ಮಗು ಆಗಲಿ ಎಂಬ ಆಸೆ ವ್ಯಕ್ತಪಡಿಸಿದ್ದರು. ಇದೀಗ ರಾಮ್ ಚರಣ್ ಮತ್ತು ಉಪಾಸನಾ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದು, ಚಿರಂಜೀವಿ ಆಸೆ ಈಡೇರುತ್ತದೆಯೇ ಕಾದು ನೋಡಬೇಕಿದೆ.
ರಾಮ್ ಚರಣ್ ಪ್ರಸ್ತುತ ‘ಪೆದ್ದಿ’ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಸಿನಿಮಾ ಅನ್ನು ಬುಚ್ಚಿ ಬಾಬು ಸನಾ ನಿರ್ದೇಶಿಸುತ್ತಿದ್ದು, ಸಿನಿಮಾನಲ್ಲಿ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಸಹ ನಟಿಸುತ್ತಿದ್ದಾರೆ. ಜಾನ್ಹವಿ ಕಪೂರ್ ನಾಯಕಿ. ಈ ಸಿನಿಮಾದ ಬಳಿಕ ಸುಕುಮಾರ್ ನಿರ್ದೇಶನ ಮಾಡಲಿರುವ ಹೊಸ ಸಿನಿಮಾನಲ್ಲಿ ರಾಮ್ ಚರಣ್ ನಟನೆ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:01 pm, Thu, 23 October 25