
ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಹಾಗೂ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ‘ಪೆದ್ದಿ’ (Peddi) ಜೂನ್ 4ರಂದು ತೆರೆಕಾಣಲು ಸಜ್ಜಾಗಿದೆ. ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಚಿತ್ರತಂಡ ಸೆನ್ಸಾರ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿದೆ. ಆದರೆ, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಈ ಚಿತ್ರದ ಮೂಲ ತೆಲುಗು ಆವೃತ್ತಿಗೆ ಹಲವು ಪ್ರಮುಖ ಸೂಚನೆಗಳನ್ನು ನೀಡಿದೆ. ಅನೇಕ ಪದಗಳನ್ನು ಮ್ಯೂಟ್ ಮಾಡುವಂತೆ ತಿಳಿಸಿದೆ.
‘ಪೆದ್ದಿ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ (U/A 16+) ಪ್ರಮಾಣಪತ್ರವನ್ನು ನೀಡಿದೆ. ಆದರೆ ಚಿತ್ರದಲ್ಲಿ ಬಳಕೆಯಾಗಿರುವ ಹಲವು ಆಕ್ಷೇಪಾರ್ಹ ಪದಗಳು, ಸಮುದಾಯದ ಉಲ್ಲೇಖಗಳು ಹಾಗೂ ದೃಶ್ಯಗಳನ್ನು ಬದಲಾಯಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಷ್ಟೇ ಅಲ್ಲದೆ, ಚಿತ್ರದ ಹಿಟ್ ಗೀತೆ ‘ಚಿಕಿರಿ ಚಿಕಿರಿ’ ಹಾಡಿನಲ್ಲಿ ಬರುವ ‘ಸರುಕು ಸಾಮಾನ್’ ಎಂಬ ಪದಗಳನ್ನು ಸಹ ಬದಲಾಯಿಸಲಾಗಿದೆ.
ಚಿತ್ರದ ದ್ವಿತೀಯಾರ್ಧದಲ್ಲಿ ಬರುವ ‘ರಾಜಸ್ಥಾನ’ ಪದ ಹಾಗೂ ಒಂದು ನಿರ್ದಿಷ್ಟ ಸಮುದಾಯಕ್ಕೆ ಸಂಬಂಧಿಸಿದ ಉಲ್ಲೇಖಗಳನ್ನು ಚಿತ್ರದಿಂದ ಸಂಪೂರ್ಣವಾಗಿ ತೆಗೆದುಹಾಕಲು ಸೂಚಿಸಲಾಗಿದೆ. ದೃಶ್ಯಗಳ ವಿಚಾರಕ್ಕೆ ಬಂದರೆ, ಚಿತ್ರದಲ್ಲಿ ಪಾತ್ರವೊಂದು ಮಧ್ಯದ ಬೆರಳು ತೋರಿಸುವ ದೃಶ್ಯಕ್ಕೆ ಸಿಜಿ ಎಫೆಕ್ಟ್ ಬಳಸಿ ಮರೆಮಾಚಲು ಹೇಳಲಾಗಿದೆ.
ಚಿತ್ರತಂಡ ಈ ಎಲ್ಲಾ ಬದಲಾವಣೆಗಳನ್ನು ಮಾಡಿದ ನಂತರ ಮೇ 22ರಂದು ಅಧಿಕೃತ ಸೆನ್ಸಾರ್ ಪ್ರಮಾಣಪತ್ರವನ್ನು ಕೈಗೆತ್ತಿಕೊಂಡಿದೆ. ಸೆನ್ಸಾರ್ ಸರ್ಟಿಫಿಕೇಟ್ ಪ್ರಕಾರ ‘ಪೆದ್ದಿ’ ಚಿತ್ರದ ಒಟ್ಟು ಅವಧಿ 189 ನಿಮಿಷಗಳು, ಅಂದರೆ 3 ಗಂಟೆ 9 ನಿಮಿಷ ಇರಲಿದೆ. ಚಿತ್ರದಲ್ಲಿ ಸಾಹಸ ಮತ್ತು ಹಿಂಸಾತ್ಮಕ ದೃಶ್ಯಗಳಿಗೆ ಯಾವುದೇ ವಿಶುವಲ್ ಕಟ್ಸ್ ನೀಡಿಲ್ಲ ಎಂದು ಬಾಲಿವುಡ್ ಹಂಗಾಮಾ ವರದಿ ಮಾಡಿದೆ.
ಇದನ್ನೂ ಓದಿ: ದಂಗಲ್, ಸುಲ್ತಾನ್ ರೀತಿ ಇದೆಯಾ ‘ಪೆದ್ದಿ’ ಕಥೆ? ಆಮಿರ್, ಸಲ್ಲುಗೆ ರಾಮ್ ಚರಣ್ ಧನ್ಯವಾದ
ಬುಚ್ಚಿ ಬಾಬು ಸನಾ ಕಥೆ ಬರೆದು ನಿರ್ದೇಶಿಸಿರುವ ‘ಪೆದ್ದಿ’ ಚಿತ್ರವನ್ನು ವೆಂಕಟ ಸತೀಶ್ ಕಿಲಾರು ನಿರ್ಮಿಸಿದ್ದಾರೆ. ಈಶಾನ್ ಸಕ್ಸೇನಾ ಸಹ-ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ ರಾಮ್ ಚರಣ್, ಜಾನ್ವಿ ಕಪೂರ್ ಜೊತೆಗೆ ಶಿವರಾಜ್‌ಕುಮಾರ್, ಜಗಪತಿ ಬಾಬು, ದಿವ್ಯೇಂದು ಶರ್ಮಾ, ಬೊಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. ಉತ್ತರ ಭಾರತದಲ್ಲಿ ‘ಜಿಯೋ ಸ್ಟುಡಿಯೋಸ್’ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ. ಈ ಸಿನಿಮಾ ಐಮ್ಯಾಕ್ಸ್ ಫಾರ್ಮ್ಯಾಟ್‌ನಲ್ಲೂ ಬಿಡುಗಡೆಯಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.