‘ಪೆದ್ದಿ’ ಸಕ್ಸಸ್ ಮೀಟ್‌ಗೆ ಜಾನ್ವಿ ಕಪೂರ್ ಗೈರು: ರಾಮ್ ಚರಣ್ ಸಿನಿಮಾ ವಿವಾದಕ್ಕೆ ಹೆದರಿದ್ರಾ ನಟಿ?
ಜಾನ್ವಿ ಕಪೂರ್ ಅವರಿಗೆ ‘ಪೆದ್ದಿ’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇತ್ತು. ಆದರೆ ಈ ಸಿನಿಮಾದಿಂದ ವಿವಾದ ಆಗಿದ್ದೇ ಹೆಚ್ಚು. ಹಾಗಾಗಿ ಅವರು ಸಿನಿಮಾದ ಸಕ್ಸಸ್ ಮೀಟ್‌ಗೆ ಬಂದಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ..

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಮತ್ತು ಜಾನ್ವಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಪೆದ್ದಿ’ (Peddi) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ಚಿತ್ರದ ಅದ್ಭುತ ಯಶಸ್ಸನ್ನು ಸಂಭ್ರಮಿಸಲು ಸೋಮವಾರ (ಜೂನ್ 8) ಹೈದರಾಬಾದ್‌ನಲ್ಲಿ ಅದ್ಧೂರಿ ಸಕ್ಸಸ್ ಮೀಟ್ ಆಯೋಜಿಸಲಾಗಿತ್ತು. ಆದರೆ, ಈ ಸಂಭ್ರಮದ ಕಾರ್ಯಕ್ರಮದಲ್ಲಿ ಚಿತ್ರದ ನಾಯಕಿ ಜಾನ್ವಿ ಕಪೂರ್ (Janhvi Kapoor) ಅವರ ಗೈರುಹಾಜರಿ ಎದ್ದು ಕಾಣುತ್ತಿದ್ದು, ಸದ್ಯ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಚಿತ್ರದಲ್ಲಿ ಜಾನ್ವಿ ಕಪೂರ್ ನಿರ್ವಹಿಸಿರುವ ಅಚ್ಚಿಯಮ್ಮ ಎಂಬ ಪಾತ್ರದ ಚಿತ್ರಣ ಮತ್ತು ಕೆಲವು ದೃಶ್ಯಗಳಲ್ಲಿನ ಕ್ಯಾಮೆರಾ ಕೋನಗಳ ಬಗ್ಗೆ ಪ್ರೇಕ್ಷಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಚಿತ್ರತಂಡ ಜಾನ್ವಿ ಪಾತ್ರವನ್ನು ಕೇವಲ ಗ್ಲಾಮರ್‌ಗಾಗಿ ಬಳಸಿಕೊಂಡಿದೆ ಮತ್ತು ವಸ್ತುವಿನಂತೆ ಬಿಂಬಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ವಿವಾದ ಮತ್ತು ಟ್ರೋಲ್‌ಗಳ ಹಿನ್ನೆಲೆಯಲ್ಲೇ ಜಾನ್ವಿ ಸಕ್ಸಸ್ ಮೀಟ್‌ನಿಂದ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ.
ಕಾರ್ಯಕ್ರಮದಲ್ಲಿ ರಾಮ್ ಚರಣ್, ನಿರ್ದೇಶಕ ಬುಚ್ಚಿ ಬಾಬು ಸನಾ, ಹಿರಿಯ ನಟ ಜಗಪತಿ ಬಾಬು ಸೇರಿದಂತೆ ಇಡೀ ಚಿತ್ರತಂಡ ಭಾಗವಹಿಸಿತ್ತು. ವೇದಿಕೆ ಮೇಲೆ ಮಾತನಾಡಿದ ಜಗಪತಿ ಬಾಬು, ಸಿನಿಮಾಗೆ ನೆಗೆಟಿವ್ ವಿಮರ್ಶೆ ಕೊಟ್ಟವರಿಗೂ ಧನ್ಯವಾದ ತಿಳಿಸುವ ಮೂಲಕ ಟ್ರೋಲರ್‌ಗಳಿಗೆ ಸೂಕ್ಷ್ಮವಾಗಿ ಟಾಂಗ್ ನೀಡಿದರು. ‘ಪೆದ್ದಿ ಚಿತ್ರವು ಕತ್ತಿಯ ಅಂಚಿನ ಮೇಲೆ ಹೋರಾಡಿ ಎರಡು ಬಾರಿ ಗೆದ್ದಿದೆ’ ಎಂದು ಅವರು ಚಿತ್ರದ ಯಶಸ್ಸನ್ನು ಸಮರ್ಥಿಸಿಕೊಂಡರು.
ಜಾನ್ವಿ ಪಾತ್ರದ ವಿವಾದ ತಾರಕಕ್ಕೇರುತ್ತಿದ್ದಂತೆಯೇ ಎಚ್ಚೆತ್ತ ನಿರ್ದೇಶಕ ಬುಚ್ಚಿ ಬಾಬು ಸನಾ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅಧಿಕೃತವಾಗಿ ಕ್ಷಮೆಯಾಚಿಸಿದ್ದಾರೆ. ‘ಮಹಿಳೆಯರನ್ನು ಗೌರವದಿಂದ ಬಿಂಬಿಸುವುದು ನಮ್ಮ ಆಶಯ. ಯಾರ ಭಾವನೆಗಳಿಗಾದರೂ ಧಕ್ಕೆಯಾಗಿದ್ದರೆ ಕ್ಷಮಿಸಿ. ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ವಿವಾದಾತ್ಮಕ ದೃಶ್ಯಗಳನ್ನು ಕಟ್ ಮಾಡಲು ನಿರ್ಧರಿಸಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ‘ಪೆದ್ದಿ’ ಚಿತ್ರದ ಆಕ್ಷೇಪಾರ್ಹ ಶಾಟ್‌ಗಳಿಗೆ ಜಾನ್ವಿ ಕಪೂರ್ ವಿರೋಧ? ನಟಿಯ ಮೆಸೇಜ್ ಲೀಕ್
ಸದ್ಯ ವಿಶ್ವಾದ್ಯಂತ ಸುಮಾರು 250 ಕೋಟಿ ರೂಪಾಯಿ ಗಳಿಸುವತ್ತ ಮುನ್ನುಗ್ಗುತ್ತಿರುವ ‘ಪೆದ್ದಿ’ ಚಿತ್ರದಲ್ಲಿ ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರ ಯಶಸ್ವಿಯಾಗುತ್ತಿದ್ದರೂ ಜಾನ್ವಿ ಕಪೂರ್ ಈಗ ಸೋಷಿಯಲ್ ಮೀಡಿಯಾದಲ್ಲಿ ಕೂಡ ಸೈಲೆಂಟ್ ಆಗಿರುವುದು ಕುತೂಹಲ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




