ರಾಮ್ ಚರಣ್-ಉಪಾಸನಾಗೆ ಮಗು ಜನಿಸಿದ ದಿನ, ಸಮಯದ ಬಗ್ಗೆ ಚಿರಂಜೀವಿ ಪ್ರತಿಕ್ರಿಯೆ

|

Updated on: Jun 20, 2023 | 6:55 PM

Ram Charan: ನಟ ರಾಮ್ ಚರಣ್ ತೇಜ ಹಾಗೂ ಉಪಾಸನಾ ಕೋನಿಡೇಲ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ. ರಾಮ್ ಚರಣ್ ತಂದೆ ಚಿರಂಜೀವಿ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ರಾಮ್ ಚರಣ್-ಉಪಾಸನಾಗೆ ಮಗು ಜನಿಸಿದ ದಿನ, ಸಮಯದ ಬಗ್ಗೆ ಚಿರಂಜೀವಿ ಪ್ರತಿಕ್ರಿಯೆ
ರಾಮ್ ಚರಣ್-ಉಪಾಸನಾ
Follow us on

ನಟ ರಾಮ್ ಚರಣ್ (Ram Charan) ಹಾಗೂ ಉಪಾಸನಾ (Upasana Konidela) ಪೋಷಕರಾಗಿದ್ದಾರೆ. ಉಪಾಸನಾ ಹೆಣ್ಣು ಮಗುವಿಗೆ ಮಂಗಳವಾರದ ತುದಿ ಮುಂಜಾವಿನಲ್ಲಿ ಜನ್ಮ ನೀಡಿದ್ದಾರೆ. ರಾಮ್ ಚರಣ್ ಹಾಗೂ ಉಪಾಸನಾ ಮದುವೆಯಾಗಿ 11 ವರ್ಷಗಳ ಬಳಿಕ ಇಬ್ಬರೂ ಪೋಷರಾಗಿದ್ದಾರೆ. ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಸಹಜವಾಗಿಯೇ ಕೋನಿಡೆಲಾ ಹಾಗೂ ಕಾಮಿನೇನಿ ಕುಟುಂಬಕ್ಕೆ ಹರ್ಷ ತಂದಿದೆ. ರಾಮ್ ಚರಣ್ ಹಾಗೂ ಉಪಾಸನಾ ಪೋಷಕರಾಗಬೇಕು ಎಂದು ಸ್ವತಃ ಚಿರಂಜೀವಿ ಬಹು ಸಮಯದಿಂದ ಆಶಿಸಿದ್ದರು. ಅವರು ಬಯಸಿದಂತೆ ಅವರು ತಾತ ಆಗಿದ್ದಾರೆ. ಕುಟುಂಬಕ್ಕೆ ಹೆಣ್ಣು ಮಗುವಿನ ಆಗಮನ ಆಗಿರುವ ಬಗ್ಗೆ ನಟ ಚಿರಂಜೀವಿ ಮಾಧ್ಯಮಗಳ ಬಳಿ ಖುಷಿ ಹಂಚಿಕೊಂಡಿದ್ದಾರೆ.

”ಮಂಗಳವಾರ ಬೆಳಿಗ್ಗೆ 1:49 ನಿಮಿಷಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದು ನಮ್ಮ ಕುಟುಂಬಕ್ಕೆ ಬಹಳ ಸಂತಸ ತಂದಿದೆ. ಹೆಣ್ಣು ಮಗು ಜನಿಸಿರುವುದು ನಮಗೆ ಬಹಳ ಖುಷಿಯ ಕ್ಷಣ. ಅವರಿಬ್ಬರು ಪೋಷಕರಾಗಬೇಕು ಎಂಬುದು ನಮ್ಮ ಬಹುವರ್ಷದ ಆಶಯ. ಅವರು ಅಪ್ಪ-ಅಮ್ಮ ಆಗಬೇಕು, ನಮ್ಮ ಕೈಗೆ ಮಗು ಕೊಡಬೇಕು ಎಂದು ಆಸೆಪಟ್ಟಿದ್ದೆವು. ಇಷ್ಟು ವರ್ಷದ ಬಳಿಕ ಆ ಭಗವಂತನ ದಯೆಯಿಂದ ಈಗ ಸಾಧ್ಯವಾಗಿದೆ. ಈ ಅದ್ಭುತ ಸಂದರ್ಭದಲ್ಲಿ ದೇಶ, ವಿದೇಶಗಳಿಂದ ನಮ್ಮ ಬಂಧುಗಳು, ಸ್ನೇಹಿತರು, ಶ್ರೇಯೋಭಿಲಾಷಿಗಳು ಶುಭಾಶಯ ಹೇಳುತ್ತಿದ್ದಾರೆ ಅವರಿಗೆಲ್ಲ ಧನ್ಯವಾದ. ನಮ್ಮ ಖುಷಿಯನ್ನು ಅವರ ಖುಷಿ ಎಂದುಕೊಳ್ಳುವ ಅಭಿಮಾನಿಗಳೂ ಇದ್ದಾರೆ ಅವರಿಗೂ ಧನ್ಯವಾದ” ಎಂದಿದ್ದಾರೆ ಚಿರಂಜೀವಿ.

”ಮಂಗಳವಾರ ಜನಿಸಿದೆ ಮಗು. ಬಹಳ ಒಳ್ಳೆಯ ಸಮಯದಲ್ಲಿ ಜನನವಾಗಿದೆ ಎಂದು ದೊಡ್ಡವರು ಹೇಳುತ್ತಿದ್ದಾರೆ. ಆ ಪ್ರಭಾವವನ್ನು ಮೊದಲಿನಿಂದಲೂ ತೋರಿಸುತ್ತಲೇ ಇದೆ. ವೃತ್ತಿಯಲ್ಲಿ ರಾಮ್ ಚರಣ್ ಪ್ರಗತಿ ಆಗಿರಬಹುದು, ಇತ್ತೀಚೆಗೆ ವರುಣ್-ಲಾವಣ್ಯ ನಿಶ್ಚಿತಾರ್ಥವಾಗಿರಬಹುದು ಎಲ್ಲವೂ ಶುಭವೇ ಆಗುತ್ತಿದೆ. ಈಗ ಮಗು ಸಹ ಜನಿಸಿದೆ. ಮಂಗಳವಾರ ಆಂಜನೇಯ ಸ್ವಾಮಿ ವಾರ. ನಮ್ಮ ಕುಟುಂಬ ಆಂಜನೇಯ ಸ್ವಾಮಿಯನ್ನು ನಂಬಿಕೊಂಡಿದೆ. ಈಗ ಆಂಜನೇಯಸ್ವಾಮಿ ಮಂಗಳವಾರವೇ ಹೆಣ್ಣು ಮಗುವನ್ನು ನಮಗೆ ಪ್ರಸಾದಿಸಿದ್ದಾರೆ” ಎಂದಿದ್ದಾರೆ ಚಿರಂಜೀವಿ.

ಇದನ್ನೂ ಓದಿ:ಅಖಿಲ್​ಗೆ ಕೈಕೊಟ್ಟು ನಿಖಿಲ್ ಕೈಹಿಡಿದ ರಾಮ್ ಚರಣ್, ಅಕ್ಕಿನೇನಿ ಅಭಿಮಾನಿಗಳ ವಿರೋಧ

ರಾಮ್ ಚರಣ್ ಹಾಗೂ ಉಪಾಸನಾ 2011 ರ ಜೂನ್ 14 ರಂದು ವಿವಾಹವಾಗಿದ್ದರು. ಹಲವು ವರ್ಷಗಳಿಂದಲೂ ಈ ಜೋಡಿ ಮಗುವನ್ನು ಹೊಂದಿರಲಿಲ್ಲ. ಈ ಬಗ್ಗೆ ಈ ಹಿಂದೆಯೂ ಮಾತನಾಡಿದ್ದ ಉಪಾಸನಾ, ಉದ್ದೇಶಪೂರ್ವಕವಾಗಿ ನಾವು ಈ ನಿರ್ಣಯ ಮಾಡಿರುವುದಾಗಿ ಹೇಳಿದ್ದರು. ಹತ್ತು ವರ್ಷಗಳ ಬಳಿಕ ಮನಸ್ಸು ಬದಲಿಸಿದ ಈ ಜೋಡಿ ಇದೀಗ ಪೋಷಕರಾಗಿದ್ದಾರೆ.

ಉಪಾಸನಾಗೆ ಪ್ರಸವ ಮಾಡಿಸಿದ ಅಪೋಲೊ ಆಸ್ಪತ್ರೆಯ ವೈದ್ಯೆ ಉಮಾ ಮಾತನಾಡಿ, ಉಪಾಸನಾ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದು ಇಂದೇ ಅವರಿಬ್ಬರೂ ಮನೆಗೆ ತೆರಳಲಿದ್ದಾರೆ. ಗರ್ಭಿಣಿಯಾಗಿದ್ದಾಗ ಉಪಾಸನಾ ಫಿಟ್​ನೆಸ್ ಹಾಗೂ ನ್ಯೂಟ್ರೀಷನ್ ಬಗ್ಗೆ ವಿಶೇಷ ಕಾಳಜಿವಹಿಸಿದ್ದರಾದ್ದರಿಂದ ಪ್ರಸವ ಸುಲಭವಾಯಿತು ಹಾಗೂ ಮಗು ಸಹ ಹೆಚ್ಚು ಆರೋಗ್ಯದಿಂದಿದೆ ಎಂದಿದ್ದಾರೆ. ಪೋಷಕರಾದ ರಾಮ್ ಚರಣ್-ಉಪಾಸನಾ ಅವರಿಗೆ ತೆಲುಗು ಚಿತ್ರರಂಗದ ಹಲವು ನಟ-ನಟಿಯರು ಮಾತ್ರವೇ ಅಲ್ಲದೆ ವಿವಿಧ ಚಿತ್ರರಂಗದ ಗಣ್ಯರು ಸಹ ಶುಭಾಶಯಗಳನ್ನು ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:50 pm, Tue, 20 June 23