‘ದೂರದರ್ಶನ’ದಲ್ಲಿ ಪ್ರಸಾರವಾದ ‘ರಾಮಾಯಣ’ ಧಾರಾವಾಹಿಯ (Ramayan Serial) ನಟ ಅರುಣ್ ಗೋವಿಲ್ ಅವರಿಗೆ ಭಾರತೀಯ ಜನತಾ ಪಾರ್ಟಿಯಿಂದ ಟಿಕೆಟ್ ನೀಡಲಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರು ಉತ್ತರ ಪ್ರದೇಶದ ಮೀರತ್ (Meerut) ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇಂದು (ಮಾರ್ಚ್ 24) ಬಿಜೆಪಿ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ ಆಗಿದ್ದು 111 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ನಟಿ ಕಂಗನಾ ರಣಾವತ್ ಅವರಿಗೂ ಟಿಕೆಟ್ ನೀಡಲಾಗಿದೆ. ಕಂಗನಾ ಅವರು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಅರುಣ್ ಗೋವಿಲ್ (Arun Govil) ಅವರಿಗೆ ಟಿಕೆಟ್ ಸಿಕ್ಕಿರುವುದು ಅವರ ಅಭಿಮಾನಿಗಳು ಸಂತಸ ತಂದಿದೆ.
ಇದೇ ಮೊದಲ ಬಾರಿಗೆ ಅರುಣ್ ಗೋವಿಲ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ಅವರು ಮೂಲತಃ ಉತ್ತರ ಪ್ರದೇಶದ ಮೀರತ್ನವರು. ರಮಾನಂದ್ ಸಾಗರ್ ನಿರ್ದೇಶನದ ‘ರಾಮಾಯಣ’ ಧಾರಾವಾಹಿಯಲ್ಲಿ ರಾಮನ ಪಾತ್ರ ಮಾಡುವ ಮೂಲಕ ದೇಶಾದ್ಯಂತ ಅವರು ಮನೆಮಾತಾದರು.
ನಟಿ ಕಂಗನಾ ರಣಾವತ್ಗೆ ಬಿಜೆಪಿ ಟಿಕೆಟ್; ಮಂಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ
1987-88ರಲ್ಲಿ ‘ರಾಮಾಯಣ’ ಧಾರಾವಾಹಿ ಪ್ರಸಾರ ಆಗಿತ್ತು. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಮರು ಪ್ರಸಾರ ಆಗಿ ಮತ್ತೊಮ್ಮೆ ಜನಮೆಚ್ಚುಗೆ ಗಳಿಸಿತ್ತು. ಅರುಣ್ ಗೋವಿಲ್ ಅವರು ಮಾಡಿದ ರಾಮನ ಪಾತ್ರವನ್ನು ಜನರು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಅವರಿಗೆ ಎಷ್ಟರಮಟ್ಟಿಗೆ ಯಶಸ್ಸು ಸಿಗಲಿ ಎಂಬುದನ್ನು ಕಾದು ನೋಡಬೇಕು. ಅರುಣ್ ಗೋವಿಲ್ ಅವರಿಗೆ ಈಗ 72 ವರ್ಷ ವಯಸ್ಸು.
50ಕ್ಕೂ ಅಧಿಕ ಸಿನಿಮಾಗಳಲ್ಲಿ ಅರುಣ್ ಗೋವಿಲ್ ನಟಿಸಿದ್ದಾರೆ. ‘ಪಹೇಲಿ’, ‘ಸಸುರಾಲ್’, ‘ಹಿಮ್ಮತ್ವಾಲಾ’, ‘ಕಾನೂನ್’, ‘ಓಎಂಜಿ 2’ ಮುಂತಾದ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ‘ಆರ್ಟಿಕಲ್ 370’ ಸಿನಿಮಾದಲ್ಲಿ ಅವರು ನರೇಂದ್ರ ಮೋದಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆ ಚಿತ್ರವು ಭಾರತದ ಬಾಕ್ಸ್ ಆಫೀಸ್ನಲ್ಲಿ 78 ಕೋಟಿ ರೂಪಾಯಿ ಗಳಿಸಿದೆ. ಈ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಅರುಣ್ ಗೋವಿಲ್ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಟಿಕೆಟ್ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:08 pm, Sun, 24 March 24