ರಜನೀಕಾಂತ್ (Rajinikanth) ನಟನೆಯ ‘ಜೈಲರ್‘ (Jailer) ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ಬಿಡುಗಡೆ ಆದ ಕೆಲವೇ ದಿನಗಳಲ್ಲಿ 650 ಕೋಟಿಗೂ ಹೆಚ್ಚು ಹಣ ಗಳಿಸಿದೆ. ತಮಿಳಿನ ಇತ್ತೀಚೆಗಿನ ಬಾಕ್ಸ್ ಆಫೀಸ್ ದಾಖಲೆಗಳನ್ನು ಚಿಂದಿ ಉಡಾಯಿಸಿರುವ ರಜನೀಕಾಂತ್, ತಾವೇ ಕಾಲಿವುಡ್ ಬಾಕ್ಸ್ ಆಫೀಸ್ ದೊರೆ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ. ‘ಜೈಲರ್’ ಸಿನಿಮಾದ ಅಬ್ಬರ ಇನ್ನೂ ನಡೆಯುತ್ತಿರುವಾಗಲೇ ರಜನೀಕಾಂತ್ರ ಮುಂದಿನ ಸಿನಿಮಾದ ಕಡೆಗೆ ಅಭಿಮಾನಿಗಳ ಗಮನ ಹರಿದಿದೆ. ‘ಜೈಲರ್’ ಮಾದರಿಯಲ್ಲಿಯೇ ರಜನೀ ಅವರ ಮುಂದಿನ ಸಿನಿಮಾದಲ್ಲಿಯೂ ಹಲವು ತಾರಾ ನಟರಿರಲಿದ್ದಾರೆ ಆದರೆ ಈ ಬಾರಿ ತುಸು ಯುವ ನಟರಿಗೆ ಮಣೆ ಹಾಕಲಾಗಿದೆ.
‘ಜೈಲರ್’ ಸಿನಿಮಾದಲ್ಲಿ ರಜನೀಕಾಂತ್ ಜೊತೆಗೆ ಶಿವರಾಜ್ ಕುಮಾರ್, ಮಲಯಾಳಂನ ಸ್ಟಾರ್ ನಟ ಮೋಹನ್ಲಾಲ್, ಹಿಂದಿಯ ಸ್ಟಾರ್ ನಟ ಜಾಕಿ ಶ್ರಾಫ್, ಸುನಿಲ್, ಚಿರಂಜೀವಿ ಸಹೋದರ ನಾಗೇಂದ್ರ ಬಾಬು ಅವರುಗಳು ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಅತಿಥಿ ಪಾತ್ರಗಳ ಎಂಟ್ರಿ ಸಖತ್ ಕ್ಲಿಕ್ ಆಗಿತ್ತು. ಇದೀಗ ರಜನೀಕಾಂತ್ರ 170ನೇ ಸಿನಿಮಾಕ್ಕೂ ಇದೇ ತಂತ್ರದ ಮೊರೆ ಹೋಗಲಿದ್ದು, ಆದರೆ ಈ ಬಾರಿ ತುಸು ಯುವ ನಟರಿಗೆ ಅವಕಾಶ ನೀಡಲಾಗಿದೆ.
ರಜನೀಕಾಂತ್ರ 170ನೇ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ನಟಿಸುವುದು ಖಾತ್ರಿ ಆಗಿತ್ತು. ಆ ನಂತರ ಸಿನಿಮಾದ ವಿಲನ್ ಆಗಿ ಫಹಾದ್ ಫಾಸಿಲ್ ನಟಿಸಲಿರುವ ಸುದ್ದಿ ಹೊರಬಿದ್ದಿತ್ತು. ಜೊತೆಗೆ ನಟಿ ಮಂಜು ವಾರಿಯರ್ ಸಹ ಸಿನಿಮಾದಲ್ಲಿರಲಿದ್ದಾರೆ ಎನ್ನಲಾಗಿತ್ತು. ಇದೀಗ ಈ ತಾರಾ ನಟರ ಪಟ್ಟಿಗೆ ಹೊಸ ಸೇರ್ಪಡೆ ಪ್ಯಾನ್ ಇಂಡಿಯಾ ನಟ ರಾಣಾ ದಗ್ಗುಬಾಟಿ. ಸಿನಿಮಾದ ಒಂದು ಪ್ರಮುಖ ಪಾತ್ರಕ್ಕೆ ರಾಣಾ ದಗ್ಗುಬಾಟಿಯನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ. ಭಾರಿ ಬಜೆಟ್ನಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಅದೇ ಕಾರಣಕ್ಕೆ ಬೇರೆ ಬೇರೆ ಚಿತ್ರರಂಗಗಳಿಂದ ಹೆಸರಾಂತ ನಟರನ್ನು ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಕನ್ನಡದ ನಟರೊಬ್ಬರನ್ನು ಸಹ ಈ ಸಿನಿಮಾಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ:25 ವರ್ಷದ ಹಿಂದೆ ಒಂದೇ ರಾತ್ರಿ 1.30 ಕೋಟಿ ಹಂಚಿದ್ದ ರಜನೀಕಾಂತ್
ರಜನೀಕಾಂತ್ರ 170ನೇ ಸಿನಿಮಾವನ್ನು ಟಿಜೆ ಜ್ಞಾನವೇಲು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಸೂರ್ಯ ನಟಿಸಿದ್ದ ‘ಜೈ ಭೀಮ್’ ಸಿನಿಮಾವನ್ನು ಜ್ಞಾನವೇಲು ನಿರ್ದೇಶಿಸಿದ್ದರು. ಈಗ ರಜನೀಕಾಂತ್ರ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಲೈಕಾ ನಿರ್ಮಾಣ ಮಾಡುತ್ತಿದ್ದು, ಇದೇ ತಿಂಗಳಾಂತ್ಯಕ್ಕೆ ಚಿತ್ರೀಕರಣ ಪ್ರಾರಂಭವಾಗಲಿದೆ. ಸಿನಿಮಾದ ಇನ್ನಿತರೆ ತಂತ್ರಜ್ಞರು, ನಟ-ನಟಿಯರ ಆಯ್ಕೆ ಇನ್ನಷ್ಟೆ ನಡೆಯಬೇಕಿದೆ. ಇನ್ನುಳಿದಂತೆ ರಜನೀಕಾಂತ್ ಪುತ್ರಿ ‘ಲಾಲ್ ಸಲಾಂ’ ಹೆಸರಿನ ಸಿನಿಮಾ ನಿರ್ದೇಶಿಸುತ್ತಿದ್ದು, ಆ ಸಿನಿಮಾದಲ್ಲಿಯೂ ರಜನೀಕಾಂತ್ ಸಣ್ಣ ಪಾತ್ರವೊಂದರಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ