ರಶ್ಮಿಕಾ ಡೀಪ್​ಫೇಕ್​ ವಿಡಿಯೋ: ಮುಖ್ಯ ಆರೋಪಿ ಬಂಧನ; ಕಿಡಿಗೇಡಿಯ ಹಿನ್ನೆಲೆ ಏನು ಗೊತ್ತಾ?

|

Updated on: Jan 20, 2024 | 7:06 PM

ರಶ್ಮಿಕಾ ಮಂದಣ್ಣ ಅವರ ಫ್ಯಾನ್​ ಪೇಜ್​ನಲ್ಲಿ ಫಾಲೋವರ್ಸ್​ ಸಂಖ್ಯೆ ಹೆಚ್ಚು ಮಾಡಲು ಈ ರೀತಿ ಡೀಪ್​ಫೇಕ್​ ವಿಡಿಯೋ ಮಾಡಲಾಗಿದೆ ಎಂದು ಪ್ರಮುಖ ಆರೋಪಿ ಏಮಾನಿ ನವೀನ್​ ಒಪ್ಪಿಕೊಂಡಿದ್ದಾನೆ. ವಿಡಿಯೋ ವೈರಲ್​ ಆದ ಬಳಿಕ ಫಾಲೋವರ್ಸ್​ ಸಂಖ್ಯೆ ಲಕ್ಷ ಮೀರಿತ್ತು. ಆರೋಪಿಯ ಹಿನ್ನೆಲೆ ಬಗ್ಗೆ ಪೊಲೀಸರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ರಶ್ಮಿಕಾ ಡೀಪ್​ಫೇಕ್​ ವಿಡಿಯೋ: ಮುಖ್ಯ ಆರೋಪಿ ಬಂಧನ; ಕಿಡಿಗೇಡಿಯ ಹಿನ್ನೆಲೆ ಏನು ಗೊತ್ತಾ?
ರಶ್ಮಿಕಾ ಡೀಪ್​ಫೇಕ್​: ಮುಖ್ಯ ಆರೋಪಿ ಬಂಧನ
Follow us on

ನಟಿ ರಶ್ಮಿಕಾ ಮಂದಣ್ಣ ಅವರಿಗೆ ಡೀಪ್​ಫೇಕ್​ (Deepfake) ಕಾಟ ಎದುರಾಗಿತ್ತು. ಬೇರೆ ಯುವತಿಯ ಹಾಟ್​ ವಿಡಿಯೋಗೆ ರಶ್ಮಿಕಾ ಮಂದಣ್ಣ (Rashmika Mandanna) ಅವರ ಮುಖವನ್ನು ಎಡಿಟ್​ ಮಾಡಿ ಹರಿಬಿಡಲಾಗಿತ್ತು. ಅದನ್ನು ನೋಡಿದ ಬಹುತೇಕರು ನಿಜ ಎಂದು ನಂಬಿದ್ದರು. ಇಂಥ ಬಟ್ಟೆ ಧರಿಸಿದ್ದಕ್ಕೆ ರಶ್ಮಿಕಾಗೆ ಅನೇಕರು ಪಾಠ ಮಾಡಿದ್ದರು. ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​ ಜೋರಾಗುತ್ತಿದ್ದಂತೆಯೇ ಅಸಲಿ ವಿಚಾರ ಬಯಲಾಯಿತು. ಅದು ರಶ್ಮಿಕಾ ಅವರ ನಿಜವಾದ ವಿಡಿಯೋ ಅಲ್ಲ. ಬದಲಿಗೆ, ಡೀಪ್​ಫೇಕ್​ ವಿಡಿಯೋ (Rashmika Mandanna Deepfake Video) ಎಂಬುದು ತಿಳಿದುಬಂತು. ಈಗ ಆ ವಿಡಿಯೋ ಮಾಡಿದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ಡೀಪ್​ಫೇಕ್​ ವಿಡಿಯೋ ಮಾಡಿದ ಪ್ರಮುಖ ಆರೋಪಿಯು ದೆಹಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತನನ್ನು ಆಂಧ್ರದ ಗುಂಟೂರಿನ ಏಮಾನಿ ನವೀನ್​ ಎಂದು ಗುರುತಿಸಲಾಗಿದೆ. 23 ವರ್ಷದ ಈ ವ್ಯಕ್ತಿ ಈಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಅಚ್ಚರಿ ಏನೆಂದರೆ, ಇವನು ರಶ್ಮಿಕಾ ಮಂದಣ್ಣ ಅವರ ಫ್ಯಾನ್​ ಪೇಜ್​ ನೋಡಿಕೊಳ್ಳುತ್ತಿದ್ದ! ಆತನಿಂದಲೇ ಈ ರೀತಿ ಕೃತ್ಯ ಆಗಿರುವುದು ಶಾಕಿಂಗ್​ ಸಂಗತಿ.

ಇದನ್ನೂ ಓದಿ: Deepfake: ರಶ್ಮಿಕಾ ಮಂದಣ್ಣ, ಕಾಜೋಲ್​ ಬಳಿಕ ನಟಿ ಆಲಿಯಾ ಭಟ್​ಗೆ ಶುರುವಾಯ್ತು ಡೀಪ್​ಫೇಕ್​ ಕಾಟ

ಪೊಲೀಸರ ಹೇಳಿಕೆ ಪ್ರಕಾರ, ಬಿ.ಟೆಕ್​ ಓದುತ್ತಿರುವ ಏಮಾನಿ ನವೀನ್​ 2019ರಲ್ಲಿ ಗೂಗಲ್​ ಗರಾಜ್​ ಮೂಲಕ ಡಿಜಿಟಲ್​ ಮಾರ್ಕೆಟಿಂಗ್​ ಕೋರ್ಸ್​ ಮಾಡಿದ್ದಾನೆ. ದಕ್ಷಿಣ ಭಾರತದ ಮೂವರು ಸೆಲೆಬ್ರಿಟಿಗಳ ಫ್ಯಾನ್ಸ್​ ಪೇಜ್​ಗಳನ್ನು ಈತ ನಡೆಸುತ್ತಿದ್ದ. ರಶ್ಮಿಕಾ ಮಂದಣ್ಣ ಅವರ ಫ್ಯಾನ್​ ಪೇಜ್​ನಲ್ಲಿ ಫಾಲೋವರ್ಸ್​ ಸಂಖ್ಯೆಯನ್ನು ಹೆಚ್ಚು ಮಾಡಲು ಈ ರೀತಿ ಡೀಪ್​ಫೇಕ್​ ವಿಡಿಯೋ ಮಾಡಲಾಗಿದೆ ಎಂದು ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಡಿಯೋ ವೈರಲ್​ ಆದ ಬಳಿಕ ಫಾಲೋವರ್ಸ್​ ಸಂಖ್ಯೆ ಲಕ್ಷ ಮೀರಿತ್ತು.

ಪ್ರಮುಖ ಆರೋಪಿ ಏಮಾನಿ ನವೀನ್​ ಬಳಿ ಇದ್ದ ಮೊಬೈಲ್​ ಫೋನ್​, ಲ್ಯಾಪ್​ ಟಾಪ್​ ವಶಕ್ಕೆ ಪಡೆಯಲಾಗಿದೆ. ಅದರಲ್ಲಿ ಇರುವ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ. ಆತನೇ ಡೀಪ್​ಫೇಕ್​ ಮಾಡಿದ್ದಾನೆ ಎಂಬುದಕ್ಕೆ ಪೊಲೀಸರಿಗೆ ಸಾಕ್ಷಿಗಳು ದೊರೆತಿವೆ. ಈ ಕುರಿತು ದೆಹಲಿ ಪೊಲೀಸರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಡೀಪ್​ಫೇಕ್​ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ರಶ್ಮಿಕಾ ಮಂದಣ್ಣ ಅವರ ಡೀಪ್​ಫೇಕ್​ ವಿಡಿಯೋ ವೈರಲ್​ ಆದ 2 ತಿಂಗಳ ಬಳಿಕ ಪ್ರಮುಖ ಆರೋಪಿಯ ಬಂಧನ ಆಗಿದೆ. ಇನ್ನೂ ಕೆಲವರ ಹೆಸರು ಹೊರಬರುವ ಸಾಧ್ಯತೆ ಇದೆ. ಆಲಿಯಾ ಭಟ್​, ಕಾಜೋಲ್​ ಮುಂತಾದ ಸೆಲೆಬ್ರಿಟಿಗಳ ಡೀಪ್​ಫೇಕ್​ ವಿಡಿಯೋಗಳು ಕೂಡ ವೈರಲ್​ ಆಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ