ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ದೇಶಾದ್ಯಂತ ಅವರ ಖ್ಯಾತಿ ಹಬ್ಬಿದೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಅವರು ನೀಡಿದ್ದಾರೆ. ದಕ್ಷಿಣ ಭಾರತದ ಅನೇಕ ಸ್ಟಾರ್ ಹೀರೋಗಳ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರ ಕೈಯಲ್ಲಿ ‘ಪುಷ್ಪ 2’ (Pushpa 2), ‘ಅನಿಮಲ್’ ಮುಂತಾದ ಹೈವೋಲ್ಟೇಜ್ ಸಿನಿಮಾಗಳಿವೆ. ಇಷ್ಟೆಲ್ಲ ಸಾಧನೆ ಮಾಡಿದರೂ ಕೂಡ ಅವರ ತಂದೆ-ತಾಯಿಗೆ ಮಗಳ ನಟನೆ ಬಗ್ಗೆ ಹೆಮ್ಮೆ ಇಲ್ಲವಂತೆ. ಈ ವಿಚಾರದ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ. ‘ಬಜಾರ್ ಇಂಡಿಯಾ’ ನಡೆಸಿದ ಸಂದರ್ಶನದಲ್ಲಿ ಅವರು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ ಹಾಗೂ ತಂದೆ ಮದನ್ ಮಂದಣ್ಣ. ಇವರದ್ದು ಸಿನಿಮಾ ಹಿನ್ನೆಲೆಯ ಕುಟುಂಬ ಅಲ್ಲ. ‘ನಿಮ್ಮ ನಟನೆ ಬಗ್ಗೆ ತಂದೆ-ತಾಯಿಗೆ ತುಂಬ ಹೆಮ್ಮೆ ಇದೆಯಾ?’ ಎಂದು ಕೇಳಿದ ಪ್ರಶ್ನೆಗೆ ರಶ್ಮಿಕಾ ಮಂದಣ್ಣ ಉತ್ತರ ನೀಡಿದ್ದಾರೆ. ‘ಹೆಮ್ಮೆ ಇಲ್ಲ. ಯಾಕೆಂದರೆ ಅವರು ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಮಗಳು ಏನು ಮಾಡುತ್ತಿದ್ದಾಳೆ ಎಂಬುದು ಅವರಿಗೆ ಅರ್ಥ ಆಗುವುದಿಲ್ಲ. ಆದರೆ ನಾನು ಪ್ರಶಸ್ತಿ ಗೆದ್ದಾಗ ಅವರಿಗೆ ತುಂಬ ಹೆಮ್ಮೆ ಆಗುತ್ತದೆ. ಅವರು ನನ್ನ ಬಗ್ಗೆ ನಿಜಕ್ಕೂ ಹೆಮ್ಮೆಪಡಬೇಕು ಎಂದರೆ ನಾನು ಇನ್ನೂ ಸಾಧನೆ ಮಾಡಬೇಕು’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಇದನ್ನೂ ಓದಿ: IPL 2023: 4 ವರ್ಷಗಳ ಬಳಿಕ ಐಪಿಎಲ್ನಲ್ಲಿ ಉದ್ಘಾಟನಾ ಸಮಾರಂಭ: ನೃತ್ಯ ಮಾಡಲಿದ್ದಾರೆ ರಶ್ಮಿಕಾ ಮಂದಣ್ಣ?
‘ಯಾವುದೇ ಕೊರತೆ ಆಗದ ರೀತಿಯಲ್ಲಿ ನನ್ನ ತಂದೆ-ತಾಯಿ ನನ್ನನ್ನು ಬೆಳೆಸಿದರು. ಕೇಳಿದ್ದೆಲ್ಲವನ್ನೂ ಅವರು ನನಗೆ ನೀಡಿದರು. ಅದಕ್ಕೆ ನಾನು ಚಿರಋಣಿ. ಈಗ ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಕರ್ತವ್ಯ ನನ್ನದು’ ಎಂದಿದ್ದಾರೆ ರಶ್ಮಿಕಾ ಮಂದಣ್ಣ.
‘ನನಗೆ ಚಿಕ್ಕ ವಿಷಯಗಳು ಕೂಡ ಮುಖ್ಯವಾಗುತ್ತವೆ. ಬೆಳಗ್ಗೆ ಎದ್ದ ಬಳಿಕ ನಾನು ಸಾಕು ಪ್ರಾಣಿಗಳ ಜೊತೆ ಹಾಗೂ ಸ್ನೇಹಿತರ ಜೊತೆ ಸಮಯ ಕಳೆಯುತ್ತೇನೆ. ಅದರಿಂದ ನನಗೆ ಖುಷಿ ಸಿಗುತ್ತದೆ. ಮಾತುಗಳಿಗೆ ತುಂಬ ಶಕ್ತಿ ಇದೆ. ಅದು ಒಬ್ಬರಿಗೆ ಪೂರಕವೂ ಆಗಬಹುದು ಅಥವಾ ಮಾರಕವೂ ಆಗಬಹುದು. ಅದಕ್ಕಾಗಿ.. ಕೆಲವರು ಏನಾದರೂ ಹೇಳಿದಾಗ ನನ್ನ ಮೇಲೆ ಪರಿಣಾಮ ಬೀರುತ್ತದೆ. ಡೈರಿಯಲ್ಲಿ ನಾನು ಎಲ್ಲ ಚಿಕ್ಕ ಚಿಕ್ಕ ವಿಷಯಗಳನ್ನೂ ಬರೆದಿಡುತ್ತೇನೆ’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ‘ಸಾಮಿ ಸಾಮಿ..’ ಸ್ಟೆಪ್ ಮಾಡದಿರಲು ನಿರ್ಧರಿಸಿದ ರಶ್ಮಿಕಾ ಮಂದಣ್ಣ; ಕಾರಣ ತಿಳಿಸಿದ ನಟಿ
‘ಮನೆಗೆ ಹೋದ ಬಳಿಕ ಗೌರವದಿಂದ ಎಲ್ಲರ ಕಾಲಿಗೂ ನಮಸ್ಕರಿಸುವ ಅಭ್ಯಾಸ ನನಗಿದೆ. ಮನೆ ಕೆಲಸದವರ ಕಾಲಿಗೂ ನಮಸ್ಕಾರ ಮಾಡುತ್ತೇನೆ. ಯಾಕೆಂದರೆ ನಾನು ಬೇಧ-ಭಾವ ಮಾಡುವುದಿಲ್ಲ. ನಾನು ಎಲ್ಲರನ್ನೂ ಗೌರವಿಸುತ್ತೇನೆ. ಅದು ನನ್ನ ವ್ಯಕ್ತಿತ್ವ’ ಎಂದಿದ್ದಾರೆ ರಶ್ಮಿಕಾ ಮಂದಣ್ಣ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:18 am, Thu, 23 March 23