
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಬಾಲಿವುಡ್ನಲ್ಲಿ (Bollywood) ಬ್ಯುಸಿಯಾಗಿದ್ದರೂ ಸಹ ಆಗೊಂದು ಈಗೊಂದು ದಕ್ಷಿಣದ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ‘ಪುಷ್ಪ 2’ ಸಿನಿಮಾ ಬಳಿಕ ದಕ್ಷಿಣದಲ್ಲಿ ರಶ್ಮಿಕಾ ಮಂದಣ್ಣಗೆ ಯಾವುದೇ ಸಿನಿಮಾ ಇಲ್ಲ ಎನ್ನಲಾಗುತ್ತಿತ್ತು, ಆದರೆ ಹಾಗೇನೂ ಇಲ್ಲ, ಹಿಂದಿ ಸಿನಿಮಾಗಳ ಜೊತೆಗೆ ದಕ್ಷಿಣದಲ್ಲೂ ಸಾಲು-ಸಾಲು ಸಿನಿಮಾಗಳನ್ನು ರಶ್ಮಿಕಾ ಒಪ್ಪಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೆ ತಮಿಳಿನ ನಟ ಧನುಶ್ ಜೊತೆ ರಶ್ಮಿಕಾ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು, ಹೊಸ ಸುದ್ದಿಯೆಂದರೆ ಆ ಸಿನಿಮಾದಲ್ಲಿ ಧನುಶ್ ಜೊತೆಗೆ ಮತ್ತೊಬ್ಬ ಸೂಪರ್ ಸ್ಟಾರ್ ಸಹ ಇರಲಿದ್ದಾರೆ.
ಧನುಶ್, ಇದೇ ಮೊದಲ ಬಾರಿಗೆ ಶೇಖರ್ ಕಮ್ಮುಲ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ರಾಜಕೀಯ ಕಥಾವಸ್ತುವನ್ನು ಒಳಗೊಂಡಿದ್ದು, ‘ಲೀಡರ್’ ಬಳಿಕ ಶೇಖರ್ ಕಮ್ಮುಲ ನಿರ್ದೇಶಿಸುತ್ತಿರುವ ಎರಡನೇ ರಾಜಕೀಯ ಕಥಾವಸ್ತುವುಳ್ಳ ಸಿನಿಮಾ ಇದಾಗಿರಲಿದೆ. ಈ ಸಿನಿಮಾ ತಮಿಳು ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಏಕಕಾಲಕ್ಕ ನಿರ್ಮಾಣಗೊಳ್ಳುತ್ತಿದ್ದು, ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ ಈ ಸಿನಿಮಾಕ್ಕೆ ನಟ ನಾಗಾರ್ಜುನ ಸಹ ಎಂಟ್ರಿ ಕೊಟ್ಟಿದ್ದಾರೆ.
ನಾಗಾರ್ಜುನ ಹುಟ್ಟುಹಬ್ಬ ದಿನವಾದ ಇಂದು (ಆಗಸ್ಟ್ 29) ಈ ವಿಷಯವನ್ನು ಚಿತ್ರತಂಡ ಹಂಚಿಕೊಂಡಿದ್ದು, ಧನುಶ್ ಸಿನಿಮಾದಲ್ಲಿ ನಾಗಾರ್ಜುನ ನಟಿಸಲಿದ್ದಾರೆ ಎಂಬುದನ್ನು ಟ್ವೀಟ್ ಮೂಲಕ ಬಹಿರಂಗಗೊಳಿಸಿದೆ. ಅಲ್ಲಿಗೆ ನಟಿ ರಶ್ಮಿಕಾ ಮಂದಣ್ಣಗೆ ಒಂದೇ ಸಿನಿಮಾದಲ್ಲಿ ಇಬ್ಬರು ಸೂಪರ್ ಸ್ಟಾರ್ ಗಳೊಟ್ಟಿಗೆ ನಟಿಸುವ ಅವಕಾಶ ಲಭಿಸಿದೆ. ಧನುಶ್ ಹಾಗೂ ನಾಗಾರ್ಜುನ ಇಬ್ಬರೊಟ್ಟಿಗೂ ರಶ್ಮಿಕಾಗೆ ಇದು ಮೊದಲ ಸಿನಿಮಾ.
ಇದನ್ನೂ ಓದಿ:Captain Miller: ಬಂದೂಕು ಹಿಡಿದು ಧನುಶ್ ಜೊತೆ ರಣರಂಗದಲ್ಲಿ ನಿಂತ ಶಿವರಾಜ್ ಕುಮಾರ್
ಇನ್ನು ನಟಿ ರಶ್ಮಿಕಾ ಪ್ರಸ್ತುತ ‘ಪುಷ್ಪ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ತಮಿಳಿನ ಸ್ಟಾರ್ ನಟರೊಬ್ಬರೊಟ್ಟಿಗೆ ಸಹ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಇನ್ನು ಬಾಲಿವುಡ್ನಲ್ಲಿ ಇತ್ತೀಚೆಗಷ್ಟೆ ‘ಅನಿಮಲ್’ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ರಣ್ಬೀರ್ ಕಪೂರ್ ನಾಯಕ. ಟೈಗರ್ ಶ್ರಾಫ್ ಜೊತೆಗೆ ಹೊಸ ಸಿನಿಮಾದಲ್ಲಿ ರಶ್ಮಿಕಾ ನಟಿಸಲಿದ್ದಾರೆ. ಆ ಸಿನಿಮಾದ ಘೋಷಣೆ ಶೀಘ್ರವೇ ಆಗಲಿದೆ.
ಇನ್ನು ನಟ ಧನುಶ್, ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸಹ ನಟಿಸಿದ್ದಾರೆ. ಬಾಲಿವುಡ್ನ ‘ತೇರೆ ಇಷ್ಕ್ ಮೇ’ ಸಿನಿಮಾದಲ್ಲಿ ನಟಿಸಲಿದ್ದಾರೆ. ‘ರಾಯನ್’ ಹೆಸರಿನ ಸಿನಿಮಾವನ್ನು ಅವರೇ ನಿರ್ದೇಶನ ಮಾಡಲಿದ್ದಾರೆ. ತಮ್ಮ ಸಹೋದರ ನಿರ್ದೇಶಿಸಲಿರುವ ‘ಆಯರತ್ತಿಲ್ ಒರುವನ್ 2’ ಸಿನಿಮಾದಲ್ಲಿ ನಟಿಸಲಿದ್ದಾರೆ. ತಮಿಳು, ಹಿಂದಿ ಮಾತ್ರವೇ ಅಲ್ಲದೆ ಆಗಾಗ್ಗೆ ಹಾಲಿವುಡ್ ಸಿನಿಮಾಗಳಲ್ಲಿಯೂ ಧನುಶ್ ನಟಿಸುತ್ತಾ ಬಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ