ಜಾಗತಿಕ ಅನಿಮೆ ಅವಾರ್ಡ್ಸ್ 2026: ಟೋಕಿಯೋದಲ್ಲಿ ಮಿಂಚಲಿರುವ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಅವರಿಗೆ ಜಪಾನ್​ನಿಂದ ಕರೆ ಬಂದಿದೆ. ಅಲ್ಲಿನ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ರಶ್ಮಿಕಾ ಭಾಗಿಯಾಗಲಿದ್ದಾರೆ. ಅವರಿಗೆ ಜಾಗತಿಕ ಮಟ್ಟದಲ್ಲಿ ಇರುವ ಜನಪ್ರಿಯತೆಗೆ ಈ ಆಹ್ವಾನವೇ ಸಾಕ್ಷಿ ಆಗಿದೆ. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ರಶ್ಮಿಕಾ ಅವರು ವಿದೇಶದಲ್ಲೂ ಖ್ಯಾತಿ ಹೊಂದಿದ್ದಾರೆ.

ಜಾಗತಿಕ ಅನಿಮೆ ಅವಾರ್ಡ್ಸ್ 2026: ಟೋಕಿಯೋದಲ್ಲಿ ಮಿಂಚಲಿರುವ ರಶ್ಮಿಕಾ ಮಂದಣ್ಣ
Rashmika Mandanna

Updated on: Apr 28, 2026 | 3:48 PM

ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಅವರಿಗೆ ಅಭಿಮಾನಿಗಳು ಇದ್ದಾರೆ. ಅದಕ್ಕೆ ಹಲವು ಉದಾಹರಣೆಗಳು ಸಿಗುತ್ತಿವೆ. ಜಪಾನ್‌ನ ಟೋಕಿಯೋದಲ್ಲಿ ಮೇ 23ರಂದು ನಡೆಯಲಿರುವ ಪ್ರತಿಷ್ಠಿತ 10ನೇ ಗ್ಲೋಬಲ್ ಅನಿಮೆ ಅವಾರ್ಡ್ಸ್ (Global Anime Awards) ಸಮಾರಂಭದಲ್ಲಿ ರಶ್ಮಿಕಾ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದು ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳಿಗೆ ಹೆಮ್ಮ ತಂದಿದೆ.

ರಶ್ಮಿಕಾ ಮಂದಣ್ಣ ಅವರು ಈ ಹಿಂದೆ 2024ರಲ್ಲಿ ಈ ಅನಿಮೆ ಅವಾರ್ಡ್ಸ್‌ನಲ್ಲಿ ಭಾಗವಹಿಸಿದ್ದರು. ಈ ಮೂಲಕ ಈ ಜಾಗತಿಕ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಭಾರತೀಯ ಚಿತ್ರರಂಗದ ಮೊದಲ ನಟಿಯರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈಗ ಎರಡನೇ ಬಾರಿಗೆ ಅವರಿಗೆ ಈ ಆಹ್ವಾನ ಬಂದಿರುವುದು ಅವರ ಜಾಗತಿಕ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಈ ಬಾರಿ ಪ್ರಶಸ್ತಿ ಪ್ರದಾನ ಮಾಡುವವರ ಪಟ್ಟಿಯಲ್ಲಿ ರಶ್ಮಿಕಾ ಅವರ ಜೊತೆಗೆ ಖ್ಯಾತ ಗಾಯಕ ದಿ ವೀಕೆಂಡ್ ಸೇರಿದಂತೆ ವಿಶ್ವದ ವಿವಿಧ ದೇಶಗಳ ಪ್ರಸಿದ್ಧ ತಾರೆಯರು ಇರಲಿದ್ದಾರೆ. ಇದು ಸಿನಿಮಾ, ಸಂಗೀತ ಮತ್ತು ಅನಿಮೇಷನ್ ಲೋಕದ ಸಂಗಮಕ್ಕೆ ಸಾಕ್ಷಿಯಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಇರುವ ಹಲವು ಗಣ್ಯರ ಜೊತೆಗೆ ರಶ್ಮಿಕಾ ಮಂದಣ್ಣ ಅವರಿಗೂ ಆಹ್ವಾನ ಬಂದಿದೆ.

ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗಗಳಲ್ಲಿ ಸಕ್ರಿಯವಾಗಿರುವ ರಶ್ಮಿಕಾ ಅವರಿಗೆ ಮೊದಲಿನಿಂದಲೂ ‘ಅನಿಮೆ’ ಎಂದರೆ ಪಂಚಪ್ರಾಣ. ಅನಿಮೆ ಕಥೆಗಳು ಮತ್ತು ಅಲ್ಲಿನ ಪಾತ್ರಗಳ ಬಗ್ಗೆ ಅವರು ಹಲವು ಬಾರಿ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮಗಿಷ್ಟವಾದ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ಸಂಭ್ರಮ ತಂದಿದೆ.

ಇದನ್ನೂ ಓದಿ: ಕೊಡವ ಭಾಷೆಯಲ್ಲಿ ವಿಜಯ್ ದೇವರಕೊಂಡ ಬಗ್ಗೆ ಮಾತಾಡಿದ ರಶ್ಮಿಕಾ ಮಂದಣ್ಣ

ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಅವರ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ‘ಮೈಸಾ’, ‘ರಣಬಾಲಿ’ ಮುಂತಾದ ಸಿನಿಮಾಗಳು ಈಗ ಅವರ ಕೈಯಲ್ಲಿವೆ. ಈ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಅವರ ಲುಕ್ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us