AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಸೆಟ್‌ನಲ್ಲಿ ಗರ್ಭಿಣಿ ಕಿಯಾರಾಗೆ ಬಾಡಿಗಾರ್ಡ್ ಆಗಿ ನಿಂತಿದ್ದ ಯಶ್, ಗೀತು

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಗರ್ಭಿಣಿ ಆಗಿದ್ದಾಗಲೂ ಕೂಡ ಅವರು ಕಷ್ಟದ ದೃಶ್ಯಗಳಲ್ಲಿ ನಟಿಸಿದ್ದರು. ಆ ಘಟನೆಯನ್ನು ಯಶ್ ಅವರು ಈಗ ನೆನಪು ಮಾಡಿಕೊಂಡಿದ್ದಾರೆ. ಆಡಿಯೋ ಲಾಂಚ್ ಕಾರ್ಯಕ್ರಮದ ವೇದಿಕೆಯಲ್ಲಿ ಯಶ್ ಅವರು ಕಿಯಾರಾ ಬಗ್ಗೆ ಮಾತಾಡಿದರು.

‘ಟಾಕ್ಸಿಕ್’ ಸೆಟ್‌ನಲ್ಲಿ ಗರ್ಭಿಣಿ ಕಿಯಾರಾಗೆ ಬಾಡಿಗಾರ್ಡ್ ಆಗಿ ನಿಂತಿದ್ದ ಯಶ್, ಗೀತು
Kiara Advani, Yash
ಮದನ್​ ಕುಮಾರ್​
|

Updated on: Aug 14, 2026 | 4:01 PM

Share

‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ, ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ (Toxic: A Fairytale for Grown-Ups) ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ, ನಾಯಕಿ ಕಿಯಾರಾ ಅಡ್ವಾಣಿ ಅವರ ವೃತ್ತಿಪರತೆ ಹಾಗೂ ಶ್ರದ್ಧೆಯನ್ನು ನಟ ಯಶ್ (Yash) ಮುಕ್ತಕಂಠದಿಂದ ಹೊಗಳಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಕಿಯಾರಾ ಅಡ್ವಾಣಿ (Kiara Advani) ಗರ್ಭಿಣಿಯಾಗಿದ್ದರು. ಅಂತಹ ಕಷ್ಟದ ಸಂದರ್ಭದಲ್ಲೂ ಅವರು ತೋರಿದ ಬದ್ಧತೆಯ ಬಗ್ಗೆ ಮಾತನಾಡಿದ ಯಶ್, ‘ಶೂಟಿಂಗ್ ಸೆಟ್‌ನಲ್ಲಿ ನಾನು ಮತ್ತು ನಿರ್ದೇಶಕಿ ಗೀತು ಮೋಹನ್‌ದಾಸ್, ಕಿಯಾರಾಗೆ ಬಾಡಿಗಾರ್ಡ್ ಮತ್ತು ಬೌನ್ಸರ್‌ಗಳಂತೆ ಕೆಲಸ ಮಾಡುತ್ತಿದ್ದೆವು’ ಎಂದು ಸ್ವಾರಸ್ಯಕರ ನೆನಪನ್ನು ಹಂಚಿಕೊಂಡಿದ್ದಾರೆ.

ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಯಶ್, ‘ಕಿಯಾರಾ ತುಂಬಾ ವೃತ್ತಿಪರ ನಟಿ. ಈ ಸಿನಿಮಾ ಅತ್ಯಂತ ಶ್ರಮ ಬೇಡುವಂತಹದ್ದಾಗಿತ್ತು. ಮೊದಲ ಬಾರಿ ಅವರೊಂದಿಗೆ ಮಾತನಾಡಿದಾಗ, ‘ಮಳೆ ಸೀಕ್ವೆನ್ಸ್ ಇತ್ಯಾದಿಗಳಲ್ಲಿ ಅಭಿನಯಿಸಿದ್ದೀರಾ?’ ಎಂದು ಕೇಳಿದ್ದೆ. ‘ಇಲ್ಲ’ ಎಂದು ಅವರು ಹೇಳಿದ್ದರು. ಆದರೆ ಅವರು ಗರ್ಭಿಣಿಯಾಗಿದ್ದರೂ ಸಹ ಶೇ.100ರಷ್ಟು ಬದ್ಧತೆಯಿಂದ ಸೆಟ್‌ಗೆ ಬಂದು ಅಭಿನಯಿಸಿದರು. ನಮಗೆ ಅವರ ಆರೋಗ್ಯದ ಬಗ್ಗೆ ಹೆಚ್ಚು ಆತಂಕವಿತ್ತು. ಹೀಗಾಗಿ ಸೆಟ್‌ನಲ್ಲಿ ಅವರ ರಕ್ಷಣೆಗೆ ನಾವೇ ಬಾಡಿಗಾರ್ಡ್‌ಗಳಂತೆ ನಿಂತು ಕಾಳಜಿ ವಹಿಸಿದೆವು. ಥ್ಯಾಂಕ್ ಯೂ ಕಿಯಾರಾ, ಈ ಸಿನಿಮಾ ಅತ್ಯಂತ ವಿಶೇಷವಾದದ್ದು’ ಎಂದಿದ್ದಾರೆ.

ಟ್ರೋಲ್‌ಗಳಿಗೆ ಯಶ್ ಉತ್ತರ:

ಚಿತ್ರದ ‘ತಬಾಹಿ’ ಹಾಡು ಬಿಡುಗಡೆಯಾದಾಗ, ಅದರಲ್ಲಿನ ಕೆಲವು ದೃಶ್ಯಗಳಿಗಾಗಿ ಕಿಯಾರಾ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ಟ್ರೋಲ್ ಹಾಗೂ ಟೀಕೆಗೆ ಒಳಗಾಗಿದ್ದರು. ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿಯೂ ಯಶ್ ಅವರು ಕಿಯಾರಾ ಬೆಂಬಲಕ್ಕೆ ನಿಂತಿದ್ದರು. ‘ಒಬ್ಬ ನಟಿಯಾಗಿ ಅನುಭವಿಸುವ ಸವಾಲುಗಳಿಗೆ ತಲೆಕೆಡಿಸಿಕೊಳ್ಳಬಾರದು. ನಾವು ನಮ್ಮ ಕೆಲಸವನ್ನು ನಂಬಿ ಮುನ್ನಡೆಯಬೇಕು. ಕಾಲಕ್ರಮೇಣ ಜನರು ಅದನ್ನು ಮೆಚ್ಚಿಕೊಳ್ಳುತ್ತಾರೆ’ ಎಂದು ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: ಯಶ್ ಜತೆ ಕ್ಲ್ಯಾಶ್ ತಪ್ಪಿಸಿಕೊಂಡ ಶ್ರದ್ಧಾ ಕಪೂರ್; ‘ಟಾಕ್ಸಿಕ್’ ಎದುರು ಬರಲ್ಲ ‘ಈಠಾ’ ಚಿತ್ರ

ಆಗಸ್ಟ್ 26ಕ್ಕೆ ವಿಶ್ವದಾದ್ಯಂತ ರಿಲೀಸ್:

ಗ್ಯಾಂಗ್‌ಸ್ಟರ್ ಡ್ರಾಮಾ ಹಿನ್ನೆಲೆಯ ‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದು, ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿಯಾರಾ ಅಡ್ವಾಣಿ ಜೊತೆಗೆ ಹುಮಾ ಖುರೇಷಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಹಾಗೂ ನಯನತಾರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತಂದೆ-ಮಗನ ನಡುವಿನ ಸಂಕೀರ್ಣ ಬಾಂಧವ್ಯದ ಕಥಾಹಂದರ ಹೊಂದಿರುವ ಈ ಚಿತ್ರವು ಆಗಸ್ಟ್ 26ರಂದು ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us