
ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ಆದ ಸಿನಿಮಾಗಳು ಒಟಿಟಿಗೆ ಬಂದಾಗ ಟೀಕೆಗೆ ಒಳಗಾಗುವುದು ಚಿತ್ರರಂಗದಲ್ಲಿ ಸಾಮಾನ್ಯ. ಇದೀಗ ಟಾಲಿವುಡ್‌ನ ‘ಇರುಮುಡಿ’ ಚಿತ್ರಕ್ಕೂ ಕೂಡ ಇದೇ ರೀತಿಯ ಪರಿಸ್ಥಿತಿ ಎದುರಾಗಿದೆ. ಈ ಸಿನಿಮಾ ಥಿಯೇಟರ್‌ನಲ್ಲಿ ಭರ್ಜರಿ ಪ್ರದರ್ಶನ ಕಂಡು, 200 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿತ್ತು. ಒಟಿಟಿಯಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಆರಂಭವಾದ ನಂತರ ಕೆಲ ಪ್ರೇಕ್ಷಕರಿಂದ ಭಾರೀ ನೆಗೆಟಿವ್ ಪ್ರತಿಕ್ರಿಯೆ ಪಡೆಯುತ್ತಿದೆ.
‘ಇರುಮುಡಿ’ ನೋಡಿದ ಅನೇಕರು ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಹೇಗೆ ಕಲೆಕ್ಷನ್ ಮಾಡಿತು ಎಂದು ಕೆಲವರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಚಿತ್ರದ ಚಿತ್ರಕಥೆ ಹಾಗೂ ನಿರೂಪಣೆಯ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಪ್ರಸಿದ್ಧ ಬಾಲಿವುಡ್ ವಿಮರ್ಶಕರೊಬ್ಬರು ಈ ಚಿತ್ರವನ್ನು ರವಿತೇಜ ಅವರ ಕೆರಿಯರ್‌ನ ಅತ್ಯಂತ ತರ್ಕಹೀನ ಸಿನಿಮಾ ಎಂದು ಕರೆದಿದ್ದಾರೆ.
ಚಿತ್ರದಲ್ಲಿ ತಂದೆ-ಮಗಳ ಭಾವುಕ ಕಥೆ ಮತ್ತು ಡಾರ್ಕ್ ಕ್ರೈಮ್ ಥ್ರಿಲ್ಲರ್ ಎಳೆಯ ನಡುವೆ ಸರಿಯಾದ ಸಮತೋಲನವಿಲ್ಲ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಭಾವನಾತ್ಮಕ ಸನ್ನಿವೇಶಗಳು ಮತ್ತು ಆಕ್ಷನ್ ಸೀನ್‌ಗಳು ಒಂದಕ್ಕೊಂದು ಸರಿಯಾಗಿ ಹೊಂದಾಣಿಕೆಯಾಗುತ್ತಿಲ್ಲ ಎಂಬ ಅಭಿಪ್ರಾಯ ಕೇಳಿಬಂದಿದೆ. ಈ ಎರಡು ವಿಭಿನ್ನ ವಿಚಾರಗಳನ್ನು ಸರಿಹೊಂದಿಸಲು ನಿರ್ದೇಶಕರು ವಿಫಲರಾಗಿದ್ದಾರೆ ಎಂಬ ಕಾಮೆಂಟ್ ಬಂದಿದೆ.
‘ಇರುಮುಡಿ ಚಿತ್ರದಲ್ಲಿ ವಿಲನ್ ಪಾತ್ರಗಳ ರಚನೆ ತೀರಾ ದುರ್ಬಲವಾಗಿದೆ. ಜೊತೆಗೆ ಕಥೆಯಲ್ಲಿ ಹಲವು ಲೋಪದೋಷಗಳು ಎದ್ದು ಕಾಣುತ್ತಿವೆ. ಆಧ್ಯಾತ್ಮಿಕ ವಿಷಯವನ್ನು ದೃಶ್ಯಗಳಲ್ಲಿ ವಿಜೃಂಭಿಸಿ ತೋರಿಸಲಾಗಿದ್ದರೂ ಅದು ಕಥೆಗೆ ಯಾವುದೇ ಬಲ ನೀಡುತ್ತಿಲ್ಲ. ಇನ್ನು ಹಿಂದಿ ಡಬ್ಬಿಂಗ್ ಆವೃತ್ತಿಯ ಸಂಭಾಷಣೆ ಮತ್ತು ಡಬ್ಬಿಂಗ್ ಗುಣಮಟ್ಟ ಕೂಡ ತೀರಾ ಕಳಪೆಯಾಗಿದೆ’ ಎಂದು ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ಇರುಮುಡಿ’ ಸಿನಿಮಾದಿಂದ ನಟ ರವಿ ತೇಜ ಗಳಿಸಿದ್ದು ಎಷ್ಟು? ಇಲ್ಲಿದೆ ಕಂಪ್ಲೀಟ್ ಲೆಕ್ಕಾಚಾರ
ಥಿಯೇಟರ್‌ನಲ್ಲಿ ಸಿನಿಮಾ ನೋಡುವ ಅನುಭವಕ್ಕೂ, ಒಟಿಟಿಯಲ್ಲಿ ಸಿನಿಮಾ ನೋಡುವ ಅನುಭವಕ್ಕೂ ಸಾಕಷ್ಟು ವ್ಯತ್ಯಾಸ ಇರುತ್ತದೆ. ‘ಇರುಮುಡಿ’ ಸಿನಿಮಾ ಇಷ್ಟ ಆಗದಿರಲು ಇದು ಕೂಡ ಒಂದು ಕಾರಣ ಇರಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.