‘ಇದು ಆರ್​ಸಿಬಿಯ ಕೆಟ್ಟ ನಿರ್ಧಾರ’: ರಶ್ಮಿಕಾ ಸಹಯೋಗಕ್ಕೆ ಫ್ಯಾನ್ಸ್​ ಗರಂ

ನಟಿ ರಶ್ಮಿಕಾ ಮಂದಣ್ಣ ಜೊತೆ ಆರ್​ಸಿಬಿ ಮ್ಯಾನೇಜ್​ಮೆಂಟ್​ ಕೈ ಜೋಡಿಸಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಹೊಸ ಪ್ರೋಮೋದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಅದನ್ನು ಕಂಡು ಆರ್​ಸಿಬಿ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಸಾವಿರಾರು ಕಮೆಂಟ್​ಗಳ ಮೂಲಕ ಫ್ಯಾನ್ಸ್​ ತಕರಾರು ತೆಗೆದಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಇದು ಆರ್​ಸಿಬಿಯ ಕೆಟ್ಟ ನಿರ್ಧಾರ’: ರಶ್ಮಿಕಾ ಸಹಯೋಗಕ್ಕೆ ಫ್ಯಾನ್ಸ್​ ಗರಂ
ರಶ್ಮಿಕಾ ಮಂದಣ್ಣ
Follow us
ಮದನ್​ ಕುಮಾರ್​
|

Updated on: Mar 18, 2024 | 8:14 PM

ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ತಂಡ ಕಪ್​ ಗೆದ್ದಿದ್ದು ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಗೆಲುವಿನ ಸಂಭ್ರಮಾಚರಣೆ ನಡೆಯುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಆರ್​ಸಿಬಿ ಅಭಿಮಾನಿಗಳು ಗರಂ ಆಗಿದ್ದಾರೆ. ಅದಕ್ಕೆ ಕಾರಣ ಆಗಿರುವುದು ನಟಿ ರಶ್ಮಿಕಾ ಮಂದಣ್ಣ! ಅರೆ, ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೂ ಆರ್​ಸಿಬಿ ತಂಡಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಮೂಡುವುದು ಸಹಜ. ವಿಷಯ ಏನೆಂದರೆ, ಐಪಿಎಲ್​ ಆರಂಭಕ್ಕೂ ಮುನ್ನ ಅನೇಕ ಸೆಲೆಬ್ರಿಟಿಗಳ ಜೊತೆ ಆರ್​ಸಿಬಿ ಸಹಯೋಗ ಮಾಡಿಕೊಂಡಿದೆ. ರಶ್ಮಿಕಾ ಮಂದಣ್ಣ ಜೊತೆ ಆರ್​​ಸಿಬಿ (RCB) ಮ್ಯಾನೇಜ್​ಮೆಂಟ್​ ಕೈ ಜೋಡಿಸಿರುವುದಕ್ಕೆ ಅಭಿಮಾನಿಗಳು ಸಿಟ್ಟಾಗಿದ್ದಾರೆ. ‘ಇದು ಆರ್​ಸಿಬಿ ತೆಗೆದುಕೊಂಡ ಅತಿ ಕೆಟ್ಟ ನಿರ್ಧಾರ’ ಎಂದು ಫ್ಯಾನ್ಸ್​ ಕಮೆಂಟ್​ ಮಾಡಿದ್ದಾರೆ.

ಈಗಾಗಲೇ ಶಿವರಾಜ್​ಕುಮಾರ್​, ರಿಷಬ್​ ಶೆಟ್ಟಿ, ಕಿಚ್ಚ ಸುದೀಪ್​ ಮುಂತಾದ ಸೆಲೆಬ್ರಿಟಿಗಳು ಆರ್​ಸಿಬಿ ಅನ್​ಬಾಕ್ಸ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಸ್ಟಾರ್​ ಕಲಾವಿದರು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಟೀಮ್​ ಜೊತೆ ಕೈ ಜೋಡಿಸಿದ್ದಕ್ಕೆ ಅಭಿಮಾನಿಗಳಿಗೆ ಖುಷಿ ಆಗಿದೆ. ಈ ಸ್ಟಾರ್​ಗಳ ಪ್ರೋಮೋಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ರಶ್ಮಿಕಾ ಮಂದಣ್ಣ ಅವರನ್ನು ಅನ್​ಬಾಕ್ಸ್​ ವಿಡಿಯೋದಲ್ಲಿ ನೋಡಿದ ಆರ್​ಸಿಬಿ ಫ್ಯಾನ್ಸ್​ಗೆ ನಿರಾಸೆ ಆಗಿದೆ.

ಆರ್​ಸಿಬಿ ಇನ್​ಸ್ಟಾಗ್ರಾಮ್​ ಪೋಸ್ಟ್​:

‘ನಾವು ಈ ಸಹಯೋಗವನ್ನು ನಿರೀಕ್ಷಿಸಿರಲಿಲ್ಲ’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ. ‘ನಿಯತ್ತಾದ ಫ್ರಾಂಚೈಸ್​ಗೆ ನಿಯತ್ತಿಲ್ಲದ ವ್ಯಕ್ತಿಗಳ ಸಹಯೋಗ ಬೇಡ’ ಎಂಬ ಕಮೆಂಟ್​ ಕೂಡ ಬಂದಿದೆ. ‘ಕರ್ನಾಟಕಕ್ಕೆ ರಶ್ಮಿಕಾ ಮಂದಣ್ಣ ಬೇಡ. ಸ್ಮೃತಿ ಮಂಧಾನ ಬೇಕು’ ಎಂದು ಕೂಡ ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ‘ಅಷ್ಟು ಸಿಹಿ ಮನುಷ್ಯರ ಮಧ್ಯೆ ಈ ಕಹಿ ಯಾಕೆ’ ಎಂದು ಟ್ರೋಲ್​ ಪೇಜ್​ನವರು ಖಾರವಾಗಿ ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ಜಪಾನ್​ನಲ್ಲೂ ಸೃಷ್ಟಿಯಾಗಿದೆ ರಶ್ಮಿಕಾ ಮಂದಣ್ಣ ಅಭಿಮಾನಿ ಬಳಗ

ರಶ್ಮಿಕಾ ಮಂದಣ್ಣ ಅವರು ಕನ್ನಡದವರು. ಅವರಿಗೆ ಖ್ಯಾತಿ ಸಿಕ್ಕಿದ್ದು ಕನ್ನಡದ ‘ಕಿರಿಕ್​ ಪಾರ್ಟಿ’ ಸಿನಿಮಾದಿಂದ. ಆ ಚಿತ್ರದಲ್ಲಿ ನಟಿಸಿದ ಬಳಿಕ ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವೆ ಪ್ರೀತಿ ಚಿಗುರಿತ್ತು. ನಂತರ ಅವರಿಬ್ಬರು ಎಂಗೇಜ್​ಮೆಂಟ್​ ಮಾಡಿಕೊಂಡರು. ಆದರೆ ಕೆಲವೇ ದಿನಗಳಲ್ಲಿ ಅವರಿಬ್ಬರ ಸಂಬಂಧ ಮುರಿದುಬಿತ್ತು. ಆ ಘಟನೆ ನಡೆದ ಬಳಿಕ ಕನ್ನಡಿಗರು ರಶ್ಮಿಕಾ ಅವರನ್ನು ಕಂಡರೆ ಕಿಡಿಕಾರಲು ಆರಂಭಿಸಿದರು. ಆ ಸಮಯಕ್ಕೆ ಸರಿಯಾಗಿ ರಶ್ಮಿಕಾ ಅವರಿಗೆ ಪರಭಾಷೆಯಲ್ಲಿ ಅವಕಾಶಗಳು ಹೆಚ್ಚಿದವು. ಕನ್ನಡದಲ್ಲಿ ಅವರು ನಟಿಸುವುದು ಕಡಿಮೆ ಆಯಿತು. ಈಗ ಅವರ ಜೊತೆ ಕೈ ಜೋಡಿಸಿದ ಆರ್​ಸಿಬಿ ಮ್ಯಾನೇಜ್​ಮೆಂಟ್​ ವಿರುದ್ಧ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.