ಟಾಲಿವುಡ್ನಲ್ಲಿ ಈ ವರ್ಷ ಬ್ಲಾಕ್ ಬಸ್ಟರ್ ಹಿಟ್ ಆದ ಸಿನಿಮಾಗಳ ಸಾಲಿನಲ್ಲಿ ‘ಬೇಬಿ’ (Baby Movie) ಕೂಡ ಇದೆ. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರ ಸಹೋದರ ಆನಂದ್ ದೇವರಕೊಂಡ (Anand Deverakonda) ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅವರಿಗೆ ಜೋಡಿಯಾಗಿ ವೈಷ್ಣವಿ ಚೈತನ್ಯ ನಟಿಸಿದ್ದಾರೆ. ಕಡಿಮೆ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ 96 ಕೋಟಿ ರೂಪಾಯಿ! ಈಗ ‘ಬೇಬಿ’ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್ (Baby Movie Remake) ಮಾಡಲು ಮಾತುಕತೆ ನಡೆಯುತ್ತಿದೆ. ಆ ಬಗ್ಗೆ ‘ಬಾಲಿವುಡ್ ಹಂಗಾಮಾ’ ವರದಿ ಮಾಡಿದೆ.
‘ಬೇಬಿ’ ಸಿನಿಮಾಗೆ ಸಾಯಿ ರಾಜೇಶ್ ನೀಲಂ ನಿರ್ದೇಶನ ಮಾಡಿದ್ದು, ಶ್ರೀನಿವಾಸ ಕುಮಾರ್ ನಾಯ್ಡು ಅಲಿಯಾಸ್ ಎಸ್ಕೆಎನ್ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದೆ ಎಂಬ ಮಾಹಿತಿಯನ್ನು ನಿರ್ಮಾಪಕರು ಖಚಿತಪಡಿಸಿರುವುದಾಗಿ ವರದಿ ಆಗಿದೆ. ಹಿಂದಿಯಲ್ಲಿ ದೊಡ್ಡ ನಿರ್ಮಾಪಕರು ರಿಮೇಕ್ ಹಕ್ಕುಗಳನ್ನು ಖರೀದಿಸಲು ಮುಂದಾಗಿದ್ದಾರೆ. ಈ ಹಿಂದೆ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಆ ನಿರ್ಮಾಪಕರಿಗೆ ಇದೆಯಂತೆ.
ಇದನ್ನೂ ಓದಿ: Baby Movie: ತಮ್ಮನ ‘ಬೇಬಿ’ ಸಿನಿಮಾ ನೋಡಿಕೊಂಡು ಬಂದು ಅಚ್ಚರಿಯ ಹೇಳಿಕೆ ನೀಡಿದ ವಿಜಯ್ ದೇವರಕೊಂಡ
ಹೊಸ ನಟ-ನಟಿಯರ ಕಾರಣದಿಂದ ‘ಬೇಬಿ’ ಸಿನಿಮಾಗೆ ಒಂದು ಕಳೆ ಬಂದಿತ್ತು. ಅದೇ ರೀತಿ ಹಿಂದಿ ರಿಮೇಕ್ನಲ್ಲೂ ಹೊಸ ತಲೆಮಾರಿನ ಕಲಾವಿದರು ನಟಿಸಲು ಆಸಕ್ತಿ ತೋರಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ರಿಮೇಕ್ ಮಾಡಲು ಮುಂದೆ ಬಂದಿರುವ ನಿರ್ಮಾಪಕರು ಯಾರು? ನಟಿಸಲು ಆಸಕ್ತಿ ತೋರಿಸಿರುವ ಸ್ಟಾರ್ ಕಿಡ್ ಯಾರು ಎಂಬುದನ್ನು ‘ಬೇಬಿ’ ನಿರ್ಮಾಪಕರು ಸದ್ಯಕ್ಕೆ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: ಬೇಬಿ ಸಿನಿಮಾದ ನಿರ್ದೇಶಕನಿಗೆ ದುಬಾರಿ ಕಾರು ಉಡುಗೊರೆ
ಕೇವಲ 15 ಕೋಟಿ ರೂಪಾಯಿ ಬಜೆಟ್ನಲ್ಲಿ ‘ಬೇಬಿ’ ಸಿನಿಮಾ ಮೂಡಿಬಂತು. ಆದರೆ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಬೆಳೆ ತೆಗೆಯಿತು. ಆನಂದ್ ದೇವರಕೊಂಡ ಅವರು ಈ ಸಿನಿಮಾದ ಗೆಲುವಿನಿಂದ ಸ್ಟಾರ್ ನಟನಾಗಿ ಹೊರಹೊಮ್ಮಿದರು. ನಟಿ ವೈಷ್ಣವಿ ಚೈತನ್ಯ ಅವರ ಡಿಮ್ಯಾಂಡ್ ಕೂಡ ಹೆಚ್ಚಾಯಿತು. ಇದರಲ್ಲಿ ಒಂದು ತ್ರಿಕೋನ ಪ್ರೇಮಕಥೆಯನ್ನು ಹೇಳಲಾಯಿತು. ಯುವ ಪ್ರೇಕ್ಷಕರು ಈ ಕಹಾನಿಯನ್ನು ಸಖತ್ ಇಷ್ಟಪಟ್ಟರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:59 pm, Tue, 19 December 23