‘ಬೇಬಿ’ ಸಿನಿಮಾದ ನಿರ್ದೇಶಕನಿಗೆ ದುಬಾರಿ ಕಾರು ಉಡುಗೊರೆ

Baby: ತೆಲುಗು ಚಿತ್ರರಂಗದ ಇತ್ತೀಚೆಗಿನ ಸೂಪರ್-ಡೂಪರ್ ಹಿಟ್ ಸಿನಿಮಾ 'ಬೇಬಿ'. ಈ ಸಿನಿಮಾದ ನಿರ್ದೇಶಕನಿಗೆ, ಸಿನಿಮಾದ ನಿರ್ಮಾಪಕ ಎಸ್​ಕೆಎನ್ ಐಶಾರಾಮಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

'ಬೇಬಿ' ಸಿನಿಮಾದ ನಿರ್ದೇಶಕನಿಗೆ ದುಬಾರಿ ಕಾರು ಉಡುಗೊರೆ
ಬೇಬಿ
Follow us
ಮಂಜುನಾಥ ಸಿ.
|

Updated on: Oct 01, 2023 | 7:14 PM

ಸೂಪರ್ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕರಿಗೆ ಕಾರು (Car) ಉಡುಗೊರೆ ಕೊಡುವ ಅಭ್ಯಾಸ ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿದೆ. ನಟ, ನಿರ್ಮಾಪಕ ಕಮಲ್ ಹಾಸನ್, ತಮ್ಮ ಸೂಪರ್ ಹಿಟ್ ಸಿನಿಮಾ ‘ವಿಕ್ರಂ‘ (Vikram) ನಿರೆ್ದೇಶನ ಮಾಡಿದ್ದ ಲೋಕೇಶ್ ಕನಗರಾಜ್​ಗೆ ದುಬಾರಿ ಲೆಕ್ಸಸ್ ಕಾರು ಕೊಡಿಸಿ ಈ ಟ್ರೆಂಡ್ ಹುಟ್ಟುಹಾಕಿದರು. ಅದರ ಬೆನ್ನಲ್ಲೆ ಈಗ ಹಲವು ನಿರ್ಮಾಪಕರು, ಹಿಟ್ ಸಿನಿಮಾ ನೀಡಿದ ನಿರ್ದೇಶಕರುಗಳಿಗೆ ಕಾರು ಉಡುಗೊರೆ ನೀಡುತ್ತಿದ್ದಾರೆ.

‘ವಿಕ್ರಂ’ ಸಿನಿಮಾ ಬಳಿಕ ಹಿಟ್ ಸಿನಿಮಾ ‘ಮಾಮನ್ನನ್’ ನಿರ್ದೇಶಕ ಮಾರಿ ಸೆಲ್ವರಾಜ್​ಗೆ ಸಿನಿಮಾದ ನಟ, ನಿರ್ಮಾಪಕರೂ ಆಗಿರುವ ಉದಯ್ ನಿಧಿ ಸ್ಟಾಲಿನ್ ಮಿನಿ ಕೂಪರ್ ಕಾರು ಉಡುಗೊರೆಯಾಗಿ ನೀಡಿದರು. ಅದಾದ ಬಳಿಕ ರಜನೀಕಾಂತ್​ ನಟನೆಯ ‘ಜೈಲರ್’ ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿದ್ದಕ್ಕೆ ಅದರ ನಿರ್ದೇಶಕ ನೆಲ್ಸನ್​ಗೆ ಐಶಾರಾಮಿ ಕಾರನ್ನು ಸಿನಿಮಾದ ನಿರ್ಮಾಪಕ ಕಲಾನಿಧಿ ಮಾರನ್ ಉಡುಗೊರೆಯಾಗಿ ನೀಡಿದ್ದರು. ನೆಲ್ಸನ್​ಗೆ ಮಾತ್ರವೇ ಅಲ್ಲದೆ ಸಿನಿಮಾದ ನಾಯಕ ರಜನೀಕಾಂತ್, ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದ್ರನ್​ಗೂ ಸಹ ಕಾರು ಹಾಗೂ ನಗದು ಹಣ ಉಡುಗೊರೆಯಾಗಿ ನೀಡಿದ್ದರು.

ಇದನ್ನೂ ಓದಿ:ಗೆಳೆಯನ ಹುಟ್ಟುಹಬ್ಬಕ್ಕೆ 52 ಲಕ್ಷ ಬೆಲೆಯ ಕಾರು ಉಡುಗೊರೆ ಕೊಟ್ಟ ಧ್ರುವ ಸರ್ಜಾ

ಇದೀಗ ಇದೇ ಟ್ರೆಂಡ್​ ತೆಲುಗು ಚಿತ್ರರಂಗದಲ್ಲೂ ಸೃಷ್ಟಿಯಾದಂತಿದೆ. ತೆಲುಗಿನ ಇತ್ತೀಚೆಗಿನ ಸೂಪರ್ ಹಿಟ್ ಸಿನಿಮಾ ‘ಬೇಬಿ’. ಈ ಸಿನಿಮಾದ ನಿರ್ಮಾಪಕ ಶ್ರೀನಿವಾಸ ಕುಮಾರ ನಾಯ್ಡು ಅವರು ಸಿನಿಮಾದ ನಿರ್ದೇಶಕ ಸಾಯಿ ರಾಜೇಶ್ ನೀಲಂ ಅವರಿಗೆ ಐಶಾರಾಮಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಮರ್ಸಿಡೀಸ್ ಬೆಂಜ್ ಸಂಸ್ಥೆಯ ಹೊಸ ಮಾದರಿ ಸೆಡಾನ್ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ನಿರ್ದೇಶಕನಿಗೆ ಕಾರು ನೀಡಿರುವ ವಿಡಿಯೋವನ್ನು ನಿರ್ಮಾಪಕ ಶ್ರೀನಿವಾಸ್ ಕುಮಾರ್ (ಎಸ್​ಕೆಎನ್) ಹಂಚಿಕೊಂಡಿದ್ದಾರೆ.

‘ಬೇಬಿ’ ಸಿನಿಮಾವು ಜುಲೈ 14 ರಂದು ಬಿಡುಗಡೆ ಆಗಿತ್ತು. ತ್ರಿಕೋನ ಪ್ರೇಮಕತೆಯ ಈ ಸಿನಿಮಾದಲ್ಲಿ ಯುವತಿಯೊಬ್ಬಾಕೆ ಒಂದೇ ಸಮಯದಲ್ಲಿ ಇಬ್ಬರನ್ನು ಪ್ರೀತಿಸಿ ಮೋಸ ಮಾಡುವ ಕತೆಯನ್ನು ಒಳಗೊಂಡಿದೆ. ‘ಬೇಬಿ’ ಸಿನಿಮಾವನ್ನು ಆಂಧ್ರ-ತೆಲಂಗಾಣದ ಯುವಜನತೆ ಬಹುವಾಗಿ ಮೆಚ್ಚಿಕೊಂಡಿತ್ತು. ಕೇವಲ 10 ಕೋಟಿ ಬಜೆಟ್​ನಲ್ಲಿ ನಿರ್ಮಾಣ ಮಾಡಲಾದ ಈ ಸಿನಿಮಾ 100 ಕೋಟಿ ಕಲೆಕ್ಷನ್ ಅನ್ನು ದಾಟಿದೆ.

‘ಬೇಬಿ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ವೈಷ್ಣವಿ ಚೈತನ್ಯ ನಾಯಕಿಯಾಗಿ ನಟಿಸಿದ್ದಾರೆ. ವಿರಾಜ್ ಅಶ್ವಿನ್, ನಾಯಕಿಯ ತಂದೆ ಪಾತ್ರದಲ್ಲಿ ಚಿರಂಜೀವಿ ಸಹೋದರ ನಾಗೇಂದ್ರ ಬಾಬು ಇನ್ನೂ ಹಲವರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ