ಧ್ರುವ ಸರ್ಜಾ-ನಿಖಿಲ್ ಕುಮಾರಸ್ವಾಮಿ ಭೇಟಿ: ಈ ಭೇಟಿಯ ಉದ್ದೇಶವೇನು?
Dhruva-Nikhil: ಅಷ್ಟಾಗಿ ಒಟ್ಟಿಗೆ ಕಾಣಿಸಿಕೊಳ್ಳದಿದ್ದ ನಟ ಧ್ರುವ ಸರ್ಜಾ ಹಾಗೂ ನಿಖಿಲ್ ಕುಮಾರಸ್ವಾಮಿ ಅಚಾನಕ್ಕಾಗಿ ಭೇಟಿಯಾಗಿ ಒಟ್ಟಿಗೆ ಮಾತುಕತೆ ನಡೆಸಿದ್ದಾರೆ. ಅಂದಹಾಗೆ ಇವರು ಭೇಟಿ ಮಾಡಿದ್ದೆಲ್ಲಿ, ಚರ್ಚೆ ಮಾಡಿದ ವಿಷಯವೇನು? ಇಲ್ಲಿದೆ ಮಾಹಿತಿ.
ರಾಜ್ಯ ರಾಜಕಾರಣ (Politics) ಹಾಗೂ ಚಿತ್ರರಂಗ (Sandalwood) ಎರಡರಲ್ಲೂ ತುರುಸಿನ ಚಟುವಟಿಕೆಗಳು ನಡೆಯುತ್ತಿವೆ. ಚಿತ್ರರಂಗವು ಪ್ಯಾನ್ ಇಂಡಿಯಾ ಸಿನಿಮಾ, ದಸರೆ, ದೀಪಾವಳಿಗೆ ಸಿನಿಮಾ ಬಿಡುಗಡೆ ಇದರ ನಡುವೆ ಕಾವೇರಿ ವಿವಾದ ಇನ್ನಿತರೆಗಳಲ್ಲಿ ಬ್ಯುಸಿಯಾಗಿದ್ದರೆ, ರಾಜ್ಯ ರಾಜಕಾರಣವು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಸಾಕ್ಷಿಯಾಗಿದೆ. ಎರಡೂ ಕಡೆಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ನಿಖಿಲ್ ಕುಮಾರಸ್ವಾಮಿ ಎರಡೂ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿದ್ದಾರೆ.
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯ ಬಳಿಕ ನಿಖಿಲ್ ಕುಮಾರಸ್ವಾಮಿ, ಹಲವು ಬಿಜೆಪಿ ಗಣ್ಯರನ್ನು ಇತ್ತೀಚೆಗೆ ಭೇಟಿಯಾಗಿದ್ದಾರೆ. ಯಡಿಯೂರಪ್ಪ, ಅಶ್ವತ್ಥ್ ನಾರಾಯಣ್ ಸೇರಿದಂತೆ ಹಲವು ಬಿಜೆಪಿ ಗಣ್ಯರನ್ನು ನಿಖಿಲ್ ಕುಮಾರಸ್ವಾಮಿ ಭೇಟಿ ಆಗಿ ಮಾತುಕತೆ ನಡೆಸಿದ್ದಾರೆ. ಆದರೆ ಇದೀಗ ನಿಖಿಲ್ ಕುಮಾರಸ್ವಾಮಿ ಅಚಾನಕ್ಕಾಗಿ ನಟ ಧ್ರುವ ಸರ್ಜಾ ಅವರನ್ನು ಭೇಟಿಯಾಗಿದ್ದು, ಈ ಭೇಟಿ ಆಶ್ಚರ್ಯಕ್ಕೆ ಕಾರಣವಾಗಿದೆ.
ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಮತ್ತೆ ರಾಜಕೀಯದಲ್ಲಿ ಸಕ್ರಿಯರಾಗಿರುವ ನಿಖಿಲ್ ಅದರ ಜೊತೆಗೆ ಸಿನಿಮಾ ಚಿತ್ರೀಕರಣದಲ್ಲಿಯೂ ತೊಡಗಿಕೊಂಡಿದ್ದಾರೆ. ಈಗಾಗಲೇ ಘೋಷಿಸಲಾಗಿರುವ ಸಿನಿಮಾಗಳ ಚಿತ್ರೀಕರಣ ಪ್ರಾರಂಭ ಮಾಡಿರುವ ನಿಖಿಲ್ ಆದಷ್ಟು ಶೀಘ್ರವೇ ಅವನ್ನು ಮುಗಿಸಬೇಕಿದೆ. ಎರಡು ಚುನಾವಣೆಗಳಲ್ಲಿ ನಿರಾಸೆ ಅನುಭವಿಸಿರುವ ನಿಖಿಲ್ ಕುಮಾರಸ್ವಾಮಿ, ಮುಂಬರುವ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದು ಎಂಪಿ ಚುನಾವಣೆಗೆ ಬೇಕಿರೋ ಸದೃಢವಾದ ವೇದಿಕೆಯನ್ನ ಪಕ್ಷದ ಪರವಾಗಿ ತಾವೇ ಸಜ್ಜು ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಹಾಗಾಗಿ ರಾಜಕೀಯ ಮತ್ತು ಸಿನಿಮಾ ಎರಡನ್ನೂ ನಿಭಾಯಿಸುವುದರಲ್ಲಿ ನಿರತರಾಗಿದ್ದಾರೆ.
ಇದನ್ನೂ ಓದಿ:ನಿಖಿಲ್ ಕುಮಾರಸ್ವಾಮಿ ಬಳಿಕ ಈಗ ಮೋಹನ್ಲಾಲ್ ಮೇಲೆ ಲೈಕಾ ಬಂಡವಾಳ
ಲೈಕಾ ಸಂಸ್ಥೆ ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿರುವ ಕನ್ನಡ ಸಿನಿಮಾದಲ್ಲಿ ನಿಖಿಲ್ ನಟಿಸುತ್ತಿದ್ದು ಸಿನಿಮಾವನ್ನು ಲಕ್ಷ್ಮಣ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಚಿತ್ರೀಕರಣದ ಎರಡನೇ ಶೆಡ್ಯೂಲ್ ಪ್ರಾರಂಭವಾಗಿದೆ. ಐದು ತಿಂಗಳಲ್ಲಿ ಸಿನಿಮಾವನ್ನು ಮುಗಿಸಬೇಕು ಎನ್ನುವ ಗುರಿಯನ್ನು ಇಟ್ಟುಕೊಂಡಿದ್ದು, ಬಿರುಸಿನಿಂದ ಶೂಟಿಂಗ್ ಮಾಡಲಾಗುತ್ತಿದೆ. ಈ ನಡುವೆ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಜಾಗಕ್ಕೆ ನಟ ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಅಚಾನಕ್ಕಾಗಿ ಭೇಟಿ ನೀಡಿ ಚಿತ್ರತಂಡಕ್ಕೆ ಸ್ವೀಟ್ ಶಾಕ್ ನೀಡಿದ್ದಾರೆ.
ನಿಖಿಲ್ ಹಾಗೂ ಧ್ರುವಾ ಸರ್ಜಾ ಒಟ್ಟಿಗೆ ಕಾಣಿಸಿಕೊಂಡಿದ್ದು ಬಹಳ ಕಡಿಮೆ. ಆದರೆ ಇದೇ ಮೊದಲ ಬಾರಿಗೆ ಇಬ್ಬರು ಭೇಟಿ ಮಾಡಿ ಕೆಲ ಸಮಯ ಮಾತುಕತೆ ನಡೆಸಿದ್ದಾರೆ. ಇದೇ ಸಮಯದಲ್ಲಿ ನಿಖಿಲ್ ಅವರ ಹೊಸ ಸಿನಿಮಾ ಬಗ್ಗೆ ಹಾಗೂ ಧ್ರುವ ಅವರ ‘ಮಾರ್ಟಿನ್’ ಬಗ್ಗೆ ಇಬ್ಬರೂ ನಟರು ಚರ್ಚೆ ನಡೆಸಿದ್ದಾರೆ. ಇದಷ್ಟೇ ಅಲ್ಲದೇ ಇಬ್ಬರೂ ಒಂದಿಷ್ಟು ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾತನಾಡುತ್ತಾ ಕೆಲ ಸಮಯ ಕಳೆದಿದ್ದಾರೆ. ಅಪರೂಪಕ್ಕೆ ಸೆಟ್ಗೆ ಬಂದ ಧ್ರುವ ಅವರನ್ನು ಕಂಡು ನಿಖಿಲ್ ಕೂಡ ಸರ್ಪ್ರೈಸ್ ಆಗಿದ್ದು ಅಪರೂಪದ ಗೆಳೆಯನನ್ನ ಪ್ರೀತಿಯಿಂದ ಬರಮಾಡಿಕೊಂಡು ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ. ಒಟ್ಟಾರೆ ಈ ಇಬ್ಬರು ಸ್ಟಾರ್ ನಟರ ಭೇಟಿ ಅಭಿಮಾನಿಗಳಿಗೆ ಖುಷಿ ಕೊಡುವುದರ ಜೊತೆಗೆ ಕುತೂಹಲವನ್ನೂ ಹುಟ್ಟುಹಾಕಿದೆ.
ನಿಖಿಲ್ ಕುಮಾರಸ್ವಾಮಿ ಲೈಕಾ ನಿರ್ಮಾಣದ ಸಿನಿಮಾದ ಜೊತೆಗೆ ಮತ್ತೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಇನ್ನು ನಟ ಧ್ರುವ ಸರ್ಜಾ, ‘ಮಾರ್ಟಿನ್’ ಸಿನಿಮಾದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಅದರ ಜೊತೆಗೆ ಪ್ರೇಮ್ ನಿರ್ದೇಶನದ ‘ಕೆಡಿ’ ಹೆಸರಿನ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ‘ಕೆಡಿ’ ಸಿನಿಮಾವು 80ರ ದಶಕದ ಕತೆಯನ್ನು ಒಳಗೊಂಡಿದ್ದು, ಸಿನಿಮಾದಲ್ಲಿ ಸಂಜಯ್ ದತ್ ಸೇರಿದಂತೆ ಇನ್ನೂ ಕೆಲವು ಚಿತ್ರರಂಗದ ದೊಡ್ಡ ನಟರು ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ