ರಾಜಕೀಯ ಮಾಡಲು ನಟರನ್ನು ಬಳಸಿಕೊಳ್ಳಬೇಡಿ, ಚಿತ್ರರಂಗವನ್ನು ಒಡೆಯಬೇಡಿ: ಧ್ರುವ ಸರ್ಜಾ ಮನವಿ
Sandalwood: ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿ ಚಿತ್ರರಂಗವು ಇಂದು ಪ್ರತಿಭಟನಾ ಸಭೆ ನಡೆಸಿತು. ಶಿವರಾಜ್ ಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಹಲವು ನಟ-ನಟಿಯರು ಭಾಗಿಯಾಗಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಕರ್ನಾಟಕವು, ತಮಿಳುನಾಡಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಕಾವೇರಿ (Cauvery) ನೀರು ಹರಿಸಬೇಕೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವ ಬೆನ್ನಲ್ಲೆ ಕರ್ನಾಟಕದ ಹಲವೆಡೆ ಕಾವೇರಿ ಹೋರಾಟ ಭುಗಿಲೆದ್ದಿದೆ. ಇಂದು (ಸೆಪ್ಟೆಂಬರ್ 29) ರಾಜ್ಯದಾದ್ಯಂತ ಬಂದ್ ಗೆ ಕನ್ನಡಪರ ಸಂಘಟನೆಗಳು ಹಾಗೂ ಇತರೆ ಕೆಲವು ಸಂಘಟನೆಗಳು ಕರೆ ನೀಡಿದ್ದವು. ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿ ಕನ್ನಡ ಚಿತ್ರರಂಗ ಸಹ ಬೀದಿಗೆ ಇಳಿದಿತ್ತು. ಶಿವರಾಜ್ ಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಹಲವು ನಟರು ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಧ್ರುವ ಸರ್ಜಾ, ”ರಾಜಕೀಯ ಮಾಡಲು ರಾಜಕಾರಣಿಗಳಿದ್ದಾರೆ. ರಾಜಕೀಯ ಮಾಡಲು ದಯವಿಟ್ಟು ಕಲಾವಿದರನ್ನು ಬಳಸಿಕೊಳ್ಳಬೇಡಿ. ಕನ್ನಡ ಚಿತ್ರರಂಗ ಶುದ್ಧವಾಗಿದೆ. ನಿಮ್ಮ ಕೆಟ್ಟ ಸಂಚಿನಿಂದ ಅದನ್ನು ಒಡೆಯಬೇಡಿ. ನಾವು ಹಿಂದೆಯೂ ಅಷ್ಟೆ ಇನ್ನು ಮುಂದೆಯೂ ಅಷ್ಟೆ ರೈತರ ಪರವಾಗಿಯೇ ಇರುತ್ತೇವೆ. ನಾನು ರೈತರ ಮಗನಾಗಿ, ಕನ್ನಡಿಗನಾಗಿ ಈ ಹೋರಾಟಕ್ಕೆ ಬೆಂಬಲ ಇದೆ. ತಮಿಳುನಾಡು, ಕರ್ನಾಟಕದಲ್ಲಿ ಒಳ್ಳೆಯ ಮಳೆಯಾಗಿ, ಬೆಳೆಯಾಗಿ ರೈತರಿಗೆ ಒಳ್ಳೆಯದಾಗಲಿ. ಜೈ ಆಂಜನೇಯ’ ಎಂದು ಮಾತು ಮುಗಿಸಿದರು.
ಇದನ್ನೂ ಓದಿ:‘ಇಂಡಸ್ಟ್ರಿಗೆ ಬಂದ್ಮೇಲೆ ನಾನು 25 ಬಾರಿ ಕಾವೇರಿ ಹೋರಾಟ ಮಾಡಿದೀನಿ, ಪರಿಹಾರ ಸಿಕ್ಕಿಲ್ಲ’: ಉಪೇಂದ್ರ
ಇಂದು ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಎಲ್ಲ ನಟರು ಕಾವೇರಿ ಪರವಾಗಿ ಇರುವುದಾಗಿ ಹೇಳಿದ ಜೊತೆಗೆ, ಇಂಥಹಾ ಸೂಕ್ಷ್ಮ ವಿಷಯಗಳು ಬಂದಾಗ ವಿನಾಕಾರಣ ಚಿತ್ರರಂಗವನ್ನು, ಸಿನಿಮಾ ನಟ-ನಟಿಯರನ್ನು ದೂಷಣೆ ಮಾಡುವ, ನಟರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲು ಯತ್ನಿಸುವ, ದ್ವೇಷ ಬಿತ್ತಲು ಯತ್ನಿಸುವ ಪ್ರಯತ್ನಗಳ ಬಗ್ಗೆಯೂ ಮಾತನಾಡಿದ್ದು ವಿಶೇಷವಾಗಿತ್ತು. ಸಭೆಯ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟ ವಶಿಷ್ಠ ಸಿಂಹ ಸಹ ಇಂಥಹಾ ವಿಚಾರಗಳಲ್ಲಿ ಚಿತ್ರರಂಗವನ್ನು ದೂಷಿಸುವುದು ಸರಿಯಲ್ಲ ಎಂದು ಹೇಳಿದರು.
ನಿರ್ದೇಶಕ, ನಟ ಪ್ರೇಮ್ ಅಂತೂ ವೀರಾವೇಷದಿಂದ ಮಾತನಾಡಿ, ಕೆಲವು ದಿನಗಳ ಹಿಂದಷ್ಟೆ ಚಿತ್ರರಂಗದ ನಟರನ್ನು ಗುರಿಯಾಗಿಸಿ ಸಂಘಟನೆಯ ಸದಸ್ಯರು ಕೆಲವರು ಮಾಡಿದ್ದ ವಿಡಿಯೋ, ಸಾಮಾಜಿಕ ಪೋಸ್ಟ್ಗಳಿಗೆ ಆಕ್ರೋಶದಿಂದಲೇ ಉತ್ತರಿಸಿದರು. ಇಂದು ನಡೆದ ಪ್ರತಿಭಟನಾ ಸಭೆಯಲ್ಲಿ ಶಿವರಾಜ್ ಕುಮಾರ್, ದರ್ಶನ್, ಉಪೇಂದ್ರ, ದುನಿಯಾ ವಿಜಯ್, ಧ್ರುವ ಸರ್ಜಾ, ಶ್ರೀಮುರಳಿ, ವಿಜಯ್ ರಾಘವೇಂದ್ರ, ಉಮಾಶ್ರೀ, ಭಾವನಾ, ಅನುಶ್ರೀ, ಶ್ರೀನಗರ ಕಿಟ್ಟಿ ಇನ್ನೂ ಹಲವಾರು ನಟ-ನಟಿಯರು ಭಾಗಿಯಾಗಿ ಒಕ್ಕೂರಲಿನಿಂದ ತಾವುಗಳು ಕಾವೇರಿ ಹೋರಾಟದ ಪರವಾಗಿ ಇರುವುದಾಗಿ ಹೇಳಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ