ಖ್ಯಾತ ಸಂಗೀತ ನಿರ್ದೇಶಕ ರಿಕಿ ಕೇಜ್ (Ricky Kej) ಅವರ ಒಂದು ಟ್ವೀಟ್ ಅವರ ಸಮಸ್ಯೆಗೆ ಪರಿಹಾರ ದೊರಕಿಸಿದೆ. ಹೌದು, ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕಿ ಕೇಜ್ ಅವರು ಈ ವರ್ಷ ಗೆದ್ದ ಪ್ರಶಸ್ತಿಯ ಪದಕವು 2 ತಿಂಗಳಿಗೂ ಹೆಚ್ಚು ಸಮಯದಿಂದ ಬೆಂಗಳೂರಿನ ಕಸ್ಟಮ್ಸ್ ಇಲಾಖೆಯಲ್ಲಿ ಸಿಲುಕಿಕೊಂಡಿತ್ತು. ಅದು ತಮಗಿನ್ನೂ ತಲುಪಿಲ್ಲ ಎಂದು ಅವರು ಇಂದು (ಜೂ.7) ಟ್ವೀಟ್ ಮಾಡಿದ್ದರು. ರಿಕಿ ಕೇಜ್ ಟ್ವೀಟ್ ಮಾಡಿದ ಬೆನ್ನಲ್ಲೇ ಕೆಲವೇ ಗಂಟೆಗಳ ಅವಧಿಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಈ ಬಗ್ಗೆ ರಿಕಿ ಕೇಜ್ ಮತ್ತೊಂದು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಇತ್ತೀಚಿನ ಟ್ವೀಟ್ನಲ್ಲಿ ರಿಕಿ ಕೇಜ್ ಅವರು ‘‘ಕಸ್ಟಮ್ಸ್ ನಿಯಮಗಳ ಅನುಸಾರ ಇದೀಗ ಎಲ್ಲ ಪ್ರಕ್ರಿಯೆ ಮುಗಿದಿದ್ದು, ನಾಳೆ ಪದಕ ನನ್ನ ಕೈಸೇರಲಿದೆ. ಕಸ್ಟಮ್ಸ್ ಅಧಿಕಾರಿಗಳ ನೆರವಿಲ್ಲದೇ ಇದು ಸಾಧ್ಯವಾಗುತ್ತಿರಲಿಲ್ಲ’’ ಎಂದು ಅವರು ಧನ್ಯವಾದ ಹೇಳಿದ್ದಾರೆ.
ಇಂದು ಮುಂಜಾನೆ ರಿಕಿ ಕೇಜ್ ಅವರು ಆದಷ್ಟು ಬೇಗ ಕಸ್ಟಮ್ಸ್ ಪ್ರಕ್ರಿಯೆಯನ್ನು ಪೂರೈಸುವಂತೆ ಟ್ವೀಟ್ ಮೂಲಕ ಮನವಿ ಮಾಡಿದ್ದರು. ಅದರಲ್ಲಿ ಅವರು ‘‘ಇತ್ತೀಚೆಗೆ ನನಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿತ್ತು. ಆದರೆ ಮೆಡಲ್ 2 ತಿಂಗಳ ಕಾಲದಿಂದ ಬೆಂಗಳೂರು ಕಸ್ಟಮ್ಸ್ನಲ್ಲಿದೆ. ಸಂಬಂಧಪಟ್ಟವರು ಪ್ರತಿಕ್ರಿಯೆ ನೀಡುತ್ತಿಲ್ಲ. ನೀವು ನನಗೆ ಸಹಾಯ ಮಾಡುತ್ತೀರಾ?’’ ಎಂದು ಅವರು ಸಂಬಂಧಪಟ್ಟ ಸಂಸ್ಥೆಗಳನ್ನು ಟ್ಯಾಗ್ ಮಾಡಿದ್ದರು.
ರಿಕಿ ಕೇಜ್ ಟ್ವೀಟ್ ಬೆನ್ನಲ್ಲೇ ಕೆಲ ನೆಟ್ಟಿಗರು ಕಸ್ಟಮ್ಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ನಂತರ ಸ್ಪಷ್ಟನೆ ನೀಡಿರುವ ರಿಕಿ ಕೇಜ್, ಅವರಿಗೆ ಮೆಡಲ್ ಇರುವುದು ತಿಳಿದಿಲ್ಲ. ಹಾಗೆಯೇ ತಮ್ಮ ನಿಯಮಗಳನ್ನು ಅವರು ಅನುಸರಿಸುತ್ತಿದ್ದಾರೆ. ಆದರೆ ಆದಷ್ಟು ಶೀಘ್ರವಾಗಿ ಅದು ತಮ್ಮ ಕೈಸೇರಲಿ ಎಂದು ಸ್ಪಷ್ಟನೆ ನೀಡಿದ್ದರು. ಈ ಟ್ವೀಟ್ಗಳ ಬೆನ್ನಲ್ಲೇ ಅವರ ಸಮಸ್ಯೆಯನ್ನು ಪರಿಹರಿಸಲಾಗಿದೆ.
ರಿಕ್ಕಿ ಕೇಜ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:
Good news: Thanks to the quick, swift intervention by the Customs of India, my Medallion has cleared customs and will be delivered tomorrow. Just got a call from Fedex. This would not be possible without the Customs officials going over & above their duty to ensure this is done.
— Ricky Kej (@rickykej) June 7, 2022
ರಿಕಿ ಕೇಜ್ ಅವರು ತಮ್ಮ ಆಲ್ಬಂ ‘ಡಿವೈನ್ ಟೈಡ್ಸ್’ಗಾಗಿ ಗ್ರ್ಯಾಮಿ ಪ್ರಶಸ್ತಿಯನ್ನು ಸ್ಟೆವರ್ಟ್ ಕೋಪ್ಲ್ಯಾಂಡ್ ಅವರೊಂದಿಗೆ ಹಂಚಿಕೊಂಡಿದ್ದರು.
ಮತ್ತಷ್ಟು ಸಿನಿಮಾ ಸಂಬಂಧಿತ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ