
ಸ್ಯಾಂಡಲ್ವುಡ್ನಲ್ಲಿ ಕೆಲವೇ ಕೆಲವು ಸ್ಟಾರ್ ಹಿರೋಗಳು ಇದ್ದಾರೆ. ಎಲ್ಲರಿಗೂ ದೊಡ್ಡ ಅಭಿಮಾನಿ ಬಳಗ ಇದೆ. ಇದೇ ರೀತಿ ಅವರ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಬಿಸ್ನೆಸ್ ಮಾಡುತ್ತವೆ. ಆದರೆ, ಒಂದು ಹೀರೋ ಬಗ್ಗೆ ಮತ್ತೋರ್ವ ಹೀರೋ ಮಾತನಾಡೋದು ತುಂಬಾನೇ ಕಡಿಮೆ. ಈ ರೀತಿಯ ಅಪರೂಪದ ಘಟನೆಗಳು ಆಗಾಗ ನಡೆಯುತ್ತವೆ. ಈ ಮೊದಲು ಸುದೀಪ್ ಅವರು ಯಶ್ ಬಗ್ಗೆ ಮಾತನಾಡಿದ್ದರು. ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನದ ಸಂದರ್ಭದಲ್ಲಿ ಯಶ್ ಬಗ್ಗೆ ಸುದೀಪ್ ಅಪರೂಪದ ಕಮೆಂಟ್ ಮಾಡಿದ್ದರು.
ಸುದೀಪ್ ಅವರು ಚಿತ್ರರಂಗಕ್ಕೆ ಬಂದು 28 ವರ್ಷಗಳು ಕಳೆದಿವೆ. ಕನ್ನಡ ಮಾತ್ರವಲ್ಲದೆ ತೆಲುಗು, ಹಿಂದಿಯಲ್ಲೂ ಅವರಿಗೆ ಬೇಡಿಕೆ ಇದೆ. ‘ಈಗ’ ಸಿನಿಮಾದಲ್ಲಿ ಸುದೀಪ್ ಅವರು ನೆಗೆಟಿವ್ ಶೇಡ್ನ ಪಾತ್ರ ಮಾಡಿದ್ದರು. ಇನ್ನು, ಯಶ್ ಅವರು ‘ಕೆಜಿಎಫ್ 2’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫೇಮಸ್ ಆಗಿದ್ದಾರೆ. ‘ಕೆಜಿಎಫ್’ ಯಶಸ್ಸಿನ ಬಳಿಕ ಸುದೀಪ್ ಅವರು ಯಶ್ ಬಗ್ಗೆ ಮಾತನಾಡಿದ್ದರು.
‘ಸಿನಿಮಾ ರಂಗ ಬಿಟ್ಟು ಬೇರೆ ಯಾವ ಕ್ಷೇತ್ರಕ್ಕೆ ಈ ನಟರು ಹೊಂದುತ್ತಾರೆ ಅಥವಾ ಬೇರೆ ಯಾವ ಕ್ಷೇತ್ರವನ್ನು ಈ ಹೀರೋಗಳು ಆಯ್ಕೆ ಮಾಡಿಕೊಳ್ಳಬೇಕು’ ಎಂಬ ರೀತಿಯಲ್ಲಿ ಪ್ರಶ್ನೆ ಇತ್ತು. ಈ ವೇಳೆ ಯಶ್ ಹೆಸರನ್ನು ಸಂದರ್ಶಕರು ತೆಗೆದುಕೊಂಡರು. ಆಗ ಸುದೀಪ್ ಕಡೆಯಿಂದ ಈ ರೀತಿಯ ಉತ್ತರ ಬಂದಿತ್ತು.
‘ಯಶ್ ಸಿನಿಮಾ ರಂಗದಲ್ಲೇ ಇರಲಿ. ಬೇರೆ ಕಡೆ ಹೋದರೆ ಪ್ರಪಂಚ ಬದಲಿಸಿ ಬಿಡುತ್ತಾರೆ. ಎಲ್ಲವೂ ಬದಲಾಗಿ ಬಿಡುತ್ತದೆ. ಅವರು ಮಾಡೋದನ್ನು ಮಾಡ್ತಾ ಇರಲಿಲ್ಲ ಅಂದ್ರೆ ಏನಾಗುತ್ತಿತ್ತು ಯೋಚನೆ ಮಾಡಿ. ಸಿನಿಮಾನ, ಬಿಸ್ನೆಸ್ನ ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗಿದ್ದಾರೆ. ಭಾರತ ಚಿತ್ರರಂಗ ಬೇರೆ ಹಂತಕ್ಕೆ ಹೋಗಿದೆ’ ಎಂದು ಸುದೀಪ್ ಅವರು ಯಶ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು.
ಯಶ್ ಹಾಗೂ ಸುದೀಪ್ ಒಟ್ಟಿಗೆ ಸಿನಿಮಾ ಮಾಡಿದರೆ? ಈ ವಿಡಿಯೋ ನೋಡಿದ ಬಳಿಕ ಅಭಿಮಾನಿಗಳಿಗೆ ಹೀಗೊಂದು ಕಲ್ಪನೆಯೂ ಬಂದಿದೆ. ಆಗ ಸಿನಿಮಾದ ಬಜೆಟ್ ಕೂಡ ಹೆಚ್ಚುತ್ತದೆ. ಅಷ್ಟು ದೊಡ್ಡ ಮೊತ್ತದಲ್ಲಿ ಹಣ ಹೂಡಲು ನಿರ್ಮಾಪಕರು ರೆಡಿ ಇರಬೇಕು. ಒಂದೊಮ್ಮೆ ಇವರ ಕಾಂಬಿನೇಷನ್ನಲ್ಲಿ ಸಿನಿಮಾ ಬಂದರೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಸದ್ದು ಮಾಡುತ್ತದೆ.
ಇದನ್ನೂ ಓದಿ: ಅಂಬಾನಿ ಮನೆ ಮದುವೆಗೆ ಏಕೆ ಹೋಗಿಲ್ಲ ಎಂಬ ಬಗ್ಗೆ ಸುದೀಪ್ ಕೊಟ್ಟ ಸ್ಪಷ್ಟನೆಯ ಹಿಂದಿನ ಅಸಲಿಯತ್ತೇನು?
ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಕೆಲಸಗಳನ್ನು ಮುಗಿಸಿದ್ದಾರೆ. ಈ ಚಿತ್ರ ಶೀಘ್ರವೇ ರಿಲೀಸ್ ಆಗಲಿದೆ. ಸದ್ಯ ಅವರು ನಿರೂಪ್ ಭಂಡಾರಿ ಚಿತ್ರದ ಕೆಲಸಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಸಿನಿಮಾದ ಟೀಸರ್ ಗಮನ ಸೆಳೆದಿದೆ. ಇನ್ನು ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಮಲಯಾಳಂನ ಗೀತು ಮೋಹನ್ದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.