ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ (RRR Movie) ಭರ್ಜರಿ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗುತ್ತಿದೆ. ಹಲವು ಭಾಷೆಗಳಲ್ಲಿ ರಿಲೀಸ್ ಆಗಿರುವ ಸಿನಿಮಾಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ರಿಲೀಸ್ ಆದ ಒಂದು ವಾರದಲ್ಲೇ ಭರ್ಜರಿ ಗಳಿಕೆ ಮಾಡಿದೆ. ಈ ಹಿಂದೆ 2015ರಲ್ಲಿ ರಿಲೀಸ್ ಆಗಿದ್ದ ರಾಜಮೌಳಿ ನಿರ್ದೇಶನದ ‘ಬಾಹುಬಲಿ 1’ ಒಟ್ಟು 650 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆ ದಾಖಲೆಯನ್ನು ಕೇವಲ ಏಳೇ ದಿನದಲ್ಲಿ ಪುಡಿಪುಡಿ ಮಾಡಿದೆ ‘ಆರ್ಆರ್ಆರ್’. ಇದು ನಿರ್ದೇಶಕ ರಾಜಮೌಳಿ ಜನಪ್ರಿಯತೆ ಹಾಗೂ ಚಿತ್ರದ ಗಟ್ಟಿತನಕ್ಕೆ ಸಾಕ್ಷಿ ಎಂದು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ‘ಆರ್ಆರ್ಆರ್’ನ ಪಾತ್ರಗಳು ತೆಲುಗು ಮೂಲದ್ದಾದರೂ; ದೇಶಭಕ್ತಿಯ ಕತೆಯಾಗಿರುವುದರಿಂದ ಎಲ್ಲರಿಗೂ ಕನೆಕ್ಟ್ ಆಗಿದೆ. ಜತೆಗೆ ಕುಟುಂಬ ಸಮೇತ ನೋಡುವ ಸಿನಿಮಾವಾಗಿರುವುದರಿಂದ ಜನರು ಚಿತ್ರಮಂದಿರಗಳಿಗೆ ಆಗಮಿಸಿ ಚಿತ್ರ ವೀಕ್ಷಿಸುತ್ತಿದ್ದಾರೆ. ಹಿಂದಿ ಅವತರಣಿಕೆಯಲ್ಲೂ ಚಿತ್ರವು ಕಲೆಕ್ಷನ್ ವಿಚಾರದಲ್ಲಿ ಹಲವು ದಾಖಲೆ ಬರೆದಿದೆ. ಈ ಮೂಲಕ ‘ಆರ್ಆರ್ಆರ್’ ಗಲ್ಲಾಪೆಟ್ಟಿಗೆಯಲ್ಲಿ ಮುನ್ನುಗ್ಗುತ್ತಿದೆ. ಏಳು ದಿನಗಳ ಅವಧಿಯಲ್ಲಿ ಆರ್ಆರ್ಆರ್ ವಿಶ್ವಾದ್ಯಂತ ಸುಮಾರು 709 ಕೋಟಿ ರೂ ಬಾಚಿಕೊಂಡಿದೆ ಎಂದು ವಿಶ್ಲೇಷಿಸಿದ್ದಾರೆ ಬಾಕ್ಸಾಫೀಸ್ ತಜ್ಞರು.
ರಾಮ್ ಚರಣ್ ಹಾಗೂ ಜ್ಯೂ.ಎನ್ಟಿಆರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ‘ಆರ್ಆರ್ಆರ್’ ಮಾರ್ಚ್ 25ರಂದು ತೆರೆಗೆ ಬಂದಿತ್ತು. ಮೊದಲ ದಿನವೇ ಬರೋಬ್ಬರಿ 257 ಕೋಟಿ ರೂಗಳನ್ನು ಚಿತ್ರ ಬಾಚಿಕೊಂಡಿತ್ತು. ಕ್ರಮೇಣ ಚಿತ್ರದ ಗಳಿಕೆ ಇಳಿಕೆಯಾಗುತ್ತಾ ಬಂದರೂ ಕೂಡ, ಉತ್ತಮವಾಗಿಯೇ ಕಲೆಕ್ಷನ್ ಮಾಡುತ್ತಿದೆ. ಇದೀಗ ಚಿತ್ರ ರಿಲೀಸ್ ಆಗಿ ವಾರ ಕಳೆದಿದ್ದು, ಗುರುವಾರದಂದು 37 ಕೋಟಿ ರೂ ಗಳಿಸುವ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ ₹ 709.36 ಕೋಟಿ ರೂಗೆ ತಲುಪಿದೆ. ಎರಡು ಅಥವಾ ಮೂರನೇ ವಾರದಲ್ಲಿ ಚಿತ್ರವು 1000 ಕೋಟಿ ಕ್ಲಬ್ ಸೇರಬಹುದು ಎಂಬ ನಿರೀಕ್ಷೆಯನ್ನು ಹಲವರು ವ್ಯಕ್ತಪಡಿಸಿದ್ದಾರೆ.
‘ಆರ್ಆರ್ಆರ್’ ಬಾಕ್ಸಾಫೀಸ್ ಲೆಕ್ಕಾಚಾರ ಹೀಗಿದೆ:
#RRRMovie WW Box Office
ENTERS ₹700 cr club in just 7 days.
Day 1 – ₹ 257.15 cr
Day 2 – ₹ 114.38 cr
Day 3 – ₹ 118.63 cr
Day 4 – ₹ 72.80 cr
Day 5 – ₹ 58.46 cr
Day 6 – ₹ 50.74 cr
Day 7 – ₹ 37.20 cr
Total – ₹ 709.36 cr— Manobala Vijayabalan (@ManobalaV) April 1, 2022
‘ಆರ್ಆರ್ಆರ್’ ಸಿನಿಮಾದಲ್ಲಿ ಬರುವ ಪಾತ್ರಗಳು ನೈಜವಾದರೂ ಕಥೆ ಕಲ್ಪನೆಯನ್ನು ಒಳಗೊಂಡಿದೆ. ಈ ಫ್ಯಾಂಟಸಿ ಕಥೆಯನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ರಾಮ್ ಚರಣ್ ಹಾಗೂ ಜ್ಯೂ.ಎನ್ಟಿಆರ್ಗೆ ಈ ಚಿತ್ರದಿಂದ ದೊಡ್ಡ ಗೆಲುವು ಸಿಕ್ಕಿದ್ದು, ದೇಶದೆಲ್ಲೆಡೆ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಈ ಚಿತ್ರದ ಪ್ರಚಾರಕ್ಕೆ 40 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಸಿನಿಮಾದ ಬಜೆಟ್ 500 ಕೋಟಿ ರೂಪಾಯಿ ದಾಟಿದೆ ಎಂದು ವರದಿಗಳು ಹೇಳಿದ್ದವು.
ಚಿತ್ರದಲ್ಲಿ ರಾಮ್ ಚರಣ್ ಹಾಗೂ ಜ್ಯೂ.ಎನ್ಟಿಆರ್ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ಆಲಿಯಾ ಭಟ್ ಹಾಗೂ ಅಜಯ್ ದೇವಗನ್ ಮೊದಲಾದ ಬಾಲಿವುಡ್ ತಾರೆಯರು ಬಣ್ಣಹಚ್ಚಿದ್ದಾರೆ.
ಇದನ್ನೂ ಓದಿ:
ಸೋಲಿಲ್ಲದ ಸರದಾರ ರಾಜಮೌಳಿ ಗೆಲುವಿನ ಗುಟ್ಟೇನು? ಇಲ್ಲಿವೆ ‘ಆರ್ಆರ್ಆರ್’ ನಿರ್ದೇಶಕನ 5 ಸೂತ್ರಗಳು