ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ಕ್ಕೆ ಅಭಿಮಾನಿಗಳು ದೀರ್ಘಕಾಲದಿಂದ ಕಾದಿದ್ದಾರೆ. ಅನಿವಾರ್ಯ ಕಾರಣಗಳಿಂದ ಫೆಬ್ರವರಿಯಲ್ಲಿ ರಿಲೀಸ್ ಆಗಬೇಕಿದ್ದ ಚಿತ್ರವನ್ನು ಮುಂದೂಡಲಾಗಿತ್ತು. ಚಿತ್ರತಂಡ ಇನ್ನಷ್ಟೇ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಬೇಕಿದ್ದು, ಅದರ ಬಗ್ಗೆ ಕಾತರ ಮೂಡಿದೆ.
ಈ ನಡುವೆ ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಇದರ ಮೊದಲ ಹಂತವಾಗಿ ಯುಗಾದಿಯ ದಿನ ಅಂದರೆ ಏಪ್ರಿಲ್ 2ರ ಶನಿವಾರದಂದು ಟೀಸರ್ ರಿಲೀಸ್ ಮಾಡುವುದಾಗಿ ಘೋಷಿಸಲಾಗಿದೆ. ಜಾಕ್ವೆಲಿನ್ ಫರ್ನಾಂಡಿಸ್ ಮೊದಲಾದ ತಾರೆಯರು ಕಾಣಿಸಿಕೊಂಡಿರುವ ಚಿತ್ರದ ಟೀಸರ್ ಹೇಗಿರಬಹುದು ಎನ್ನುವ ಕುತೂಹಲದಲ್ಲಿ ಅಭಿಮಾನಿಗಳಿದ್ದಾರೆ.
ವಿಕ್ರಾಂತ್ ರೋಣ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯಾ ಚಿತ್ರವಾಗಿರುವ ಇದಕ್ಕೆ ವಿವಿಧ ಭಾಷೆಗಳ ಹಲವು ತಾರೆಯರು ಜತೆಯಾಗಿದ್ದಾರೆ. ಅರ್ಥಾತ್ ಖ್ಯಾತ ತಾರೆಯರು ತಮ್ಮ ಭಾಷೆಗಳಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್ ಮಾಡಲಿದ್ದಾರೆ.
ವಿಕ್ರಾಂತ್ ರೋಣ ಟೀಸರ್ ಶನಿವಾರ (ಏ.2) ಬೆಳಗ್ಗೆ 9.55ಕ್ಕೆ ರಿಲೀಸ್ ಆಗಲಿದೆ. ಮಲಯಾಳಂನಲ್ಲಿ ಮೋಹನ್ಲಾಲ್ ಟೀಸರ್ ರಿಲೀಸ್ ಮಾಡಲಿದ್ದಾರೆ.
ತಮಿಳಿನಲ್ಲಿ ಖ್ಯಾತ ನಟ ಸಿಲಂಬರಸನ್ ಟಿಆರ್ ‘ವಿಕ್ರಾಂತ್ ರೋಣ' ಟೀಸರ್ ಬಿಡುಗಡೆ ಮಾಡಲಿದ್ದಾರೆ.
ತೆಲುಗು ಭಾಷೆಯ ‘ವಿಕ್ರಾಂತ್ ರೋಣೌ ಟೀಸರ್ ಅನ್ನು ಬಿಡುಗಡೆ ಮಾಡುತ್ತಿರುವವರು ಮೆಗಾಸ್ಟಾರ್ ಚಿರಂಜೀವಿ.
ಬಾಲಿವುಡ್ನಲ್ಲೂ ‘ವಿಕ್ರಾಂತ್ ರೋಣ’ ಅಬ್ಬರಿಸಲಿದ್ದು, ಸಲ್ಮಾನ್ ಖಾನ್ ಟೀಸರ್ ರಿಲೀಸ್ ಮಾಡಲಿದ್ದಾರೆ. ಈ ಬಗ್ಗೆ ಚಿತ್ರತಂಡ ಇಂದು ಮಾಹಿತಿ ಹಂಚಿಕೊಂಡಿದೆ. ಈ ಮೂಲಕ ಟೀಸರ್ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದ್ದು, ವಿವಿಧ ಭಾಷೆಗಳಲ್ಲಿ ಜನರ ಪ್ರತಿಕ್ರಿಯೆ ಹೇಗಿರಬಹುದು ಎಂಬುದು ಕುತೂಹಲ ಸೃಷ್ಟಿಸಿದೆ.
Published On - 2:07 pm, Fri, 1 April 22